ಟೆಹ್ರಾನ್ : ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರ ಅಜರ್ಬೈಜಾನ್ ಇರಾನ್ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಮತ್ತೆ ಆರಂಭ ಮಾಡಿದೆ. ಉಭಯ ದೇಶಗಳ ಮಧ್ಯದ ಉದ್ವಿಗ್ನತೆಯ ಶಮನಕ್ಕಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಮಾತುಕತೆಗಳು ನಡೆದ ನಂತರ ಟೆಹ್ರಾನ್ ನಲ್ಲಿರುವ ಅಜರ್ಬೈಜಾನ್ ರಾಯಭಾರ ಕಚೇರಿ ಸೋಮವಾರ ತನ್ನ ಕೆಲಸವನ್ನು ಪುನರಾರಂಭಿಸಿದೆ ಎಂದು ಇರಾನ್ನ ಅರೆ-ಅಧಿಕೃತ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.
ಇರಾನ್ ರಾಜಧಾನಿಯಲ್ಲಿ ರಾಯಭಾರ ಕಚೇರಿ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ ಎಂದು ಟೆಹ್ರಾನ್ನಲ್ಲಿರುವ ಅಜೆರಿ ರಾಯಭಾರ ಕಚೇರಿಯ ಮೂಲಗಳು ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿವೆ. ಆದರೆ ಇರಾನಿನ ವಿದೇಶಾಂಗ ಸಚಿವಾಲಯವು ಈ ಬೆಳವಣಿಗೆಯನ್ನು ದೃಢಪಡಿಸುವವರೆಗೂ ಇದನ್ನು ಅಧಿಕೃತವಾಗಿ ಹೇಳಲಾಗುವುದಿಲ್ಲ ಎಂದು ಮಾಧ್ಯಮ ಮೂಲಗಳು ಹೇಳಿವೆ.
2023 ರ ಜನವರಿಯಲ್ಲಿ ಬಂದೂಕುಧಾರಿಯೊಬ್ಬ ಇರಾನ್ ರಾಜಧಾನಿಯಲ್ಲಿರುವ ಅಜರ್ಬೈಜಾನ್ ರಾಯಭಾರ ಕಚೇರಿಗೆ ನುಗ್ಗಿ ಅದರ ಭದ್ರತಾ ಮುಖ್ಯಸ್ಥನನ್ನು ಕೊಂದು ಇಬ್ಬರು ಕಾವಲುಗಾರರನ್ನು ಗಾಯಗೊಳಿಸಿದ್ದ. ಈ ಘಟನೆಯ ನಂತರ ದೀರ್ಘಕಾಲದಿಂದ ಉದ್ವಿಗ್ನವಾಗಿರುವ ಇರಾನ್ ಮತ್ತು ಅಜರ್ಬೈಜಾನ್ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ.
ವೈಯಕ್ತಿಕ ಕಾರಣದಿಂದ ದಾಳಿ ನಡೆದಿದೆ ಎಂದು ಇರಾನ್ ಹೇಳಿದೆ. ಅಲ್ಲದೆ ದಾಳಿ ನಡೆಸಿದ ಬಂದೂಕುಧಾರಿಯ ಪತ್ನಿಯು ಅಜರ್ ಬೈಜಾನ್ ರಾಯಭಾರ ಕಚೇರಿಗೆ ಭೇಟಿ ನೀಡಿದ ನಂತರ ಆಕೆ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಿದೆ. ಆದರೆ ಅಜೆರಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಈ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ಕರೆದಿದ್ದಾರೆ.
ತನ್ನ ದೇಶದಲ್ಲಿನ ಸರ್ಕಾರವನ್ನು ಪತನಗೊಳಿಸಲು ಮುಸ್ಲಿಂ ಮೂಲಭೂತವಾದಿಗಳಿಗೆ ಇರಾನ್ ಬೆಂಬಲ ನೀಡುತ್ತಿದೆ ಎಂದು ಅಜರ್ಬೈಜಾನ್ ಆರೋಪಿಸಿತ್ತು. ಆದರೆ ಈ ಆರೋಪವನ್ನು ಟೆಹ್ರಾನ್ ನಿರಾಕರಿಸಿದೆ. ಏಪ್ರಿಲ್ 2023 ರಲ್ಲಿ, ಅಜರ್ಬೈಜಾನ್ ಇರಾನಿನ ನಾಲ್ವರು ರಾಜತಾಂತ್ರಿಕರನ್ನು ರಾಜಧಾನಿ ಬಾಕುದಿಂದ ಹೊರಹಾಕಿತು. ಒಂದು ತಿಂಗಳ ನಂತರ, ಟೆಹ್ರಾನ್ನಲ್ಲಿರುವ ಅಜರ್ಬೈಜಾನ್ ರಾಯಭಾರ ಕಚೇರಿ ಮತ್ತು ವಾಯುವ್ಯ ನಗರ ತಬ್ರಿಜ್ನಲ್ಲಿರುವ ಅದರ ದೂತಾವಾಸದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಅಜೆರಿ ರಾಜತಾಂತ್ರಿಕರನ್ನು ಇರಾನ್ ಹೊರಹಾಕಿತು.
ಮಾರ್ಚ್ 2023 ರಲ್ಲಿ ಅಜರ್ಬೈಜಾನ್ ಇಸ್ರೇಲ್ನಲ್ಲಿ ರಾಯಭಾರ ಕಚೇರಿಯನ್ನು ತೆರೆದಿದ್ದರಿಂದ ಉಭಯ ದೇಶಗಳ ನಡುವಿನ ಸಂಬಂಧಗಳು ಉದ್ವಿಗ್ನಗೊಂಡಿವೆ. ಅಜರ್ಬೈಜಾನ್ ಇಸ್ರೇಲ್ನೊಂದಿಗೆ ನಿಕಟ ಸಂಬಂಧ ಹೊಂದಿದೆ. ಆದರೆ ಟೆಹ್ರಾನ್ ಇಸ್ರೇಲ್ ಅನ್ನು ತನ್ನ ನಂಬರ್ ಒನ್ ಶತ್ರು ಎಂದು ಪರಿಗಣಿಸುತ್ತದೆ. ಅಜರ್ಬೈಜಾನ್ ಮತ್ತು ಇಸ್ರೇಲ್ ನಡುವಿನ ಸಂಬಂಧಗಳ ಬಲವರ್ಧನೆಯನ್ನು ಇರಾನ್ ಪದೇ ಪದೆ ವಿರೋಧಿಸಿದೆ.
ಇದನ್ನೂ ಓದಿ : ಆಧುನಿಕ ಗುಲಾಮಗಿರಿ: ಇಟಲಿಯಲ್ಲಿ ಇಬ್ಬರು ಭಾರತೀಯರ ಬಂಧನ - Indian nationals arrested in Italy