ಪೇಶಾವರ, ಪಾಕಿಸ್ತಾನ: ಪ್ರಕ್ಷುಬ್ಧ ವಾಯುವ್ಯ ಪಾಕಿಸ್ತಾನದಲ್ಲಿ ಸೋಮವಾರ ಭದ್ರತಾ ಪಡೆಗಳ ಬಾಂಬ್ ವಿಲೇವಾರಿ ಘಟಕದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ವಜಿರಿಸ್ತಾನ್ ಜಿಲ್ಲೆಯ ಜನ್ನತಾದಲ್ಲಿ ಉಗ್ರರ ಬಾಂಬ್ ಅನ್ನು ಭದ್ರತಾ ಪಡೆಗಳು ನಿಷ್ಕ್ರಿಯಗೊಳಿಸಿವೆ. ಆದರೆ, ಉಗ್ರರು ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆ ಪ್ರದೇಶವನ್ನು ಸೀಲ್ ಮಾಡಿ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಪೇಶಾವರ ಜಿಲ್ಲೆಯ ಖೈಬರ್ ಪಖ್ತುಂಖ್ವಾದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಅಲಿಖೇಲ್ ಪ್ರದೇಶದ ಮಸೀದಿಯಿಂದ ಭದ್ರತಾ ಸಿಬ್ಬಂದಿಯೊಬ್ಬರನ್ನು ಉಗ್ರರು ಅಪಹರಿಸಿದ್ದಾರೆ. ಪ್ರಾಂತ್ಯದ ದಕ್ಷಿಣ ಭಾಗಗಳಲ್ಲಿ ಕಳೆದೆರಡು ತಿಂಗಳುಗಳಿಂದ ಪೊಲೀಸ್ ಮತ್ತು ಎಫ್‌ಸಿಯ ಭದ್ರತಾ ಸಿಬ್ಬಂದಿ ಅಪಹರಿಸುವ ಪ್ರಕರಣಗಳು ಹೆಚ್ಚುತ್ತಿವೆ.
ಇದನ್ನು ಓದಿ: ಮಾನವ ಹಕ್ಕುಗಳಿಗೋಸ್ಕರ ಎತ್ತಿದ ಕೈಗೆ ಕೋಳ ತೊಡಿಸಿದ ಪಾಕ್ ಪೊಲೀಸರು; ಇದಕ್ಕಿದೆ ಕಾಶ್ಮೀರದ ಲಿಂಕು!