ಟೆಲ್ ಅವೀವ್: ಗಾಜಾದಲ್ಲಿ ಬಂಧಿತರಾಗಿರುವ ಎಲ್ಲ ಇಸ್ರೇಲಿ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಿಸಿಕೊಳ್ಳುವಂತೆ ಮತ್ತು ದೇಶದಲ್ಲಿ ಹೊಸ ಚುನಾವಣೆ ನಡೆಸುವಂತೆ ಒತ್ತಾಯಿಸಿ ಇಸ್ರೇಲ್ನ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಸಂಜೆ ಟೆಲ್ ಅವೀವ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನತೆ, ಪ್ಯಾಲೆಸ್ಟೈನ್ ಕರಾವಳಿ ಪ್ರದೇಶದಲ್ಲಿ ಹಮಾಸ್ನಿಂದ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿರುವ ಎಲ್ಲ ಜನರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮತ್ತು ಹೊಸ ಚುನಾವಣೆಗಳನ್ನು ನಡೆಸುವಂತೆ ಬಲವಾಗಿ ಒತ್ತಾಯಿಸಿದರು.
ಅಕ್ಟೋಬರ್ 7ರಂದು ಇಸ್ರೇಲ್ನಲ್ಲಿ ಹಮಾಸ್ ನಡೆಸಿದ ಹತ್ಯಾಕಾಂಡಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಡಳಿತ ವೈಫಲ್ಯವೇ ಕಾರಣ ಎಂದು ಆರೋಪಿಸಿದ ನಾಗರಿಕರು, ಇಸ್ರೇಲಿಗರ ಅಪಹರಣಕ್ಕೆ ಕಾರಣರಾದ ಪ್ರಧಾನಿಯೇ ಈಗ ಅವರೆಲ್ಲರನ್ನು ಮರಳಿ ದೇಶಕ್ಕೆ ಕರೆತರಬೇಕೆಂದು ಒತ್ತಾಯಿಸಿದರು. ಅಪಹೃತ ಇಸ್ರೇಲಿಗರನ್ನು ಮರಳಿ ತರುವ ನಿಟ್ಟಿನಲ್ಲಿ ಹಮಾಸ್ನೊಂದಿಗೆ ಸಂಧಾನ ಮಾಡಿಕೊಳ್ಳಲು ಇಸ್ರೇಲ್ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಅಪಹೃತರ ಕುಟುಂಬಸ್ಥರು ಆರೋಪಿಸಿದರು.
ಕರಾವಳಿ ನಗರಗಳಾದ ಟೆಲ್ ಅವೀವ್ ಮತ್ತು ಹೈಫಾದಲ್ಲಿ ಶನಿವಾರ ಸಂಜೆ ಸಾವಿರಾರು ಜನ ಮತ್ತು ಬೀರ್ಶೆವಾ ನಗರದಲ್ಲಿ ನೂರಾರು ಜನ ಪ್ರತಿಭಟನೆ ನಡೆಸಿದರು. ನೆತನ್ಯಾಹು ಅವರಿಗೆ ಸೇರಿದ ಖಾಸಗಿ ಬಂಗಲೆಯ ಬಳಿ ಸಾವಿರಕ್ಕೂ ಹೆಚ್ಚು ಜನ ಕೈಸೇರಿಯಾದಲ್ಲಿ ಜಮಾಯಿಸಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲಿನ ಇತರ ನಗರಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ.
ಹಮಾಸ್ ಬಳಿ ಇದ್ದ 130 ಒತ್ತೆಯಾಳುಗಳ ಪೈಕಿ ಸದ್ಯ ಕೇವಲ 100 ಕ್ಕಿಂತ ಕಡಿಮೆ ಜನ ಈಗಲೂ ಬದುಕಿರಬಹುದು ಎಂದು ಇಸ್ರೇಲ್ ಭಾವಿಸಿತ್ತು. ಆದಾಗ್ಯೂ, ಅವರಲ್ಲಿ ಬಹುತೇಕರು ಇಷ್ಟೊತ್ತಿಗೆ ಸಾವನ್ನಪ್ಪಿರಬಹುದು ಎಂದು ಆತಂಕ ವ್ಯಕ್ತವಾಗಿದೆ. ಇಸ್ರೇಲ್ ಮತ್ತು ಹಮಾಸ್ ತಿಂಗಳುಗಳಿಂದ ಕದನ ವಿರಾಮ ಮತ್ತು ಅಕ್ಟೋಬರ್ 7 ರಂದು ಅಪಹರಣಕ್ಕೊಳಗಾದ ಮತ್ತಷ್ಟು ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ಪರೋಕ್ಷವಾಗಿ ಮಾತುಕತೆ ನಡೆಸುತ್ತಿವೆ. ಆದರೆ ಸಂಧಾನ ಮಾತುಕತೆಗಳು ಯಾವುದೇ ಫಲ ನೀಡಿಲ್ಲ.
ತುಲ್ಕರ್ಮ್ ನಗರ ಮತ್ತು ಉತ್ತರ ಪಶ್ಚಿಮ ದಂಡೆಯ ನಿರಾಶ್ರಿತರ ಶಿಬಿರದ ಮೇಲೆ ಸತತ ಮೂರನೇ ದಿನವೂ ಇಸ್ರೇಲ್ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಕನಿಷ್ಠ 14 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ ಇಸ್ರೇಲ್ ಪಶ್ಚಿಮ ದಂಡೆಯ ವಿವಿಧ ಭಾಗಗಳಲ್ಲಿ ಮತ್ತು ಜೆರುಸಲೇಂನ ಪೂರ್ವ ಭಾಗದಲ್ಲಿ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿ ನಡೆಸಿ 460 ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನು ಕೊಂದಿದೆ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : ಇರಾನ್ ಮೇಲೆ ಕ್ಷಿಪಣಿ ದಾಳಿ; ಇಸ್ರೇಲ್ ದಾಳಿ ನಡೆಸದಂತೆ ತಡೆಯಲು ವಿಶ್ವಸಂಸ್ಥೆಗೆ ತೆಹ್ರಾನ್ ಒತ್ತಾಯ - Israel attacks on Iran