ಭಾರತೀಯರ ವಂಶಾವಳಿಯ ಮೂಲ ಯಾವುದೆಂಬ ಬಗ್ಗೆ ವಿಜ್ಞಾನಿಗಳು ಮಹತ್ವದ ಮಾಹಿತಿಯನ್ನು ಕಂಡು ಹಿಡಿದಿದ್ದಾರೆ. ಬುಡಕಟ್ಟು ಮತ್ತು ಜಾತಿಯ ಸಮುದಾಯಗಳು ಸೇರಿದಂತೆ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ವಾಸಿಸುವ ವ್ಯಕ್ತಿಗಳ ಜೀನೋಮ್ ಅನುಕ್ರಮ (Genome Sequencing) ಅಧ್ಯಯನಗಳ ಆಧಾರದ ಮೇಲೆ ಭಾರತೀಯರ ವಂಶಾವಳಿಯ ಮೂಲವನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಎಲಿಸ್ ಕೆರ್ಡೊನ್ಕಫ್ ನೇತೃತ್ವದ ಸಂಶೋಧಕರ ತಂಡವು ಗುರುತಿಸಿದೆ.
ಸಂಶೋಧನೆಯಲ್ಲಿ ಸುಮಾರು 2700 ವೈಯಕ್ತಿಕ ಮಾದರಿಗಳನ್ನು ಆಧರಿಸಿದ ದತ್ತಾಂಶವನ್ನು ಅಧ್ಯಯನ ಮಾಡಲಾಗಿದ್ದು, ಭಾರತೀಯರ ವಂಶಾವಳಿಯು ಹೆಚ್ಚಾಗಿ ಮೂರು ಮೂಲಭೂತ ಪೂರ್ವಜರ ಗುಂಪುಗಳಿಂದ ಬಂದಿದೆ ಎಂಬುದು ತಿಳಿದು ಬಂದಿದೆ. ಅವು ಯಾವುವೆಂದರೆ: ಮೊದಲನೆಯದಾಗಿ ಪ್ರಾಚೀನ ಇರಾನಿನ ರೈತರು, ಎರಡನೆಯದಾಗಿ ಯುರೇಷಿಯನ್ ಹುಲ್ಲುಗಾವಲುಗಳಲ್ಲಿನ ಪಶುಪಾಲಕರು ಮತ್ತು ಮೂರನೆಯದಾಗಿ ದಕ್ಷಿಣ ಏಷ್ಯಾದ ಬೇಟೆಗಾರರು.
ಇದಲ್ಲದೆ ಆರ್ವಾಚೀನ ಇತಿಹಾಸವನ್ನು ನೋಡುವುದಾದರೆ ಭಾರತೀಯರ ಆನುವಂಶಿಕ ವಂಶಾವಳಿಯು ನಿಯಾಂಡರ್ತಲ್ಗಳು ಮತ್ತು ಡೆನಿಸೋವನ್ಗಳ ಆನುವಂಶಿಕ ವಂಶಾವಳಿಯೊಂದಿಗೆ ಸಂಬಂಧ ಹೊಂದಿದೆ. ಈ ಮಾನವ ಪ್ರಬೇಧಗಳು ಸುಮಾರು 40,000 ವರ್ಷಗಳ ಹಿಂದೆ ವಾಸಿಸುತ್ತಿದ್ದ, ಈಗ ಅಸ್ತಿತ್ವದಲ್ಲಿ ಇಲ್ಲದ ಮಾನವ ಉಪಜಾತಿಗಳಿಗೆ ಸೇರಿವೆ. ಈ ಸಂಶೋಧನೆಯು ಹಲವಾರು ಆಶ್ಚರ್ಯಕರ ಸಂಗತಿಗಳನ್ನು ಬಯಲು ಮಾಡಿದೆ.
ಭಾರತೀಯರು 'ನಿಯಾಂಡರ್ತಲ್ ವಂಶಾವಳಿಯಲ್ಲಿ ಅತಿದೊಡ್ಡ ವ್ಯತ್ಯಾಸವನ್ನು ಹೊಂದಿದ್ದಾರೆ' ಮತ್ತು ಭಾರತೀಯರಲ್ಲಿನ ಹೆಚ್ಚಿನ ಆನುವಂಶಿಕ ವ್ಯತ್ಯಾಸವು ಸುಮಾರು 50,000 ವರ್ಷಗಳ ಹಿಂದೆ ಆಫ್ರಿಕಾದಿಂದ ಒಂದೇ ಪ್ರಮುಖ ವಲಸೆಯಿಂದ ಹರಿದು ಬಂದಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆ ಪ್ರಾಚೀನ ಸೋದರಸಂಬಂಧಿಗಳ ಯಾವುದೇ ಪಳೆಯುಳಿಕೆ ಪುರಾವೆಗಳು ಭಾರತದಲ್ಲಿ ಇಲ್ಲಿಯವರೆಗೆ ಕಂಡುಬಂದಿಲ್ಲವಾದ್ದರಿಂದ ಇದು ಆಶ್ಚರ್ಯಕರವಾಗಿದೆ. ಆದ್ದರಿಂದ, ಇತರ ಖಂಡಗಳಿಂದ ಲಭ್ಯವಿರುವ ಮಾನವ ಜೀನೋಮ್ ಅನುಕ್ರಮಗಳಿಗೆ ಹೋಲಿಸಿದರೆ ಭಾರತದಲ್ಲಿ ಚಾಲ್ತಿಯಲ್ಲಿರುವ ನಿಕಟ ಸಂಬಂಧಿಕರು-ವಿವಾಹ ಸಂಪ್ರದಾಯಗಳು ಭಾರತೀಯ ಜೀನ್ ಗಳಲ್ಲಿ ನಿಯಾಂಡರ್ತಲ್ ಡಿಎನ್ಎ ಮಸುಕಾಗಲು ಅನುಕೂಲ ಮಾಡಿಕೊಟ್ಟಿರಬಹುದು ಎಂಬ ಸಾಧ್ಯತೆಯನ್ನು ಸಂಶೋಧಕರು ತಳ್ಳಿಹಾಕುವುದಿಲ್ಲ.
ವೈದಿಕ ಆರ್ಯರು ಸಿಂಧೂ ಕಣಿವೆ ಪ್ರದೇಶದ ಸ್ಥಳೀಯರಾಗಿದ್ದರು ಮತ್ತು 20,000 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಕ್ರಿಯರಾಗಿದ್ದರು ಎಂಬ ಆಧಾರದ ಮೇಲಿನ ಭಾರತೀಯ ವಂಶಾವಳಿಯ ಸಿದ್ಧಾಂತವನ್ನು ಈ ಅಧ್ಯಯನದ ಫಲಿತಾಂಶಗಳು ಸುಳ್ಳು ಎಂದು ನಿರೂಪಿಸುತ್ತವೆ. ಹಿಂದಿನ ವ್ಯಾಖ್ಯಾನದ ಪ್ರಕಾರ, ವೈದಿಕ ಆರ್ಯರು ಪಶ್ಚಿಮಕ್ಕೆ ವಿಸ್ತರಿಸುವ ಮೂಲಕ ಪ್ರಪಂಚದಾದ್ಯಂತ ಸಂಸ್ಕೃತಿಯ ಪಿತಾಮಹರಾದರು ಎಂದು ಹೇಳಲಾಗಿದೆ.
ಈ ಹಿಂದೆ ಪ್ರಚಾರ ಮಾಡಲಾದ ಈ 'ಭಾರತದಿಂದ ಹೊರಗಿನ' ಸಿದ್ಧಾಂತವು ವೈಜ್ಞಾನಿಕ ಮತ್ತು ಸಮಾಜಶಾಸ್ತ್ರೀಯ ಅಧ್ಯಯನಗಳ ವರ್ಣಪಟಲದಿಂದ ಉತ್ಪತ್ತಿಯಾದ ಲಭ್ಯವಿರುವ ಎಲ್ಲಾ ಪುರಾವೆಗಳ ಎದುರು ಮಸುಕಾಗುತ್ತದೆ. ಸ್ಥಳೀಯ ಆರ್ಯವಾದ ಮತ್ತು ಭಾರತದಿಂದ ಹೊರಗಿರುವ ಸಿದ್ಧಾಂತವು ವಲಸೆ ಮಾದರಿಗೆ ಪರ್ಯಾಯವಾಗಿ ಪ್ರಚಾರ ಮಾಡಲಾದ ನಂಬಿಕೆಯಾಗಿದೆ, ಇದು ಮಧ್ಯ ಏಷ್ಯಾದ ಪೊಂಟಿಕ್-ಕ್ಯಾಸ್ಪಿಯನ್ ಸ್ಟೆಪ್ಪಿಯನ್ನು ಆರ್ಯರು ಮತ್ತು ಇಂಡೋ-ಯುರೋಪಿಯನ್ ಭಾಷೆಯ ಮೂಲವೆಂದು ಪರಿಗಣಿಸುತ್ತದೆ.
ಈ ಅಧ್ಯಯನದ ಫಲಿತಾಂಶಗಳನ್ನು 2019ರಲ್ಲಿ ಸೆಲ್ ಮತ್ತು ಯುರೋಪಿಯನ್ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್ ಜರ್ನಲ್ ಗಳಲ್ಲಿ ಪ್ರಕಟವಾದ ಎರಡು ವೈಜ್ಞಾನಿಕ ಪ್ರಬಂಧಗಳು ಸಮರ್ಥಿಸುತ್ತವೆ. ಅವರು ಪೊಂಟಿಕ್-ಕ್ಯಾಸ್ಪಿಯನ್ ಸ್ಟೆಪ್ಪಿಗಳಿಂದ ಬೇಟೆಗಾರ-ಸಂಗ್ರಹಕಾರರು, ಇರಾನಿನ ರೈತರು ಮತ್ತು ಕುರಿಗಾಹಿಗಳ ಆನುವಂಶಿಕ ಹಾದಿಯನ್ನು ಪಟ್ಟಿ ಮಾಡುತ್ತಾರೆ ಮತ್ತು ಅವರು ವಿಶ್ವದ ಕೆಲವು ಆರಂಭಿಕ ನಾಗರಿಕತೆಗಳ ನಿರ್ಮಾತೃಗಳಾಗಿ ಹೇಗೆ ಬೆರೆತಿರಬಹುದು ಎಂಬುದನ್ನು ಇವು ವಿವರಿಸುತ್ತವೆ.
ವಸಂತ್ ಶಿಂಧೆ ಮತ್ತು ಇತರರು 2019 ರ ಅಕ್ಟೋಬರ್ 17 ರಂದು ಬರೆದ “A Harappan Genome Lacks Ancestry from Steppe Pastoralists or Iranian Farmers” ಎಂಬ ಶೀರ್ಷಿಕೆಯ ಒಂದು ಪ್ರಬಂಧವು ಜೀನೋಮಿಕ್ ವಿಶ್ಲೇಷಣೆಯ ಮೂಲಕ ಸಿಂಧೂ ಕಣಿವೆಯಲ್ಲಿ ನೆಲೆಸಿದ ಜನರ ವಂಶಾವಳಿಯನ್ನು ಪತ್ತೆಹಚ್ಚಿದೆ.
ಹರಪ್ಪನ್ ಅವಧಿಯ ಉತ್ತರಾರ್ಧದಲ್ಲಿ, ಋಗ್ವೇದ ಜನರು ಭಾರತೀಯ ಉಪಖಂಡವನ್ನು ಪ್ರವೇಶಿಸಿದರು ಎಂದು ತಜ್ಞರು ಸಾಮಾನ್ಯವಾಗಿ ಒಪ್ಪುತ್ತಾರೆ. ಈ ಗ್ರಾಮೀಣ ವಲಸಿಗರು ಮತ್ತು ಅವರ ಮೇಯಿಸುವ ಪ್ರಾಣಿಗಳು ಪಶ್ಚಿಮದಿಂದ ಸಿಂಧೂ ಕಣಿವೆ ಪ್ರದೇಶಕ್ಕೆ ಹಂತಹಂತವಾಗಿ ಬಂದವು.
ಮೈಟೋಕಾಂಡ್ರಿಯಲ್ ಡಿಎನ್ಎ ಅಧ್ಯಯನಗಳು ವಿಭಿನ್ನ ಕಥೆಯನ್ನು ಹೇಳುತ್ತವೆ. ಬಾಹ್ಯ ವಲಸೆ ಸಂಭವಿಸಲಿಲ್ಲ ಎಂದು ಇವು ಹೇಳುತ್ತವೆ. ಬದಲಾಗಿ, ಭಾರತದ ವಿವಿಧ ಭಾಗಗಳಲ್ಲಿ ಹರಡಿರುವ ಕೆಲವು ಸಾಮಾಜಿಕ ಗುಂಪುಗಳು ಪೂರ್ವ ಯುರೋಪಿಯನ್ನರೊಂದಿಗೆ ಸಾಮಾನ್ಯ ಆನುವಂಶಿಕ ಪೂರ್ವಜರ ವಂಶಾವಳಿಯನ್ನು (designated haplogroup R1a1a) ಹಂಚಿಕೊಳ್ಳುತ್ತವೆ ಎಂದು ಇವು ತಿಳಿಸುತ್ತವೆ.
ಹೊಸ ಆರ್ಕಿಯೋಜೆನೆಟಿಕ್ ದಾಖಲೆಗಳು ಸುಮಾರು 14,000 ವರ್ಷಗಳ ಹಿಂದೆ ಯುರೇಷಿಯನ್ ಸ್ಟೆಪ್ಪಿಯಲ್ಲಿ ಹ್ಯಾಪ್ಲೋಗ್ರೂಪ್ ಆರ್ 1 ಎ ಯಿಂದ ಹ್ಯಾಪ್ಲೋಗ್ರೂಪ್ ಆರ್ 1 ಎ ಯಿಂದ ರೂಪಾಂತರಗೊಂಡಿದೆ ಎಂದು ಸೂಚಿಸುತ್ತವೆ. ಹೀಗಾಗಿ, ಈ ಅಧ್ಯಯನಗಳು 'ಪೂರ್ವ ಯುರೋಪಿಯನ್ ಸ್ಟೆಪ್ಪಿಸ್' ಸಿದ್ಧಾಂತವನ್ನು ಬೆಂಬಲಿಸುತ್ತವೆ. ಇಂಡೋ-ಯುರೋಪಿಯನ್ ಭಾಷೆಗಳ ಮೂಲ ರೂಪವನ್ನು ಮೊದಲು ಪೂರ್ವ ಯುರೋಪ್ ನಲ್ಲಿ ಮಾತನಾಡಲಾಯಿತು. ಇದೇ 'ಮೂಲ' ತಾಯ್ನಾಡು ಎಂದು ಹೇಳಲಾಗಿದೆ.
ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಎಲಿಸ್ ಕೆರ್ಡೊನ್ಕಫ್ ಮತ್ತು ಅವರ ಸಹೋದ್ಯೋಗಿಗಳ ಹೊಸ ಅಧ್ಯಯನವು 2700 ಕ್ಕೂ ಹೆಚ್ಚು ಆಧುನಿಕ ಪ್ರಾತಿನಿಧಿಕ ಭಾರತೀಯ ಜೀನೋಮ್‌ಗಳನ್ನು ಅನುಕ್ರಮಗೊಳಿಸುವ ಮೂಲಕ ಆ ಪೂರ್ವಜರ ಗುಂಪುಗಳ ಮೂಲವನ್ನು ದೃಢಪಡಿಸಿದೆ. ಸಂಶೋಧಕರು ಇರಾನಿನ ಪೂರ್ವಜರ ಗುಂಪುಗಳಿಂದ ಈ ಹಿಂದೆ ಹೊರತೆಗೆದ ಪ್ರಾಚೀನ ಡಿಎನ್ಎಯನ್ನು ವಿಶ್ಲೇಷಿಸಿ ಅದನ್ನು ಆಧುನಿಕ ಭಾರತೀಯರ ಜೀನ್ ಗಳೊಂದಿಗೆ ಹೋಲಿಕೆ ಮಾಡಿದ್ದಾರೆ. ಆಶ್ಚರ್ಯಕರವಾಗಿ ವಾಯುವ್ಯ ತಜಕಿಸ್ತಾನದ ಸರಾಜ್ಮ್ ಪ್ರದೇಶದ ರೈತರೊಂದಿಗೆ ಈ ಜೀನ್ಗಳು ಉತ್ತಮವಾಗಿ ಹೋಲಿಕೆಯಾಗಿವೆ. ಇಲ್ಲಿನ ರೈತರು ಗೋಧಿ ಮತ್ತು ಬಾರ್ಲಿಯನ್ನು ಬೆಳೆಯುತ್ತಿದ್ದರು, ಜಾನುವಾರುಗಳನ್ನು ಸಾಕುತ್ತಿದ್ದರು ಮತ್ತು ಯುರೇಷಿಯಾದ್ಯಂತ ವ್ಯಾಪಕವಾಗಿ ವ್ಯಾಪಾರ ಮಾಡುತ್ತಿದ್ದರು.
ಸರಾಜ್ಮ್ ಪ್ರದೇಶದ ಪ್ರಾಚೀನ ವ್ಯಕ್ತಿಯ ಡಿಎನ್ಎ ಕೂಡ ಭಾರತೀಯ ವಂಶಾವಳಿಯ ಕುರುಹುಗಳನ್ನು ಹೊಂದಿತ್ತು. ಕುತೂಹಲಕಾರಿಯಾಗಿ, ಪುರಾತತ್ವಶಾಸ್ತ್ರಜ್ಞರು ಸರಾಜ್ಮ್ ಸಮಾಧಿ ಸ್ಥಳಗಳಿಂದ ಪ್ರಾಚೀನ ಭಾರತೀಯ ಸೆರಾಮಿಕ್ ಬ್ರೇಸ್ಲೆಟ್ ಗಳ ಕುರುಹುಗಳನ್ನು ಹೊರತೆಗೆಯಲು ಸಾಧ್ಯವಾಯಿತು. ಇದು ಆ ದಿನಗಳಲ್ಲಿ ಭಾರತದ ಕಡೆಯಿಂದ ವ್ಯಾಪಾರ ಮತ್ತು ಸಂಬಂಧಗಳು ನಡೆಯುತ್ತಿದ್ದವು ಎಂಬುದರ ಸೂಚನೆಯಾಗಿದೆ. ಕ್ರಿ.ಪೂ 4ನೇ ಸಹಸ್ರಮಾನದಿಂದ ಕ್ರಿ.ಪೂ 3ನೇ ಸಹಸ್ರಮಾನದ ಅಂತ್ಯದವರೆಗೆ ಈ ಪ್ರದೇಶದಲ್ಲಿ ಪ್ರೋಟೋ-ನಗರೀಕರಣದ ಆರಂಭಿಕ ಏರಿಕೆಯನ್ನು ಸರಾಜ್ಮ್ ಪ್ರೋಟೋ-ಅರ್ಬನ್ ಸೈಟ್ ಚಿತ್ರಿಸುತ್ತದೆ. ಮಧ್ಯ ಏಷ್ಯಾದಾದ್ಯಂತ ದೂರದವರೆಗೆ ಅಂತರ-ಪ್ರಾದೇಶಿಕ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯಗಳ ಅಸ್ತಿತ್ವವನ್ನು ಸರಾಜ್ಮ್ ಪ್ರದರ್ಶಿಸುತ್ತದೆ.
74,000 ವರ್ಷಗಳ ಹಿಂದೆ ಸುಮಾತ್ರಾ ದ್ವೀಪದಲ್ಲಿ ಟೋಬಾ ಜ್ವಾಲಾಮುಖಿ ಸ್ಫೋಟಗೊಳ್ಳುವ ಮೊದಲು ಅಥವಾ ನಂತರ ಆಧುನಿಕ ಮಾನವರು ಆಫ್ರಿಕಾದಿಂದ ಮೊದಲ ಬಾರಿಗೆ ಭಾರತೀಯ ಉಪಖಂಡಕ್ಕೆ ಬಂದಿರಬಹುದು ಎಂದು ಪುರಾತತ್ವ ಪುರಾವೆಗಳು ಸೂಚಿಸುತ್ತವೆ. ಮಧ್ಯಪ್ರದೇಶದ ಸೋನ್ ನದಿ ಕಣಿವೆಯ ಸ್ಥಳದಿಂದ ಕಲ್ಲಿನ ಉಪಕರಣಗಳನ್ನು ಪುರಾತತ್ವಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ.
ಇದು ಕಳೆದ 80,000 ವರ್ಷಗಳಿಂದ ಈ ಸ್ಥಳದಲ್ಲಿ ನಿರಂತರ ಮಾನವ ವಾಸದ ಪುರಾವೆಯಾಗಿದೆ. ಉಪಕರಣ ತಂತ್ರಜ್ಞಾನದ ಹೋಲಿಕೆಗಳು ಆಫ್ರಿಕಾದಿಂದ ಭಾರತಕ್ಕೆ ಮಾನವರು ಪೂರ್ವಕ್ಕೆ ಹರಡಿದ ಆರಂಭಿಕ ವಾದವನ್ನು ಬೆಂಬಲಿಸುತ್ತವೆ, ಇದನ್ನು ಈಗ ಆನುವಂಶಿಕ ಅಧ್ಯಯನಗಳು ಸಹ ಬೆಂಬಲಿಸುತ್ತವೆ.
ಹೊಸ ಪ್ರಬಂಧದ ಪ್ರಕಾರ, ಕೆಲವು ಬಲವಾದ ಕ್ರೋಮೋಸೋಮ್ ವಂಶಾವಳಿಗಳು ಅಂಡಮಾನ್ ದ್ವೀಪಗಳ ಜನರಲ್ಲಿ ಸುರಕ್ಷಿತವಾಗಿ ಸಾಗಿ ಬಂದಿವೆ. ಭಾರತೀಯ ಜನಸಂಖ್ಯೆಯು ಆಫ್ರಿಕಾ, ಪಶ್ಚಿಮ ಏಷ್ಯಾ, ಆಗ್ನೇಯ ಏಷ್ಯಾದ ಕೆಲವು ಭಾಗಗಳಿಂದ ಪ್ರಮುಖ ವಲಸೆ ಗುಂಪುಗಳು ಮತ್ತು ಮಧ್ಯ ಏಷ್ಯಾದ ಸ್ಟೆಪ್ಪಿಗಳಿಂದ ಬಂದ ಕುರಿಗಾಹಿಗಳು ಹೊಂದಿರುವ ಜೀಣುಗಳ ಮಿಶ್ರಣವನ್ನು ಹೊಂದಿದೆ ಎಂಬ ಅಂಶದ ಬಗ್ಗೆ ವೈಜ್ಞಾನಿಕ ಪುರಾವೆಗಳು ಸ್ಪಷ್ಟವಾಗಿವೆ.
ಆನುವಂಶಿಕ ಅಧ್ಯಯನಗಳು ಇತ್ತೀಚೆಗೆ ನಮಗೆ ಬೃಹತ್ ದತ್ತಾಂಶಗಳನ್ನು ಒದಗಿಸಿವೆ ಮತ್ತು ಮಾನವ ಪ್ರಭೇದಗಳು ವಿವಿಧ ಜನಸಂಖ್ಯಾ ಗುಂಪುಗಳ ನಡುವೆ ಮಾತ್ರವಲ್ಲದೆ ಒಂದು ಹಂತದಲ್ಲಿ, ಈಗ ಅಳಿದುಹೋಗಿರುವ ನಿಯಾಂಡರ್ತಲ್ಗಳು ಮತ್ತು ಡೆನಿಸೋವನ್ಗಳಂತಹ ಪ್ರಾಚೀನ ಹೋಮಿನಿನ್ ಜಾತಿಗಳೊಂದಿಗೆ ಬೆರೆಯುವ ಮತ್ತು ಪರಸ್ಪರ ಸಂತಾನೋತ್ಪತ್ತಿ ಪ್ರಕ್ರಿಯೆಯಿಂದ ವಿಕಸನಗೊಳ್ಳುತ್ತವೆ ಎಂಬ ಅಂಶವನ್ನು ಸಾಬೀತುಪಡಿಸಿವೆ. ಆನುವಂಶಿಕ ವೈವಿಧ್ಯತೆಯು ಉಳಿವಿಗಾಗಿ ಹೆಚ್ಚಿದ ಫಿಟ್ ನೆಸ್ ನೊಂದಿಗೆ ಸಂಬಂಧಿಸಿದೆ ಮತ್ತು ವಿಕಸನೀಯ ದೃಷ್ಟಿಕೋನದಿಂದ ಇದು ಸಕಾರಾತ್ಮಕ ಗುಣಲಕ್ಷಣವಾಗಿದೆ.
(ಲೇಖನ: ಸಿ.ಪಿ.ರಾಜೇಂದ್ರನ್, ಸಹಾಯಕ ಪ್ರಾಧ್ಯಾಪಕರು, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್)
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಬೆಳವಣಿಗೆಗೆ ಕೈಗಾರಿಕಾ ಸಚಿವಾಲಯದ ಪಾತ್ರ: ಒಂದು ಅವಲೋಕನ