ವಾಶಿಂಗ್ಟನ್(ಯುಎಸ್‌ಎ): ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರವು ನ್ಯಾಯಾಂಗವನ್ನು ಅಸ್ತ್ರವನ್ನಾಗಿಸಿಕೊಂಡು ಅವಾಮಿ ಲೀಗ್ ನಾಯಕರ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ ಎಂದು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೆದ್ ಆರೋಪಿಸಿದ್ದಾರೆ.
ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವಂತೆ ಕೋರಿ ನವದೆಹಲಿಗೆ ರಾಜತಾಂತ್ರಿಕ ಟಿಪ್ಪಣಿಯನ್ನು ಕಳುಹಿಸಲಾಗಿದೆ ಎಂದು ಅಲ್ಲಿನ ಮಧ್ಯಂತರ ಸರ್ಕಾರ ಸೋಮವಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಹಸೀನಾ ಅವರ ಪುತ್ರ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಮ್ಮ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.
The judges and prosecutors appointed by unelected Yunus led regime to conduct farcical trial process trough International Crimes Tribunal makes it a political witch hunt that forsakes justice and marks another ongoing onslaught to persecute Awami League leadership.
— Sajeeb Wazed (@sajeebwazed) December 23, 2024
The…
ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಬೃಹತ್ ಹೋರಾಟದಿಂದಾಗಿ 16 ವರ್ಷಗಳಿಂದ ಅಧಿಕಾರದಲ್ಲಿದ್ದ ತಮ್ಮ ಸರ್ಕಾರ ಪತನದ ನಂತರ 77 ವರ್ಷದ ಹಸೀನಾ ಆಗಸ್ಟ್ 5ರಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಹಸೀನಾ ಮತ್ತು ಹಲವಾರು ಮಾಜಿ ಕ್ಯಾಬಿನೆಟ್ ಮಂತ್ರಿಗಳು, ಸಲಹೆಗಾರರು, ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳ ವಿರುದ್ಧ ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧಕ್ಕಾಗಿ ಬಂಧನ ವಾರಂಟ್ ಹೊರಡಿಸಿದೆ.
"ಜನರಿಂದ ಚುನಾಯಿತವಾಗದ ಯೂನುಸ್ ನೇತೃತ್ವದ ಆಡಳಿತವು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ ಮೂಲಕ ಹಾಸ್ಯಾಸ್ಪದ ವಿಚಾರಣೆಗೆ ಮುಂದಾಗಿದ್ದು, ಯೂನುಸ್ ಆಡಳಿತವು ನೇಮಿಸಿದ ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟರ್ಗಳು ಅನ್ಯಾಯದ ರಾಜಕೀಯ ಬೇಟೆ ನಡೆಸಲಿದ್ದಾರೆ ಮತ್ತು ಇದು ಅವಾಮಿ ಲೀಗ್ ನಾಯಕತ್ವವನ್ನು ಹಿಂಸಿಸಲು ನಡೆಯುತ್ತಿರುವ ಮತ್ತೊಂದು ದಾಳಿಯಾಗಿದೆ" ಎಂದು ವಾಜೆದ್ ಮಂಗಳವಾರ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
"ಅವಾಮಿ ಲೀಗ್ನ ನೂರಾರು ನಾಯಕರು ಮತ್ತು ಕಾರ್ಯಕರ್ತರನ್ನು ಕಾನೂನುಬಾಹಿರವಾಗಿ ಕೊಲ್ಲಲಾಗುತ್ತಿದೆ, ಅವರ ವಿರುದ್ಧ ಸುಳ್ಳು ಕೊಲೆ ಆರೋಪಗಳನ್ನು ಹೊರಿಸಲಾಗುತ್ತಿದೆ, ಕಾನೂನು ದುರ್ಬಳಕೆಯ ಮೂಲಕ ಸಾವಿರಾರು ಜನರನ್ನು ಅಕ್ರಮವಾಗಿ ಬಂಧನದಲ್ಲಿರಿಸಲಾಗಿದೆ ಮತ್ತು ಲೂಟಿ ವಿಧ್ವಂಸಕತೆ ಮತ್ತು ಅಗ್ನಿಸ್ಪರ್ಶ ಸೇರಿದಂತೆ ಪ್ರತಿದಿನ ಹಿಂಸಾತ್ಮಕ ದಾಳಿಗಳು ನಡೆಯುತ್ತಿವೆ. ಇದೆಲ್ಲವನ್ನು ನಿರ್ಲಕ್ಷಿಸಿ ಕಾಂಗರೂ ಮಾದರಿಯ ನ್ಯಾಯಮಂಡಳಿಯು ಈಗ ಹಸ್ತಾಂತರದ ಮನವಿ ಸಲ್ಲಿಸಿದೆ" ಎಂದು ಅವರು ಹೇಳಿದ್ದಾರೆ.
ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ನಿಂದ 'ಮೌಖಿಕ ಟಿಪ್ಪಣಿ' (note verbale) ಅಥವಾ ರಾಜತಾಂತ್ರಿಕ ಸಂವಹನ ಬಂದಿರುವುದನ್ನು ಸೋಮವಾರ ಭಾರತ ದೃಢಪಡಿಸಿದೆಯಾದರೂ ಆದರೆ ಅದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಭಾರತ-ಬಾಂಗ್ಲಾದೇಶ ಹಸ್ತಾಂತರ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ, ಅಪರಾಧವು ರಾಜಕೀಯ ಸ್ವರೂಪ ಹೊಂದಿದ್ದರೆ ಹಸ್ತಾಂತರವನ್ನು ನಿರಾಕರಿಸಬಹುದು. ಬಾಂಗ್ಲಾದೇಶದ ವಿದೇಶಾಂಗ ಸಚಿವ ತೌಹಿದ್ ಹುಸೇನ್ ಮಾತನಾಡಿ, ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸುವ ಸಲುವಾಗಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕೆಂದು ಹೇಳಿದ್ದಾರೆ.