ಜಕಾರ್ತಾ: ಇಂಡೋನೇಷ್ಯಾದ ಮೌಂಟ್ ಇಬು ಜ್ವಾಲಾಮುಖಿಯು ಭಾನುವಾರ ಮತ್ತೆ ಸ್ಫೋಟಗೊಂಡಿದ್ದು 7,000 ಮೀಟರ್ ಎತ್ತರದವರೆಗೆ ಕಪ್ಪು ಬೂದಿ ಆಕಾಶಕ್ಕೆ ಹಾರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಉತ್ತರ ಮಾಲುಕು ಪ್ರಾಂತ್ಯದ ದ್ವೀಪದಲ್ಲಿರುವ ಮೌಂಟ್ ಇಬು ಜ್ವಾಲಾಮುಖಿ ಆರು ನಿಮಿಷಕ್ಕೂ ಹೆಚ್ಚು ಕಾಲ ಸ್ಫೋಟಗೊಂಡಿದೆ ಎಂದು ಇಂಡೋನೇಷ್ಯಾದ ಭೂವಿಜ್ಞಾನ ಏಜೆನ್ಸಿಯ ಮುಖ್ಯಸ್ಥ ಮುಹಮ್ಮದ್ ವಫಿದ್ ತಿಳಿಸಿದ್ದಾರೆ.
"ದಟ್ಟವಾದ ಬೂದಿಯ ಕಾರಂಜಿ ಹಾರುತ್ತಿರುವಂತೆ ಜ್ವಾಲಾಮುಖಿ ಚಿಮ್ಮಿದೆ. ಬೂದಿ ಮತ್ತು ಮರಳಿನೊಂದಿಗೆ ಲಾವಾರಸ ಆಕಾಶಕ್ಕೆ ಚಿಮ್ಮುತ್ತಿದೆ. ಸ್ಫೋಟದ ಸಮಯದಲ್ಲಿ ಗಾಳಿ ಪಶ್ಚಿಮಕ್ಕೆ ಬೀಸುತ್ತಿತ್ತು ಮತ್ತು ಇದರ ಪರಿಣಾಮವಾಗಿ ಬೂದಿ ಮತ್ತು ಮರಳು ಗಾಮ್ ಇಸಿ ಹೆಸರಿನ ಗ್ರಾಮದತ್ತ ಹೊರಳಿದೆ. ಇಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ" ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.
ಮರಳು ಮಿಶ್ರಿತ ಬೂದಿಯ ಮಳೆ ನಿಲ್ಲುವವರೆಗೂ ಜನ ಮನೆಯಿಂದ ಹೊರಗೆ ಬರದಂತೆ ಸ್ಥಳೀಯ ಅಧಿಕಾರಿಗಳು ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮೌಂಟ್ ಇಬು ಜ್ವಾಲಾಮುಖಿಯು ಮೇ ಆರಂಭದಿಂದ ನಿರಂತರವಾಗಿ ಸ್ಫೋಟಗೊಳ್ಳುತ್ತಿದೆ. ಕಳೆದ ವಾರದಿಂದ ಆರಂಭವಾಗಿರುವ ಸರಣಿ ಸ್ಫೋಟಗಳ ನಂತರ ಇಂಡೋನೇಷ್ಯಾದ ಅಧಿಕಾರಿಗಳು ಎಚ್ಚರಿಕೆಯನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ್ದಾರೆ.
270 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ 120 ಸಕ್ರಿಯ ಜ್ವಾಲಾಮುಖಿಗಳಿವೆ. ದೇಶವು ಪೆಸಿಫಿಕ್ ಮಹಾಸಾಗರದ ಸುತ್ತಲೂ ಹಾರ್ಸ್ ಶೂ ಆಕಾರದ ಭೂಕಂಪನ ದೋಷ ರೇಖೆಗಳ ಸರಣಿಯಾದ "ರಿಂಗ್ ಆಫ್ ಫೈರ್" ಉದ್ದಕ್ಕೂ ಹರಡಿರುವುದರಿಂದ ಇಲ್ಲಿ ಜ್ವಾಲಾಮುಖಿಗಳು ಯಾವಾಗಲೂ ಸಕ್ರಿಯವಾಗಿರುತ್ತವೆ.
ಜ್ವಾಲಾಮುಖಿಯು ಭೂಮಿಯ ಹೊರಪದರದ ಮೇಲಿನ ಬಿರುಕಾಗಿದ್ದು, ಇದು ಶಿಲಾದ್ರವ್ಯವು (ಮ್ಯಾಗ್ಮಾ) ಮೇಲ್ಮೈಗೆ ಏರಿದಾಗ ಲಾವಾ, ಬೂದಿ ಮತ್ತು ಅನಿಲಗಳು ಹೊರಬರಲು ಅನುವು ಮಾಡಿಕೊಡುತ್ತದೆ. ಮ್ಯಾಗ್ಮಾ ಎಂಬುದು ಕೆಂಪು-ಬಿಸಿ ದ್ರವ ಶಿಲೆಯಾಗಿದ್ದು, ಇದು ಸಾಮಾನ್ಯವಾಗಿ ಭೂಮಿಯ ತಿರುಳಿನ ಕೆಳಗೆ ಇರುತ್ತದೆ.
ಒಂದು ಸಾವಿರ ಸಕ್ರಿಯ ಜ್ವಾಲಾಮುಖಿ: ಜ್ವಾಲಾಮುಖಿಗಳು ಭೂಮಿಯೊಳಗೆ ನಡೆಯುತ್ತಿರುವ ಒತ್ತಡ ಪ್ರಕ್ರಿಯೆಗಳ ಪುರಾವೆಗಳಾಗಿವೆ. ಇಂಡೋನೇಷ್ಯಾ ವಿಶ್ವದ ಯಾವುದೇ ದೇಶಕ್ಕಿಂತ ಹೆಚ್ಚು ಜ್ವಾಲಾಮುಖಿಗಳಿಗೆ ನೆಲೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಯುಕೆ ಯಾವುದೇ ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿಲ್ಲ. ಭೂಮಿಯ ಮೇಲೆ ಒಂದು ಸಾವಿರಕ್ಕೂ ಹೆಚ್ಚು ಸಕ್ರಿಯ ಜ್ವಾಲಾಮುಖಿಗಳಿವೆ. ವಾಸ್ತವವಾಗಿ ಪ್ರತಿದಿನ ಸುಮಾರು 20 ಜ್ವಾಲಾಮುಖಿಗಳು ಸ್ಫೋಟಗೊಳ್ಳುತ್ತಿರುತ್ತವೆ.
ಇದನ್ನೂ ಓದಿ: ದ.ಕೊರಿಯಾಗೆ ಬಂದ ಕಸ ತುಂಬಿದ ಬಲೂನ್ಗಳು: 'ಪ್ರೀತಿಯ ಉಡುಗೊರೆ' ಎಂದ ಉ.ಕೊರಿಯಾ - Balloon War