ದುಬೈ: ಇರಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ರೇಸ್‌ನಿಂದ ಹಿಂದೆ ಸರಿದಿದ್ದಾರೆ. ಮುಂಬರುವ ಮತದಾನಕ್ಕೆ ದೇಶ ಸರ್ವ ತಯಾರಿ ನಡೆಸಿದೆ. ದಿವಂಗತ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಬದಲಿಗೆ ಚುನಾವಣೆಯಲ್ಲಿ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಇಂದು ಮತದಾನ ನಡೆಯಲಿದೆ.
53ರ ಹರೆಯದ ಅಮೀರ್ ಹೊಸೈನ್ ಘಾಜಿಜಾದೇಹ್ ಹಶೆಮಿ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದರು ಮತ್ತು ಇತರ ಅಭ್ಯರ್ಥಿಗಳಿಗೂ ಅದೇ ರೀತಿ ಮಾಡುವಂತೆ ಒತ್ತಾಯಿಸಿದರು. ಅಮೀರ್ ಹೊಸೈನ್ ಘಾಜಿಜಾದೇಹ್ ಅವರು ದಿವಂಗತ ಅಧ್ಯಕ್ಷ ಇಬ್ರಾಹಿಂ ರೈಸಿ ಉಪಾಧ್ಯಕ್ಷರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದ್ದಾರೆ. 2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸುಮಾರು 1 ಮಿಲಿಯನ್ ಮತಗಳನ್ನು ಪಡೆದು ಕೊನೆಯ ಸ್ಥಾನ ತಲುಪಿದ್ದರು. ಗುರುವಾರ, ಟೆಹ್ರಾನ್ ಮೇಯರ್ ಅಲಿರೆಜಾ ಜಕಾನಿ ಅವರು ಕೂಡ ತಮ್ಮ ಉಮೇದುವಾರಿಕೆಯನ್ನು ಹಿಂದೆ ತೆಗೆದುಕೊಂಡಿದ್ದಾರೆ. ಇವರು ಹಿಂದೆ 2021ರ ಚುನಾವಣೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭೀಕರ ಹೀಟ್ವೇವ್: ಕರಾಚಿಯಲ್ಲಿ 36 ಜನ ಸಾವು - Heat Wave In Pakistan
ಇರಾನ್ ಅಧ್ಯಕ್ಷರಾಗಿದ್ದ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರಾಗಿದ್ದ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಕಳೆದ ಮೇ ತಿಂಗಳ ನಡುವಲ್ಲಿ ಪರ್ವತ ಪ್ರದೇಶ ಮತ್ತು ಹಿಮಾವೃತ ವಾತಾವರಣದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದಿದ್ದರು. ಹಾಗಾಗಿ ಅವರ ಸ್ಥಾನಕ್ಕಿಂದು ಚುನಾವಣೆ ನಡೆಯುತ್ತಿದೆ.