ಇಸ್ಲಾಮಾಬಾದ್ : ಪರಮಾಣು ಶಕ್ತಿಯನ್ನು ಹೊಂದಿರುವ ಎರಡೂ ನೆರೆಹೊರೆಯ ದೇಶಗಳ ಮಧ್ಯದ ಸಂಬಂಧಗಳನ್ನು ಉತ್ತಮಪಡಿಸಲು ಗಂಭೀರವಾಗಿ ಪ್ರಯತ್ನಿಸಬೇಕೆಂದು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಇಶಾಕ್ ದಾರ್ ಭಾರತದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಕರೆ ನೀಡಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದೊಂದಿಗಿನ ಸಂಬಂಧಗಳ ಬಗ್ಗೆ ತಮ್ಮ ಹಿಂದಿನ ಹೇಳಿಕೆಗಳನ್ನು ಪುನರುಚ್ಚರಿಸಿದರು ಮತ್ತು ಪಾಕಿಸ್ತಾನವು ಯಾವಾಗಲೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತದೆ ಎಂದು ಹೇಳಿದರು.
"ನಮ್ಮ ಪೂರ್ವಭಾಗದಲ್ಲಿರುವ ಭಾರತದೊಂದಿಗಿನ ಸಂಬಂಧವು ಐತಿಹಾಸಿಕವಾಗಿ ಕಹಿಯಾಗಿದೆ. ಆದರೆ, ಪಾಕಿಸ್ತಾನವು ನಿರಂತರವಾಗಿ ದ್ವೇಷ ಸಾಧನೆ ಮಾಡುವುದರಲ್ಲಿ ನಂಬಿಕೆ ಇಟ್ಟಿಲ್ಲ. ಪರಸ್ಪರ ಗೌರವ, ಸಾರ್ವಭೌಮ ಸಮಾನತೆ ಮತ್ತು ದೀರ್ಘಕಾಲದ ಜಮ್ಮು ಮತ್ತು ಕಾಶ್ಮೀರ ವಿವಾದದ ನ್ಯಾಯಯುತ ಮತ್ತು ಶಾಂತಿಯುತ ಪರಿಹಾರದ ಆಧಾರದ ಮೇಲೆ ನಾವು ಭಾರತದೊಂದಿಗೆ ಉತ್ತಮ - ನೆರೆಹೊರೆ ಸಂಬಂಧವನ್ನು ಬಯಸುತ್ತೇವೆ" ಎಂದು ದಾರ್ ನುಡಿದರು.
ಆದಾಗ್ಯೂ, ಭಾರತದೊಂದಿಗೆ ಉತ್ತಮ ಸಂಬಂಧವನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ಜೊತೆ ಜೊತೆಗೆ ಭಾರತದಿಂದ ಎದುರಾಗುವ ಯಾವುದೇ ಮಿಲಿಟರಿ ದುಷ್ಕೃತ್ಯಕ್ಕೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲಾಗುವುದು ಎಂದು ಅವರು ಒತ್ತಿ ಹೇಳಿದ್ದಾರೆ.
"ದಕ್ಷಿಣ ಏಷ್ಯಾದಲ್ಲಿ ಕಾರ್ಯತಂತ್ರದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಪ್ರತಿಯೊಂದು ಹೆಜ್ಜೆಯನ್ನು ನಾವು ತೆಗೆದುಕೊಳ್ಳುತ್ತೇವೆ ಮತ್ತು ಭಾರತದಿಂದ ಎದುರಾಗುವ ಯಾವುದೇ ಮಿಲಿಟರಿ ಆಕ್ರಮಣದ ವಿರುದ್ಧ ನಾವು ಅಷ್ಟೇ ಪರಿಣಾಮಕಾರಿಯಾಗಿ ಮತ್ತು ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತೇವೆ" ಎಂದು ಅವರು ಹೇಳಿದರು.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಹೊಸ ಆಡಳಿತಾವಧಿಯನ್ನು ಪ್ರಾರಂಭಿಸಿರುವ ಈ ಸಮಯವು ಭಾರತ-ಪಾಕಿಸ್ತಾನ ಸಂಬಂಧಗಳನ್ನು ಸುಧಾರಿಸುವ ಮತ್ತು ಇದಕ್ಕೆ ಅಡ್ಡಿಯಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗಂಭೀರವಾಗಿ ಚಿಂತನೆ ನಡೆಸುವ ಸಂದರ್ಭ ಇದಾಗಿದೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ ಇಶಾಕ್ ದಾರ್, ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸುವ ಭಾರತದ ನಿರ್ಧಾರವು ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮ ಎಂದು ಕರೆದರು. ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅವರು ವಾದಿಸಿದರು.
ಇದನ್ನೂ ಓದಿ : ದೇಶಕ್ಕೆ ಅಪಾಯ ಎದುರಾದರೆ ಪರಮಾಣು ನೀತಿ ಬದಲಾವಣೆ: ರಷ್ಯಾ ಎಚ್ಚರಿಕೆ - nuclear doctrine