ಯುನೈಟೆಡ್ ನೇಷನ್ಸ್: ಆಫ್ರಿಕಾದ ಕಾಂಗೋ ಸೇರಿದಂತೆ 13 ದೇಶಗಳಲ್ಲಿ ಮಂಕಿಫಾಕ್ಸ್ ಕಾಯಿಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ (WHO) ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ. 500ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, ವೈರಸ್ ಹರಡುವುದನ್ನು ತಡೆಯಲು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಕರೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಮಂಕಿಫಾಕ್ಸ್ ಹೆಚ್ಚಳದ ಕುರಿತು ಮಾಹಿತಿ ನೀಡಿದರು.
"ಕಳೆದ ವಾರ ನಾನು ಕಾಂಗೋ ಮತ್ತು ಆಫ್ರಿಕಾದ ಇತರ ದೇಶಗಳಲ್ಲಿ ಮಂಕಿಫಾಕ್ಸ್ನ ಉಲ್ಬಣವನ್ನು ಮೌಲ್ಯಮಾಪನ ಮಾಡಲು ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳಡಿಯಲ್ಲಿ ತುರ್ತು ಸಮಿತಿ ಸಭೆಯನ್ನು ಕರೆಯುತ್ತಿರುವುದಾಗಿ ತಿಳಿಸಿದ್ದೆ. ಅದರಂತೆ ಇಂದು ತುರ್ತು ಸಮಿತಿ ಭೇಟಿಯಾಗಿದ್ದು, ಅಂತಾರಾಷ್ಟ್ರೀಯ ಕಾಳಜಿಯ ದೃಷ್ಟಿಯಿಂದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸುವ ಅನಿವಾರ್ಯತೆ ಇದೆ ಎಂದು ಸಮಿತಿ ನನಗೆ ಸಲಹೆ ನೀಡಿದೆ. ನಾನು ಆ ಸಲಹೆಯನ್ನು ಸ್ವೀಕರಿಸಿದ್ದೇನೆ" ಎಂದು ತಿಳಿಸಿದರು.
"ಪೂರ್ವ ಕಾಂಗೋದಲ್ಲಿ ಮಂಕಿಫಾಕ್ಸ್ನ ಹೊಸ ಕ್ಲಾಡ್ ಪತ್ತೆ ಹಾಗೂ ತ್ವರಿತವಾಗಿ ಹರಡುತ್ತಿರುವುದು, ಜೊತೆಗೆ ಇದುವರೆಗೆ ಮಂಕಿಫಾಕ್ಸ್ ಪತ್ತೆಯಾಗಿರದ ನೆರೆಯ ದೇಶಗಳಲ್ಲೂ ಅದು ಕಾಣಿಸಿಕೊಂಡಿರುವುದು, ಆಫ್ರಿಕಾ ಮತ್ತು ಅದರಾಚೆಯ ದೇಶಗಳಲ್ಲೂ ಹರಡುವ ಸಾಧ್ಯತೆಯ ಬಗ್ಗೆ ಆತಂಕ ಮೂಡಿಸಿದೆ. ಆಫ್ರಿಕಾದ ಇತರ ಭಾಗಗಳಲ್ಲಿ ಮಂಕಿಫಾಕ್ಸ್ನ ಇತರ ಕ್ಲಾಡ್ಗಳ ಏಕಾಏಕಿ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಜನ ಜೀವ ಉಳಿಸಲು ಸಂಘಟಿತ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ಅತ್ಯಗತ್ಯ ಎಂಬುದು ಸ್ಪಷ್ಟವಾಗಿದೆ. ಆಫ್ರಿಕಾದಲ್ಲಿ ಏಕಾಏಕಿ ಮಂಕಿಫಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕೆಲಸ ಮಾಡುತ್ತಿದೆ. ಇದು ನಮ್ಮೆಲ್ಲರಿಗೂ ಕಾಳಜಿ ವಹಿಸಬೇಕಾದ ಎಚ್ಚರಿಕೆಯ ಘಂಟೆಯಾಗಿದೆ" ಎಂದು ಮಹಾನಿರ್ದೇಶಕರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯು ಅಂತಾರಾಷ್ಟ್ರೀಯ ಆರೋಗ್ಯ ಕಾನೂನಿನಡಿಯಲ್ಲಿ ಅತ್ಯುನ್ನತ ಮಟ್ಟದ ಎಚ್ಚರಿಕೆಯಾಗಿದೆ.
ಈ ವರ್ಷ ಆಫ್ರಿಕಾದ 13 ದೇಶಗಳಲ್ಲಿ ಮಂಕಿಫಾಕ್ಸ್ ಪತ್ತೆಯಾಗಿದೆ. ಅದರಲ್ಲಿ 96 ಶೇಕಡಾ ಪಾಸಿಟಿವ್ ಪ್ರಕರಣಗಳು ಹಾಗೂ ಸಾವು ಪ್ರಕರಣಗಳು ಕಾಂಗೋದಲ್ಲಿ ವರದಿಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ, ಪ್ರಕರಣಗಳು 160 ಶೇಕಡಾ ಹಾಗೂ ಸಾವಿನ ಪ್ರಮಾಣ 19 ಶೇ ಹೆಚ್ಚಾಗಿದೆ. ಈವರೆಗೆ ಆಫ್ರಿಕಾ ದೇಶಗಳಲ್ಲಿ ಒಟ್ಟು 14,000 ಪ್ರಕರಣಗಳು ಹಾಗೂ 524 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.
ಇದನ್ನೂ ಓದಿ: EXPLAINER: ಮಂಕಿಫಾಕ್ಸ್ ಅಂದ್ರೇನು? ಅದು ಹರಡುವ ಬಗೆ, ಚಿಕಿತ್ಸಾ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ