ಗಾಜಾ: ಗಾಜಾದ ಎರಡನೇ ಅತಿದೊಡ್ಡ ನಗರವಾದ ಖಾನ್ ಯೂನಿಸ್ ನಲ್ಲಿರುವ ನಾಸಿರ್ ಮೆಡಿಕಲ್ ಕಾಂಪ್ಲೆಕ್ಸ್ ಆಸ್ಪತ್ರೆಯ ಮೇಲೆ ಮುತ್ತಿಗೆ ಹಾಕಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 150 ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಖೇದ್ರಾ ಮಾತನಾಡಿ, ಮೃತರನ್ನು ಆಸ್ಪತ್ರೆಯ ಆವರಣ ಪ್ರದೇಶದಲ್ಲಿಯೇ ಹೂಳುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ.
"ನಾಸಿರ್ ಮೆಡಿಕಲ್ ಕಾಂಪ್ಲೆಕ್ಸ್ನ ಶವಾಗಾರದಲ್ಲಿ ಇನ್ನೂ 30 ಅಪರಿಚಿತ ಶವಗಳಿವೆ. ನಾಸಿರ್ ಆಸ್ಪತ್ರೆ ರಕ್ತ ಸಂಗ್ರಹದ ತೀವ್ರ ಕೊರತೆ ಎದುರಿಸುತ್ತಿದೆ ಮತ್ತು ಅನೇಕ ಅರಿವಳಿಕೆ ಔಷಧಿಗಳು ಮುಗಿದಿವೆ" ಎಂದು ಅವರು ತಿಳಿಸಿದರು.
ಇಂಧನ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿನ ಜನರೇಟರ್ಗಳನ್ನು ಮುಂದಿನ ನಾಲ್ಕು ದಿನಗಳಲ್ಲಿ ಸ್ಥಗಿತಗೊಳಿಸಲಾಗುವುದು. ಗುಂಡಿನ ದಾಳಿ ಮತ್ತು ಇಸ್ರೇಲಿ ಡ್ರೋನ್ ದಾಳಿಗಳಿಂದ ಹೊತ್ತಿಕೊಂಡ ಬೆಂಕಿಯ ಪರಿಣಾಮದಿಂದ ನೀರಿನ ಟ್ಯಾಂಕ್ಗಳು ಹಾನಿಗೊಳಗಾಗಿವೆ ಮತ್ತು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಹಲವಾರು ಕಟ್ಟಡಗಳಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಅಶ್ರಫ್ ಅಲ್-ಖೇದ್ರಾ ಕಳವಳ ವ್ಯಕ್ತಪಡಿಸಿದರು.
"ಇಸ್ರೇಲ್ ಖಾನ್ ಯೂನಿಸ್ನಲ್ಲಿರುವ ನಾಸಿರ್ ಮೆಡಿಕಲ್ ಕಾಂಪ್ಲೆಕ್ಸ್ ಮತ್ತು ಹೋಪ್ ಆಸ್ಪತ್ರೆಯನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸುತ್ತಿದೆ ಮತ್ತು ಆಂಬ್ಯುಲೆನ್ಸ್ಗಳ ಕಾರ್ಯಾಚರಣೆಯನ್ನು ತಡೆಯುತ್ತಿದೆ" ಎಂದು ಅವರು ಆರೋಪಿಸಿದರು. ಅದರೆ ಇಸ್ರೇಲ್ ಈ ಆರೋಪಗಳನ್ನು ನಿರಾಕರಿಸಿದೆ.
ಇಸ್ರೇಲ್ ರಕ್ಷಣಾ ಪಡೆಗಳು ಖಾನ್ ಯೂನಿಸ್ನ ಅಲ್-ಅಮಲ್ ಮತ್ತು ನಾಸಿರ್ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಯೊಂದಿಗೆ ದೂರವಾಣಿ ಸಂಪರ್ಕದಲ್ಲಿವೆ ಎಂದು ಶುಕ್ರವಾರ ಕ್ಸಿನ್ಹುವಾಗೆ ಕಳುಹಿಸಿದ ಹೇಳಿಕೆಯಲ್ಲಿ ಇಸ್ರೇಲ್ ಹೇಳಿಕೊಂಡಿದೆ. ಆಸ್ಪತ್ರೆಗಳನ್ನು ಸ್ಥಳಾಂತರಿಸುವ ಯಾವುದೇ ಅಗತ್ಯವಿಲ್ಲ ಹಾಗೂ ದಕ್ಷಿಣ ಗಾಜಾ ಪಟ್ಟಿಯ ಅತಿದೊಡ್ಡ ನಗರವಾದ ಖಾನ್ ಯೂನಿಸ್ನಲ್ಲಿ ಹಮಾಸ್ ಉಗ್ರರ ವಿರುದ್ಧ ಪಡೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸೇನೆ ತಿಳಿಸಿದೆ.
2023 ರ ಅಕ್ಟೋಬರ್ 7 ರಿಂದ ಗಾಜಾ ಪಟ್ಟಿಯ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿಯಿಂದ ಗಾಜಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 26,257 ಕ್ಕೆ ಏರಿದೆ ಎಂದು ಹಮಾಸ್ ನಿಯಂತ್ರಣದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ಸೇನೆಯು 174 ಪ್ಯಾಲೆಸ್ಟೈನಿಯರನ್ನು ಕೊಂದಿದೆ ಮತ್ತು 310 ಜನರನ್ನು ಗಾಯಗೊಳಿಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಿಂದ ಕನಿಷ್ಠ 64,797 ಪ್ಯಾಲೆಸ್ಟೈನಿಯರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ಸಿಗದಿರುವುದು ಅರ್ಥಹೀನ: ಮಸ್ಕ್