ಲಂಡನ್: ದೋಹಾದಿಂದ ಐರ್ಲೆಂಡ್‌ನ ಡಬ್ಲಿನ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕತಾರ್ ಏರ್‌ವೇಸ್ ವಿಮಾನದಲ್ಲಿ ಪ್ರಕ್ಷುಬ್ಧತೆ (ಅಲುಗಾಟ) ಉಂಟಾಗಿ 12 ಜನರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. QR017, ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ದೋಹಾದಿಂದ ಐರ್ಲೆಂಡ್‌ನ ಡಬ್ಲಿನ್ಗೆ ತೆರಳುತಿತ್ತು. ಈ ವೇಳೆ, ಹವಾಮಾನ ವೈಪರೀತ್ಯದಿಂದ ವಿಮಾನ ಅಲುಗಾಡಿ 12 ಜನರು ಗಾಯಗೊಂಡಿದ್ದು ಈ ಪೈಕಿ 8 ಜನರಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಕುರಿತು ಡಬ್ಲಿನ್ ವಿಮಾನ ನಿಲ್ದಾಣದ ಅಧಿಕಾರಿಗಳು ಸುದ್ದಿಸಂಸ್ಥೆಗಳಿಗೆ ಮಾಹಿತಿ ನೀಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ನಿಗದಿತ ಸಮಯಕ್ಕೆ 1 ಗಂಟೆ ಮುಂಚಿತವಾಗಿ ಈ ವಿಮಾವು ಡಬ್ಲಿನ್ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿದೆ. ಲ್ಯಾಂಡಿಂಗ್ ವೇಳೆ ಅಹಿತಕರ ಘಟನೆ ನಡೆಯದಿರಲು ಮುಂಜಾಗ್ರತ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ವಾಹನ ಮತ್ತು ರಕ್ಷಣಾ ಪಡೆಗಳು ಸೇರಿದಂತೆ ತುರ್ತು ಸೇವಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು. ವಿಮಾನ ಲಾಂಡಿಂಗ್ ಆಗುತ್ತಿದ್ದಂತೆ ಗಾಯಗೊಂಡಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ತಿಳಿಸಿದ್ದಾರೆ.
ಘಟನೆ ಕುರಿತು ಕತಾರ್ ಏರ್‌ವೇಸ್ ಹೇಳಿಕೆ ನೀಡಿದ್ದು, " ಪ್ರಕ್ಷುಬ್ದತೆಯಿಂದ ಕೆಲ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಐದು ದಿನಗಳ ಹಿಂದೆ ಲಂಡನ್‌ನಿಂದ ಬಂದ ಸಿಂಗಾಪುರ್ ಏರ್‌ಲೈನ್ಸ್ ವಿಮಾನದಲ್ಲಿ ವಾಯು ಪ್ರಕ್ಷುಬ್ಧತೆ ಉಂಟಾಗಿ ಬ್ರಿಟಿಷ್ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮತ್ತು 12ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದರು. ಇದು ನಡೆದ ಐದು ದಿನಗಳ ನಂತರ ಈ ಘಟನೆ ನಡೆದಿದ್ದು ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ.