ಟೆಲ್ ಅವೀವ್ : ಕದನ ವಿರಾಮ ಮಾತುಕತೆಯಲ್ಲಿನ ಬಿಕ್ಕಟ್ಟನ್ನು ಕೊನೆಗೊಳಿಸಲು, ಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನೇತೃತ್ವದ ಹಿರಿಯ ನಾಯಕರ ನಿಯೋಗವು ಮಧ್ಯಸ್ಥಿಕೆ ಮಾತುಕತೆಗಾಗಿ ಈ ವಾರ ಕೈರೋಗೆ ಭೇಟಿ ನೀಡಲಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ವಿಶೇಷ ರಾಯಭಾರಿ ಬ್ರೆಟ್ ಮೆಕ್ ಗುರ್ಕ್ ಈ ವಾರ ಕೈರೋಗೆ ಆಗಮಿಸಲಿದ್ದು, ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.
ಮೂಲಗಳ ಪ್ರಕಾರ, ಇಸ್ರೇಲಿ ಜೈಲುಗಳಲ್ಲಿನ ಪ್ಯಾಲೆಸ್ಟೈನ್ ಕೈದಿಗಳಿಗೆ ಪ್ರತಿಯಾಗಿ ತನ್ನ ವಶದಲ್ಲಿರುವ ಮಹಿಳೆಯರು, ವೃದ್ಧರು ಮತ್ತು ಗಾಯಗೊಂಡ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಾಯಕತ್ವ ಒಪ್ಪಿಕೊಂಡಿದೆ. ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಲ್-ಥಾನಿ ಮತ್ತು ಈಜಿಪ್ಟ್ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ಅಬ್ಬಾಸ್ ಕಾಮೆಲ್ ಕೂಡ ಕೈರೋದಲ್ಲಿ ನಡೆಯಲಿರುವ ಮಧ್ಯಸ್ಥಿಕೆ ಮಾತುಕತೆಯ ಭಾಗವಾಗಲಿದ್ದಾರೆ.
ಆದಾಗ್ಯೂ ಕದನ ವಿರಾಮ ಮಾತುಕತೆಗಳು ಯಾವ ದಿನ ನಡೆಯಲಿವೆ ಎಂಬ ಬಗ್ಗೆ ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲವು ನಿಖರವಾದ ಮಾಹಿತಿ ನೀಡಿಲ್ಲ. ಒಟ್ಟಾರೆ ಈ ವಾರವೇ ಮಾತುಕತೆ ನಡೆಯಲಿವೆ ಎಂದು ಅದು ಬಹಿರಂಗಪಡಿಸಿದೆ.
ಪವಿತ್ರ ರಂಜಾನ್ ತಿಂಗಳ ಆರಂಭಕ್ಕೆ ಮುನ್ನವೇ ಕದನ ವಿರಾಮ ಜಾರಿಯಾಗಬಹುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಈ ಹಿಂದೆ ಹೇಳಿದ್ದರು. ರಂಜಾನ್ ತಿಂಗಳು ಪ್ರಾರಂಭವಾಗಿದ್ದರೂ, ಕದನ ವಿರಾಮ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಆದರೆ ಈಗಿನ ಬೆಳವಣಿಗೆಗಳು ಕದನ ವಿರಾಮದ ಬಗ್ಗೆ ಹೊಸ ಆಶಾಭಾವನೆ ಮೂಡಿಸಿವೆ.
ಅಕ್ಟೋಬರ್ 7, 2023 ರಂದು ಪ್ರಾರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 31,000 ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್ನ ಕಿಬ್ಬುಟ್ಜ್ ಬೀರಿ, ಕಫರ್ ಅಜಾ ಮತ್ತು ರೀಮ್ ಉತ್ಸವ ಪ್ರದೇಶಗಳ ಮೇಲೆ ದಾಳಿ ನಡೆಸಿ 1,200 ಜನ ಇಸ್ರೇಲಿಗರನ್ನು ಸಾಯಿಸಿದ್ದರು.
ಯುದ್ಧ ಪ್ರಾರಂಭವಾದಾಗಿನಿಂದ, ನವೆಂಬರ್ 24 ರಿಂದ ಡಿಸೆಂಬರ್ 1 ರವರೆಗೆ ಒಂದು ವಾರದ ಕದನ ವಿರಾಮ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಇಸ್ರೇಲಿ ಜೈಲುಗಳಲ್ಲಿದ್ದ 324 ಪ್ಯಾಲೆಸ್ಟೈನ್ ಕೈದಿಗಳಿಗೆ ಬದಲಾಗಿ 105 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ : ಹಮಾಸ್ ನಾಯಕ ಸಿನ್ವರ್ಗಾಗಿ ಹುಡುಕಾಟ: ದಾಳಿ ತೀವ್ರಗೊಳಿಸಿದ ಇಸ್ರೇಲ್