ನ್ಯೂಯಾರ್ಕ್: ನೀಲಿ ಚಿತ್ರತಾರೆ ಸ್ಟಾರ್ಮಿ ಡೇನಿಯಲ್ಸ್ ಬಾಯಿ ಮುಚ್ಚಿಸಲು ಅಕ್ರಮವಾಗಿ ಹಣ ನೀಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸುವ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿಯನ್ನು ನ್ಯೂಯಾರ್ಕ್ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಜೊತೆಗೆ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿಪಡಿಸಿರುವ ನ್ಯಾಯಾಧೀಶ ಜುವಾನ್ ಮರ್ಚನ್, ಮಾರ್ಚ್ 25 ರಂದು ರಿಪಬ್ಲಿಕನ್ ಪಕ್ಷದ ಪ್ರೈಮರಿಗಳ ಮಧ್ಯದಲ್ಲಿ ವಿಚಾರಣೆ ಮುಂದುವರಿಯಲಿದೆ ಎಂದು ಗುರುವಾರ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ನಾಮನಿರ್ದೇಶನದ ಮುಂಚೂಣಿಯಲ್ಲಿರುವ ಡೊನಾಲ್ಡ್ ಟ್ರಂಪ್ ಅವರು 34 ಆರೋಪಗಳನ್ನು ಎದುರಿಸುತ್ತಿದ್ದಾರೆ. 2016ರಲ್ಲಿ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರು, ಡೊನಾಲ್ಡ್ ಟ್ರಂಪ್ ತಮ್ಮ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದರು ಎಂದು ಆರೋಪಿಸಿದ್ದರು. ಚುನಾವಣೆ ಹೊತ್ತಲ್ಲಿ ಈ ಆರೋಪ ತಮ್ಮ ಗೆಲುವಿಗೆ ಮುಳುವಾಗಬಹುದು ಎನ್ನುವ ಆತಂಕದಲ್ಲಿ, ಸ್ಟಾರ್ಮಿ ಬಾಯಿ ಮುಚ್ಚಿಸಲು ಟ್ರಂಪ್ ಸುಮಾರು 1 ಕೋಟಿಗೂ ಹೆಚ್ಚು ಹಣವನ್ನು ಅಕ್ರಮವಾಗಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ವಿಚಾರಣೆಗೆ ಪ್ರಾರಂಭಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಟ್ರಂಪ್, "ಈ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ನಾನು ಅಧ್ಯಕ್ಷೀಯ ಚುನಾವಣೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅದಕ್ಕಾಗಿ ನನ್ನ ವಿರುದ್ಧ ಈ ರೀತಿ ಮಾಡಲಾಗುತ್ತಿದೆ. ಇದು ನನ್ನನ್ನು ಚುನಾವಣೆಯಲ್ಲಿ ಸೋಲಿಸುವ ಒಂದು ಮಾರ್ಗವಾಗಿದೆ. ಯಾಕೆಂದರೆ ದಿನವಿಡೀ ನಾನು ಮ್ಯಾನ್ಹ್ಯಾಟ್ನ ನ್ಯಾಯಾಲಯದಲ್ಲಿ ಕುಳಿತಿದ್ದರೆ, ಚುನಾವಣೆಗೆ ಹೇಗೆ ಸ್ಪರ್ಧಿಸಲು ಸಾಧ್ಯ" ಎಂದು ಹೇಳಿದರು.
ಇದು ಉದ್ದೇಶಪೂರ್ವಕ ಕೇಸ್ - ಟ್ರಂಪ್: ನ್ಯೂಯಾರ್ಕ್ ಹಾಗೂ ಇತರ ನಾಲ್ಕು ರಾಜ್ಯಗಳಲ್ಲಿ ಪ್ರಾಥಮಿಕ ಚುನಾವಣೆಗೆ ಒಂದು ವಾರದ ಮೊದಲು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದು ಚುನಾವಣಾ ಹಸ್ತಕ್ಷೇಪ. ಯಾಕೆಂದರೆ ಟ್ರಂಪ್ ಅವರು ಚುನಾವಣಾ ಪ್ರಚಾರದ ಬದಲು ಪ್ರಕರಣದ ವಿಚಾರಣೆಯಲ್ಲಿ ಸಮಯ ಕಳೆಯಬೇಕಾಗುತ್ತದೆ ಎಂದು ಟ್ರಂಪ್ ಪರ ವಕೀಲರು ಪ್ರತಿಪಾದಿಸಿದರು.
ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಒಂಬತ್ತು ತಿಂಗಳು ಬಾಕಿ ಇರುವ ಈ ಹೊತ್ತಲ್ಲಿ, 2020ರ ಚುನಾವಣಾ ಫಲಿತಾಂಶವನ್ನು ಉರುಳಿಸುವ ಪ್ರಯತ್ನಗಳು, ಚುನಾವಣಾ ಹಸ್ತಕ್ಷೇಪ, ಮಾನನಷ್ಟ, ವಂಚನೆ ಮತ್ತು ಅಧಿಕೃತ್ ರಹಸ್ಯ ಕಾನೂನು ಉಲ್ಲಂಘನೆ ಸೇರಿದಂತೆ ಸುಮಾರು 90 ಆರೋಪಗಳನ್ನು ಒಳಗೊಂಡಿರುವ ಸ್ಥಳೀಯ ಮತ್ತು ಫೆಡರಲ್ ಪ್ರಕರಣಗಳ ಜಾಲದಲ್ಲಿ ಟ್ರಂಪ್ ಸಿಕ್ಕಿಬಿದ್ದಿದ್ದಾರೆ.
ಅದೇ ಸಮಯದಲ್ಲಿ ಟ್ರಂಪ್ ಅವರ ಪ್ರತಿನಿಧಿ ಅಟ್ಲಾಂಟಾದಲ್ಲಿ ಪ್ರತ್ಯೇಕ ಪ್ರಕರಣವೊಂದರ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಟ್ರಂಪ್ ವಿರುದ್ಧ ಚುನಾವಣೆ ವಂಚನೆ ಆರೋಪ ಮಾಡಿರುವ ಪ್ರಾಸಿಕ್ಯೂಟರ್ ಅನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿದರು. ಗುರುವಾರ ಜಾರ್ಜಿಯಾ ರಾಜ್ಯದ ಅಟ್ಲಾಂಟಾದಲ್ಲಿ, ಟ್ರಂಪ್ ವಿರುದ್ಧ ಚುನಾವಣಾ ಹಸ್ತಕ್ಷೇಪದ ಆರೋಪವನ್ನು ಮಾಡಿದ್ದ ಸ್ಥಳೀಯ ಪ್ರಾಸಿಕ್ಯೂಟರ್, ಪ್ರಕರಣ ವಿಚಾರಣೆಗೆ ನೇಮಿಸಿದ್ದ ವಕೀಲೆಯೊಬ್ಬರ ಜೊತೆಗೆ ಖಾಸಗಿ ಸಂಬಂಧ ಹೊಂದಿದ್ದಾರೆ ಎಂದು ಟ್ರಂಪ್ ಪ್ರತಿನಿಧಿ ಆರೋಪಿಸಿದ್ದಾರೆ.
ವಕೀಲೆ ಫಾನಿ ವಿಲ್ಲೀಸ್ ಅವರು ಪ್ರಾಸಿಕ್ಯೂಟರ್ ನಾಥನ್ ವೇಡ್ ಅವರೊಂದಿಗೆ ಖಾಸಗಿ ಸಂಬಂಧ ಹೊಂದಿದ್ದಾರೆ ಎನ್ನುವುದು ದೃಢಪಟ್ಟರೆ, ಅವರು ಪ್ರಕರಣಕ್ಕೆ ವಕೀಲೆಯಾಗಿ ನೇಮಕಗೊಳ್ಳುವ ಮೊದಲು, 6,50,000 ಡಾಲರ್ ಹಣವನ್ನು ಪಡೆದಿದ್ದು, ಇದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಬಹುದು ಜೊತೆಗೆ ಕೇಸ್ನಿಂದ ಅವರನ್ನು ಅನರ್ಹಗೊಳಿಸಬಹುದು. ಒಂದು ವೇಳೆ ಹೀಗೆ ನಡೆದರೆ, ಪ್ರಕರಣವನ್ನು ಇನ್ನೊಬ್ಬ ಪ್ರಾಸಿಕ್ಯೂಟರ್ ಕೈಗೆತ್ತಿಕೊಳ್ಳಬೇಕಾಗುತ್ತದೆ. ಆಗ ವಿಚಾರಣೆ ಮತ್ತೂ ವಿಳಂಬವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: 2020ರ ಪ್ರಕರಣ: ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ ಟ್ರಂಪ್