ಡಮಾಸ್ಕಸ್: ನಿರಂತರ ಒಂದು ವಾರ ಕಾಲ ಹೋರಾಟದ ನಂತರ ಸಿರಿಯಾ ರಾಜಧಾನಿ ಡಮಾಸ್ಕಸ್ ಮೇಲೆ ಸಿರಿಯನ್ ಬಂಡುಕೋರ ಪಡೆಗಳು ಸಂಪೂರ್ಣ ನಿಯಂತ್ರಣ ಸಾಧಿಸಿವೆ. ಸರ್ಕಾರಿ ಪಡೆಗಳು ತಮಗೆ ಯಾವುದೇ ಪ್ರತಿರೋಧ ಒಡ್ಡಲಿಲ್ಲ ಎಂದು ಬಂಡುಕೋರ ಪಡೆಗಳು ಹೇಳಿಕೊಂಡಿವೆ. ಏತನ್ಮಧ್ಯೆ ಅಧ್ಯಕ್ಷ ಬಶರ್ ಅಲ್- ಅಸಾದ್ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.
24 ವರ್ಷಗಳ ಕಾಲ ದೇಶವನ್ನು ತನ್ನ ಬಿಗಿ ಹಿಡಿತದಲ್ಲಿಟ್ಟುಕೊಂಡಿದ್ದ ಅಸ್ಸಾದ್ ವಿಮಾನದಲ್ಲಿ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ ಎಂದು ಹಿರಿಯ ಸಿರಿಯನ್ ಮಿಲಿಟರಿ ಅಧಿಕಾರಿಗಳು ರಾಯಿಟರ್ಸ್ಗೆ ತಿಳಿಸಿದ್ದಾರೆ. ಸಿರಿಯಾದಲ್ಲಿ ಅಸ್ಸಾದ್ ಆಡಳಿತ ಕೊನೆಗೊಂಡಿದೆ ಸೇನಾ ಕಮಾಂಡ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
"ದಬ್ಬಾಳಿಕೆಯ ಆಡಳಿತಗಾರ ಬಶರ್ ಅಲ್-ಅಸ್ಸಾದ್ ಪಲಾಯನ ಮಾಡಿದ್ದಾರೆ. ನಾವು ಡಮಾಸ್ಕಸ್ ಅನ್ನು ಬಶರ್ ಅಲ್-ಅಸ್ಸಾದ್ನ ನಿರಂಕುಶ ಆಡಳಿತದಿಂದ ಮುಕ್ತಗೊಳಿಸಿದ್ದೇವೆ" ಎಂದು ಬಂಡುಕೋರರು ಘೋಷಿಸಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
"ಇವತ್ತು 12-08-2024 ರಂದು ಕರಾಳ ಯುಗದ ಅಂತ್ಯ ಹಾಗೂ ಸಿರಿಯಾದಲ್ಲಿ ಹೊಸ ಯುಗದ ಆರಂಭವನ್ನು ನಾವು ಘೋಷಿಸುತ್ತಿದ್ದೇವೆ" ಎಂದು ಬಂಡುಕೋರ ಪಡೆಗಳ ನೇತೃತ್ವ ವಹಿಸಿರುವ ಹಯಾತ್ ತಹ್ರಿರ್ ಅಲ್-ಶಾಮ್ ಬಣ ಹೇಳಿದೆ.
ಸಿರಿಯನ್ ಮಿಲಿಟರಿ ಮತ್ತು ಭದ್ರತಾ ಪಡೆಗಳು ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂದೆ ಸರಿದಿವೆ ಎಂದು ಬ್ರಿಟನ್ ಮೂಲದ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಬಂಡುಕೋರರ ದಾಳಿಯ ಮಧ್ಯೆ ಅಧಿಕಾರಿಗಳು ಮತ್ತು ಸೈನಿಕರು ವಿಮಾನ ನಿಲ್ದಾಣವನ್ನು ತೊರೆದಿದ್ದಾರೆ ಎಂದು ಸಿರಿಯಾದೊಳಗಿನ ಮೂಲಗಳನ್ನು ಉಲ್ಲೇಖಿಸಿ ಯುದ್ಧ ಮಾನಿಟರ್ (The war monitor) ವರದಿ ಮಾಡಿದೆ.
ರಾಜಧಾನಿಯಲ್ಲಿ ಆತಂಕ ಆವರಿಸಿದ್ದು, ನಗರದಲ್ಲಿ ಗುಂಡಿನ ದಾಳಿ ನಡೆಯುತ್ತಿವೆ ಮತ್ತು ಅಸ್ಸಾದ್ ಸರ್ಕಾರ ಪತನಗೊಳ್ಳುವ ನಿರೀಕ್ಷೆಯಿಂದ ಆಡಳಿತದ ನಿಷ್ಠಾವಂತರು ಕೂಡ ಪಲಾಯನ ಮಾಡಲು ಧಾವಿಸುತ್ತಿದ್ದಾರೆ ಎಂದು ವೀಕ್ಷಣಾಲಯ ಮತ್ತು ಎಎಫ್ಪಿ ವರದಿ ಮಾಡಿವೆ.
ದಣಿದ ಹೋರಾಟಗಾರರು ಗೆಲುವು ಲಭಿಸಿದ ಖುಷಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು ದೂರದರ್ಶನ ದೃಶ್ಯಾವಳಿಗಳು ತೋರಿಸಿವೆ. ಅಲ್ಲಲ್ಲಿ ಜನತೆ ಟ್ಯಾಂಕ್ಗಳ ಮೇಲೆ ಹತ್ತಿ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಅಧ್ಯಕ್ಷ ಬಶರ್ ಅಸ್ಸಾದ್ ಅವರ ಆಡಳಿತ ಕೊನೆಗೊಂಡಿದೆ ಎಂದು ಮಸೀದಿಗಳಲ್ಲಿ ಘೋಷಿಸಲಾಗುತ್ತಿದ್ದು, ಬಶರ್ ಅವರ ಪ್ರತಿಮೆಯೊಂದನ್ನು ಉರುಳಿಸಲಾಗಿದೆ. ಡಮಾಸ್ಕಸ್ ನ ಉತ್ತರಕ್ಕಿರುವ ಕುಖ್ಯಾತ ಸಯದ್ನಾಯಾ ಮಿಲಿಟರಿ ಜೈಲಿಗೆ ಪ್ರವೇಶಿಸಿ ಅಲ್ಲಿನ ಕೈದಿಗಳನ್ನು ಬಿಡುಗಡೆ ಮಾಡಿರುವುದಾಗಿ ಬಂಡುಕೋರರು ಘೋಷಿಸಿದ್ದಾರೆ.
ಇದನ್ನೂ ಓದಿ : ಬಂಡುಕೋರರ ವಶಕ್ಕೆ ಸಿರಿಯಾದ 2ನೇ ಅತಿದೊಡ್ಡ ನಗರ ಹಮಾ: ಅಧ್ಯಕ್ಷ ಬಶರ್ಗೆ ಮತ್ತೊಂದು ಹಿನ್ನಡೆ