ವಾಷಿಂಗ್ಟನ್: ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್-I.C.E ಇತ್ತೀಚೆಗೆ ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ನಿವಾಸಿಗಳ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಒಟ್ಟು 14.45 ಲಕ್ಷ ಅಕ್ರಮ ವಲಸಿಗರಿದ್ದಾರೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ. ಈ ಪಟ್ಟಿಯಲ್ಲಿ ಹೊಂಡುರಾಸ್ 2 ಲಕ್ಷದ 61 ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಇನ್ನು ಗ್ವಾಟೆಮಾಲಾ ಎರಡನೇ ಸ್ಥಾನದಲ್ಲಿದೆ. I.C.E ವರದಿಯ ಪ್ರಕಾರ ಈ ಪಟ್ಟಿಯಲ್ಲಿ ಸುಮಾರು 18 ಸಾವಿರ ಭಾರತೀಯ ಅಕ್ರಮ ವಲಸೆಗಾರರಿದ್ದಾರೆ. ಸುಮಾರು 37 ಸಾವಿರ ಚೀನಿಯರು ಸಹ ಗಡಿಪಾರು ಆಗುವ ಭೀತಿಗೆ ಸಿಲುಕಿದ್ದಾರೆ.
ಸಿಗುತ್ತಾ ಐಸಿಇ ಅನುಮತಿ: ಹಾಗೆ ನೋಡಿದರೆ ಅಮೆರಿಕದಲ್ಲಿ ಲಕ್ಷಾಂತರ ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಅವರೆಲ್ಲರೂ ತಮ್ಮ ವಾಸವನ್ನು ಕಾನೂನುಬದ್ಧಗೊಳಿಸಿಕೊಳ್ಳುವುದಕ್ಕಾಗಿ ತೀವ್ರ ಯತ್ನ ನಡೆಸಿದ್ದರೂ I.C.E ಯಿಂದ ಅನುಮತಿ ಪಡೆಯಲು ವರ್ಷಗಳು ಬೇಕಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಕಠಿಣ ಕ್ರಮ ಎಂದಿರುವ ಹೊಸ ಅಧ್ಯಕ್ಷರಾಗಲಿರುವ ಟ್ರಂಪ್: ಅಕ್ರಮ ವಲಸಿಗರ ಬಗ್ಗೆ ಟ್ರಂಪ್ ಹಿಂದಿನಿಂದಲೂ ಕಠಿಣ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಇನ್ನು ಮೆಕ್ಸಿಕೋ ಗಡಿಯಿಂದ ಅಮೆರಿಕಕ್ಕೆ ಬರುವವರ ಬಗ್ಗೆಯಂತೂ ಟ್ರಂಪ್ಗೆ ಭಾರಿ ಆಕ್ರೋಶವಿದೆ. ಈ ಬಗ್ಗೆ ಈಗಾಗಲೇ ಮಾತನಾಡಿರುವ ಅವರು, ಅಕ್ರಮ ವಲಸಿಗರಿಗೆ ಕರುಣೆ ತೋರುವ ಉದ್ದೇಶ ನನಗಿಲ್ಲ, ಅಧಿಕಾರ ವಹಿಸಿಕೊಂಡ ತಕ್ಷಣ ಅವರನ್ನು ದೇಶದಿಂದ ಗಡಿಪಾರು ಮಾಡುವುದಾಗಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.
ಸಮಸ್ಯೆಗಳ ಪರಿಹಾರಕ್ಕೆ ನಡೆದಿದೆ ಯತ್ನ: ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ ಭಾರತೀಯರ ವಿಚಾರದಲ್ಲಿ ಭಾರತದಿಂದ ಯಾವುದೇ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ ಎಂದು ಐ.ಸಿ.ಇ. ಹೇಳಿದೆ. ಎರಡೂ ದೇಶಗಳು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಿವೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ನೂತನ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಕಾನೂನು ವಲಸಿಗರಿಗೆ ಮಾರ್ಗವನ್ನು ಸುಲಭಗೊಳಿಸುವುದಾಗಿ ಹೇಳಿದ್ದಾರೆ. ಅಕ್ರಮ ವಲಸಿಗರ ಹೆಚ್ಚಿನ ಮಕ್ಕಳು ಅಮೆರಿಕದಲ್ಲಿ ಹುಟ್ಟಿ ಬೆಳೆದಿದ್ದು, ಅನೇಕರು ಉತ್ತಮ ಉದ್ಯೋಗ ಮತ್ತು ವೃತ್ತಿಗಳನ್ನು ಮಾಡುತ್ತಿದ್ದಾರೆ ಎಂದು ಟ್ರಂಪ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಹೀಗಾಗಿ ಡಯಾಸ್ಪೊರಾದಲ್ಲಿರುವ ಕೆಲವು ಭಾರತೀಯರು ನಿರಾಳರಾಗಿದ್ದಾರೆ.
ಇದನ್ನು ಓದಿ:ಟ್ರಂಪ್ ಅಚ್ಚರಿಯ ನಡೆ: ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್‌ಗೆ ಆಹ್ವಾನ