ಟೆಲ್ ಅವೀವ್: ದಕ್ಷಿಣ ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ಉಗ್ರರು ನಡೆಸಿದ ದಾಳಿಗೆ ಇರಾನ್, ಚೀನಾ ಮತ್ತು ರಷ್ಯಾ ದೇಶಗಳೇ ಕಾರಣ ಎಂದು ರಿಪಬ್ಲಿಕನ್ ಪಕ್ಷದ ನಾಯಕಿ ಹಾಗೂ ವಿಶ್ವಸಂಸ್ಥೆಗೆ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಆರೋಪಿಸಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 1,200 ಮಂದಿ ಮೃತಪಟ್ಟಿದ್ದರು. 250ಕ್ಕೂ ಹೆಚ್ಚು ಜನರನ್ನು ಹಮಾಸ್ ಒತ್ತೆಯಾಳಾಗಿ ಅಪಹರಿಸಿಕೊಂಡು ಹೋಗಿತ್ತು.
ಅಮೆರಿಕದ ಹಿರಿಯ ರಾಜಕೀಯ ನಾಯಕಿ ನಿಕ್ಕಿ ಹ್ಯಾಲೆ ಸದ್ಯ ಇಸ್ರೇಲ್ ಪ್ರವಾಸದಲ್ಲಿದ್ದು, ಸೋಮವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ರಷ್ಯಾದ ಗುಪ್ತಚರ ಬೆಂಬಲದೊಂದಿಗೆ ಇರಾನ್ ಈ ದಾಳಿಯನ್ನು ಆಯೋಜಿಸಿದೆ ಮತ್ತು ಚೀನಾ ಇಡೀ ಕಾರ್ಯಾಚರಣೆಗೆ ಧನಸಹಾಯ ನೀಡಿದೆ ಎಂದು ಅವರು ಹೇಳಿದರು. ರಷ್ಯನ್ನರು ಸ್ಥಳಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಒದಗಿಸಿದ್ದಾರೆ. ಚೀನಾ ಇರಾನ್ಗೆ ಧನಸಹಾಯ ನೀಡುತ್ತಿದೆ ಎಂದು ಹ್ಯಾಲೆ ಹೇಳಿದರು.
"ಅವರೆಲ್ಲರೂ ಕೊಲೆಗಡುಕರು. ಕೊಲೆಯಲ್ಲಿ ಎಲ್ಲರೂ ಸಹಭಾಗಿಗಳಾಗಿದ್ದಾರೆ. ಇಂಥ ಘಟನೆ ಮರುಕಳಿಸಬಾರದು ಎಂಬುದು ನಮ್ಮ ಇಚ್ಛೆಯಾಗಿದ್ದರೆ ಇದನ್ನು ನಿಜವಾಗಿಯೂ ಯಾರು ಮಾಡಿದ್ದು ಎಂಬ ಸತ್ಯದ ಬಗ್ಗೆ ನಾವು ಪ್ರಾಮಾಣಿಕರಾಗಿರಬೇಕಾಗುತ್ತದೆ" ಎಂದು ಅವರು ಹೇಳಿದರು. ಆದಾಗ್ಯೂ ಹಮಾಸ್ ದಾಳಿಯಲ್ಲಿ ಚೀನಾ ಮತ್ತು ರಷ್ಯಾ ಭಾಗಿಯಾಗಿರುವ ಬಗ್ಗೆ ನಿಕ್ಕಿ ಹ್ಯಾಲೆ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲಿಲ್ಲ.
ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಸಹವರ್ತಿಯಾಗುವ ಸಾಧ್ಯತೆಯಿರುವ ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲೆ ಸದ್ಯ ದಕ್ಷಿಣ ಇಸ್ರೇಲ್ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅಕ್ಟೋಬರ್ 7ರ ಹಮಾಸ್ ಹತ್ಯಾಕಾಂಡದಲ್ಲಿ ನಾಶವಾದ ಸ್ಡೆರೊಟ್ ಪೊಲೀಸ್ ಠಾಣೆಗೆ ಅವರು ಭೇಟಿ ನೀಡಿದರು.
ಅಕ್ಟೋಬರ್ 7ರ ಹತ್ಯಾಕಾಂಡದ ನಂತರ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಾಸ್ಕೋದಲ್ಲಿ ಹಮಾಸ್ ನಾಯಕರಿಗೆ ಆತಿಥ್ಯ ನೀಡಿದ್ದರು ಎಂಬುದು ಗಮನಾರ್ಹ. ಹಮಾಸ್ ನ ಅಂತಾರಾಷ್ಟ್ರೀಯ ಸಂಬಂಧಗಳ ಕಚೇರಿಯ ಮುಖ್ಯಸ್ಥ ಮೂಸಾ ಅಬು ಮರ್ಜೌಕ್, ಹಮಾಸ್ನ ಮಾಜಿ ಆರೋಗ್ಯ ಸಚಿವ ಬಾಸೆಮ್ ನೈಮ್ ಮತ್ತು ಇರಾನ್ ಉಪ ವಿದೇಶಾಂಗ ಸಚಿವ ಅಲಿ ಬಘೇರಿ ಕಾನಿ ಈ ಆತಿಥ್ಯ ಸಮಾರಂಭದಲ್ಲಿ ಭಾಗವಹಿಸಿದ್ದರು ಮತ್ತು ರಷ್ಯಾದ ಉಪ ವಿದೇಶಾಂಗ ಸಚಿವ ಮಿಖಾಯಿಲ್ ಬೊಗ್ಡಾನೊವ್ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ನೌಕರಿ ಆಸೆಯಿಂದ ಲಾವೋಸ್ನಲ್ಲಿ ವಂಚಕರ ಬಲೆಗೆ ಸಿಲುಕಿದ್ದ 13 ಭಾರತೀಯರ ರಕ್ಷಣೆ - Indians Rescued from Laos