ನವದೆಹಲಿ: ತಾವು ಸೇವಿಸುವ ಆಹಾರದಲ್ಲಿ ಯಾವೆಲ್ಲಾ ಅಂಶಗಳು ಇರುತ್ತವೆ ಎಂಬ ಕುರಿತು ಭಾರತೀಯರು ಪ್ರಶ್ನಿಸಬೇಕು ಎಂದು ಝೆರೋದಾ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಸಲಹೆ ನೀಡಿದ್ದಾರೆ. ಮಸಾಲೆ ಪದಾರ್ಥಗಳು, ಹಾಲು ಮತ್ತು ಪ್ರೋಟಿನ್ನಂತಹ ಆಹಾರಗಳು ನಮ್ಮನ್ನು ನಿಧಾನವಾಗಿ ಕೊಲ್ಲುತ್ತಿವೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಮತ್, 'ಭಾರತೀಯರಾದ ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎಂಬುದನ್ನು ಪ್ರಶ್ನಿಸಬೇಕಿದೆ. ಅದರಲ್ಲೇನಿದೆ ಎಂದು ಅರಿಯಬೇಕು. ನಾವು ಹೆಚ್ಚು ಪ್ರಶ್ನಿಸಿದಲ್ಲಿ ಮಾತ್ರ ನಮಗೆ ಉತ್ತಮ ಆಯ್ಕೆಗಳು ಲಭ್ಯವಾಗುತ್ತವೆ. ಅದರಲ್ಲೂ ನಮ್ಮ ಆಹಾರದಲ್ಲಿ ಸಕ್ಕರೆ ಅಂಶ ಅಗಾಧವಾಗಿವೆ' ಎಂದು ತಿಳಿಸಿದ್ದಾರೆ.
'ಮಸಾಲೆಗಳು, ಹಾಲು ಮತ್ತು ಪ್ರೋಟೀನ್ ಪೂರಕಗಳಂತಹ ಅಗತ್ಯ ಆಹಾರ ಪದಾರ್ಥಗಳಲ್ಲಿ ವ್ಯಾಪಕವಾಗಿ ಕಲಬೆರಕೆ ಕಾಣಬಹುದು. ಅಲ್ಲದೇ, ತರಕಾರಿ, ಹಣ್ಣುಗಳ ಸಂರಕ್ಷಣೆಗೆ ಬಳಸುವ ರಾಸಾಯನಿಕಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಪ್ಯಾಕೇಜ್ ಮಾಡಿದ ಆಹಾರ ಮತ್ತು ರೆಸ್ಟೋರೆಂಟ್ಆಹಾರಗಳಿಗೂ ಇದು ಅನ್ವಯವಾಗುತ್ತದೆ' ಎಂದಿದ್ದಾರೆ.
ಅನೇಕರು ನಿತಿನ್ ಕಾಮತ್ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ. ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಅರಿವು ಹೊಂದಿರುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.
ಓರ್ವ ಬಳಕೆದಾರರು, ಹಾಲು, ಪನೀರ್, ಸಕ್ಕರೆ, ಉಪ್ಪು, ಮೈದಾದಂತಹ ಬಿಳಿ ಬಣ್ಣದ ಉತ್ಪನ್ನಗಳನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಲ್ಲಿ ಸಾಕಷ್ಟು ಕಲಬೆರಕೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ನಿತಿನ್ ಕಾಮತ್ ಇತ್ತೀಚಿಗೆ ಲಘು ಪಾರ್ಶ್ವವಾಯುವಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳಪೆ ನಿದ್ರೆ, ಬಳಲಿಕೆಯ ಹೊರತಾಗಿ ನಿರ್ಜಲೀಕರಣ ಹಾಗೂ ತಂದೆಯ ಅಗಲಿಕೆ ತಮ್ಮ ಆರೋಗ್ಯ ಪರಿಸ್ಥಿತಿಗೆ ಕಾರಣವಾಗಿರಬಹುದು ಎಂದು ಹೇಳಿದ್ದರು.(ಐಎಎನ್ಎಸ್)
ಇದನ್ನೂ ಓದಿ: ಪಾರ್ಶ್ವವಾಯುವಿಗೆ ಕಾರಣವಾಗಬಹುದೇ ನಿರ್ಜಲೀಕರಣ?