ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾಸ್ ಮಧ್ಯದ ಯುದ್ಧದಲ್ಲಿ ಕದನ ವಿರಾಮ ಸ್ಥಾಪನೆಗೆ ನಿರಂತರ ಮಾತುಕತೆಗಳು ನಡೆಯುತ್ತಿವೆ. ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿ ಮತ್ತು ಶಿನ್ ಬೆಟ್ ನಿರ್ದೇಶಕ ರೋನೆನ್ ಬಾರ್ ನೇತೃತ್ವದ ಇಸ್ರೇಲ್ ನಿಯೋಗವು ಇತ್ತೀಚೆಗೆ ಪ್ಯಾರಿಸ್ ಮತ್ತು ಕೈರೋದಲ್ಲಿ ಅಮೆರಿಕ, ಕತಾರ್ ಮತ್ತು ಈಜಿಪ್ಟ್ ಅಧಿಕಾರಿಗಳೊಂದಿಗೆ ಮಧ್ಯಸ್ಥಿಕೆ ಮಾತುಕತೆಗಳನ್ನು ನಡೆಸಿ ಜೆರುಸಲೇಂಗೆ ಮರಳಿದೆ.
ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಮಾರ್ಚ್ 10 ರಂದು ರಂಜಾನ್ ತಿಂಗಳು ಪ್ರಾರಂಭವಾಗುವ ಮೊದಲು ಕದನ ವಿರಾಮ ಜಾರಿಗೆ ಬುರುವುದು ಬಹುತೇಕ ನಿಚ್ಚಳವಾಗಿದೆ ಎಂದು ಮೊಸ್ಸಾದ್ ಮುಖ್ಯಸ್ಥರು ಇಸ್ರೇಲಿ ಯುದ್ಧ ಕ್ಯಾಬಿನೆಟ್ ಸದಸ್ಯರಿಗೆ ಅನೌಪಚಾರಿಕವಾಗಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಮೃತಪಟ್ಟವರ ದೇಹಗಳನ್ನು ಹಸ್ತಾಂತರಿಸುವುದು ಹಾಗೂ ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಸೇರಿದಂತೆ ಇಸ್ರೇಲ್ ಮುಂದಿಟ್ಟ ಎಲ್ಲಾ ಸಲಹೆಗಳನ್ನು ಹಮಾಸ್ ಬಹುತೇಕ ತಿರಸ್ಕರಿಸಿದೆ. ಒಂದೊಮ್ಮೆ ಒಪ್ಪಂದ ಕಾರ್ಯರೂಪಕ್ಕೆ ಬರದಿದ್ದರೆ, ಗಾಜಾ ಪಟ್ಟಿಯ ರಫಾ ಪ್ರದೇಶದಲ್ಲಿ ಇಸ್ರೇಲ್ ಪಡೆಗಳ ನೆಲದ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶಿಸಲಿದ್ದಾರೆ ಎಂದು ಇಸ್ರೇಲ್ ಮಧ್ಯವರ್ತಿಗಳಿಗೆ ತಿಳಿಸಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಉತ್ತರ ಗಾಜಾದಿಂದ ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯರ ಪುನರ್ವಸತಿಗೆ ಇಸ್ರೇಲ್ ಒಪ್ಪಿಕೊಂಡಿದೆ. ಇಸ್ರೇಲ್ ಕಡೆಯ ನೇತೃತ್ವವನ್ನು ಡೇವಿಡ್ ಬಾರ್ನಿ ಮತ್ತು ರೋನೆನ್ ಬಾರ್ ವಹಿಸಿದರೆ, ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ, ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ವಿಲಿಯಂ ಬರ್ನ್ಸ್ ಮತ್ತು ಈಜಿಪ್ಟ್ ಗುಪ್ತಚರ ಮುಖ್ಯಸ್ಥ ಅಬ್ಬಾಸ್ ಕಾಮೆಲ್ ಕೂಡ ಮಾತುಕತೆಯಲ್ಲಿ ಭಾಗಿಯಾಗಿದ್ದರು.
ದಕ್ಷಿಣ ಗಾಜಾದಲ್ಲಿ ನಡೆದ ಯುದ್ಧದಲ್ಲಿ ಸಾವನ್ನಪ್ಪಿದ ಇಸ್ರೇಲ್ ಸೈನಿಕರ ಸಂಖ್ಯೆ 239 ಕ್ಕೆ ಏರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತೀರಾ ಇತ್ತೀಚೆಗೆ ಐಡಿಎಫ್ನ ಗಿವಾತಿ ಬ್ರಿಗೇಡ್ನ ಬೇಹುಗಾರಿಕೆ ಘಟಕದ ಸ್ಟಾಫ್ ಸಾರ್ಜೆಂಟ್ ನರ್ಯಾ ಬೆಲೆಟ್ (21) ಹೆಸರಿನ ಯೋಧ ಸಾವನ್ನಪ್ಪಿದ್ದಾನೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಇದಲ್ಲದೆ, ದಕ್ಷಿಣ ಗಾಜಾ ಪಟ್ಟಿಯಲ್ಲಿ ಶನಿವಾರ ನಡೆದ ಯುದ್ಧದಲ್ಲಿ ಗಿವಾಟಿ ಬ್ರಿಗೇಡ್ ನ ಅಧಿಕಾರಿ ಮತ್ತು ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಇದನ್ನೂ ಓದಿ : 'ಪಾಕಿಸ್ತಾನಕ್ಕೆ ಸಾಲ ನೀಡಬೇಡಿ' : ಐಎಂಎಫ್ಗೆ ಇಮ್ರಾನ್ ಖಾನ್ ಪತ್ರ