ದುಬೈ: ಈ ವರ್ಷದ ಮೊದಲಾರ್ಧದಲ್ಲಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದಾಖಲೆಯ 44.9 ಮಿಲಿಯನ್ (4.4 ಕೋಟಿ) ಜನ ಪ್ರಯಾಣಿಸಿದ್ದು, ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಕೊರೊನಾ ವೈರಸ್ ಅಲೆಯ ನಂತರ ದುಬೈ ವಿಮಾನ ನಿಲ್ದಾಣದ ವೈಭವ ಮರುಕಳಿಸಿದ್ದು, ಈ ವಿಮಾನ ನಿಲ್ದಾಣ ತನ್ನದೇ ಹಿಂದಿನ ದಾಖಲೆಯನ್ನು ಮುರಿದಿದೆ.
ದುಬೈನ ಸರ್ಕಾರಿ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಕೂಡ ಈ ವರ್ಷದಲ್ಲಿ ದಾಖಲೆಯ ನಿವ್ವಳ ಲಾಭ ಗಳಿಸಿದೆ. ಮುಂದಿನ ಒಂದು ದಶಕದಲ್ಲಿ 35 ಬಿಲಿಯನ್ ಡಾಲರ್ ವೆಚ್ಚದಲ್ಲಿ ಹೊಸದೊಂದು ವಿಮಾನ ನಿಲ್ದಾಣ ನಿರ್ಮಿಸಲು ಮತ್ತು ಈ ನಿಲ್ದಾಣವನ್ನು ಸಂಪೂರ್ಣವಾಗಿ ಅಲ್ಲಿಗೆ ಸ್ಥಳಾಂತರಿಸಲು ದುಬೈ ಸರ್ಕಾರ ಯೋಜಿಸಿರುವುದು ಗಮನಾರ್ಹ.
ಕೊರೊನಾ ಸಾಂಕ್ರಾಮಿಕ ಅಲೆಗಿಂತ ಮೊದಲು, ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಜನರ ಪೈಕಿ ಶೇ 60ರಷ್ಟು ಜನ ದುಬೈನಿಂದ ಇತರ ನಗರ ಹಾಗೂ ದೇಶಗಳಿಗೆ ಪ್ರಯಾಣಿಸುತ್ತಿದ್ದರು. ಆದರೆ ಈಗ ಶೇ 60ರಷ್ಟು ಪ್ರಯಾಣಿಕರು ದುಬೈ ಒಳಗೆ ಬರುತ್ತಿದ್ದರೆ ಶೇ 40ರಷ್ಟು ಪ್ರಯಾಣಿಕರು ಇತರ ನಗರ ಮತ್ತು ದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ ಎಂದು ದುಬೈ ವಿಮಾನ ನಿಲ್ದಾಣದ ಸಿಇಒ ಪಾಲ್ ಗ್ರಿಫಿತ್ಸ್ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದರು.
2018 ರಲ್ಲಿ ನಿಲ್ದಾಣದ ಮೂಲಕ 89.1 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದರು. ಇದು ಕೊರೊನಾ ಸಾಂಕ್ರಾಮಿಕ ಅಲೆಗಿಂತ ಮುಂಚಿನ ಅತ್ಯಂತ ಜನನಿಬಿಡ ವರ್ಷವಾಗಿತ್ತು. 2022 ರಲ್ಲಿ 66 ಮಿಲಿಯನ್ ಮತ್ತು 2023 ರಲ್ಲಿ 86.9 ಮಿಲಿಯನ್ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಸಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ 91.8 ಮಿಲಿಯನ್ ಪ್ರಯಾಣಿಕರು ದುಬೈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ನಿರೀಕ್ಷೆಯಿದೆ ಹಾಗೂ ಇದು ಮತ್ತೊಂದು ದಾಖಲೆಯಾಗಲಿದೆ ಎಂದು ಗ್ರಿಫಿತ್ಸ್ ಹೇಳಿದರು.
ಡಿಎಕ್ಸ್ಬಿ ಎಂದೂ ಕರೆಯಲಾಗುವ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ವಾಯುಯಾನ ಉದ್ಯಮ ಮತ್ತು ದುಬೈನ ವ್ಯಾಪಕ ಆರ್ಥಿಕ ವ್ಯವಸ್ಥೆಯ ಮಾಪಕವಾಗಿದೆ.
ವರ್ಷದ ಮೊದಲಾರ್ಧದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರಯಾಣಿಕರು ಡಿಎಕ್ಸ್ಬಿ ಮೂಲಕ ಪ್ರಯಾಣಿಸಿದ್ದಾರೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್ ಕಿಂಗ್ಡಮ್ ಪ್ರಯಾಣಿಕರು ನಂತರದ ಸ್ಥಾನಗಳಲ್ಲಿದ್ದಾರೆ. ಚೀನಾ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ಸುಮಾರು ಒಂದು ಮಿಲಿಯನ್ಗೆ ಏರಿಕೆಯಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 80ರಷ್ಟು ಹೆಚ್ಚಳವಾಗಿದೆ.
ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಡಿಎಕ್ಸ್ಸಿ ನಿಲ್ದಾಣವನ್ನು ದುಬೈ ವರ್ಲ್ಡ್ ಸೆಂಟ್ರಲ್ನಲ್ಲಿರುವ ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಡಿಡಬ್ಲ್ಯೂಸಿ) ಸ್ಥಳಾಂತರಿಸುವ ಯೋಜನೆಗಳನ್ನು ಕಳೆದ ಏಪ್ರಿಲ್ನಲ್ಲಿ ಘೋಷಿಸಿದ್ದಾರೆ. ಇದು ನಗರದ ದಕ್ಷಿಣ ಭಾಗದಲ್ಲಿರುವ ವಾಯುನೆಲೆಯಾಗಿದೆ. ಅಲ್ ಮಕ್ತೌಮ್ ಇಂಟರ್ ನ್ಯಾಷನಲ್ ಏರ್ಪೋರ್ಟ್ ಸಂಪೂರ್ಣವಾಗಿ ನಿರ್ಮಾಣವಾದ ನಂತರ ಇದು ವರ್ಷಕ್ಕೆ 260 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಪಡೆಯಲಿದೆ.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ 54 ಸಾವಿರ ಕೋಟಿ ರೂಪಾಯಿ ಟೋಲ್ ಸಂಗ್ರಹ: ನಿತಿನ್ ಗಡ್ಕರಿ - NH Toll Fee Collection