ಪುತ್ತೂರು: ಕೃಷಿಕರೊಬ್ಬರ ಪ್ರಯತ್ನಕ್ಕೆ ಉತ್ತಮ ಫಲ ಲಭಿಸಿದೆ. ಇದೀಗ ಅಡಿಕೆ ಬೆಳೆಗಾರರಿಗೂ ಹೆಮ್ಮೆಯ ಸಂಗತಿ ಇದಾಗಿದೆ. ಅಡಿಕೆಯಿಂದ ವಿವಿಧ ಬಗೆಯ ಔಷಧಿ ತಯಾರಿಕೆ ಸಾಧ್ಯ ಎಂಬುದು ಈಗಾಗಲೇ ಅಧ್ಯಯನಗಳಿಂದ ತಿಳಿಸಿವೆ. ಕೆಲವು ಔಷಧಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ಮಧ್ಯೆಯೇ ಹಣ್ಣಡಿಕೆಯ ಸಿಪ್ಪೆಯಿಂದ ರಸ ತೆಗೆದು ಅದನ್ನು ಸಂಸ್ಕರಿಸಿ ಸೋಪು ತಯಾರಿಕೆ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ರೈತ ಕುಟುಂಬಸ್ಥರು ಹರ್ಬಲ್ ಸ್ನಾನದ ಸೋಪ್ ತಯಾರಿಸಿದ್ದಾರೆ.
ಅವರು 2021ರ ನವೆಂಬರ್‌ನಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಎಲ್ಲಾ ಹಂತಗಳನ್ನು ದಾಟಿ ಇದೀಗ ಪೇಟೆಂಟ್ ಕೂಡ ಪಡೆದುಕೊಂಡಿದ್ದಾರೆ. ವಿಶೇಷ ಉತ್ಪನ್ನದ ಹಕ್ಕುಸ್ವಾಮ್ಯವನ್ನು ಮುಂದಿನ 20 ವರ್ಷಗಳಿಗೆ ಕಾಯ್ದಿರಿಸಿಕೊಂಡಿದ್ದಾರೆ. ಇದರಿಂದ ಅಡಿಕೆಯ ಮೌಲ್ಯ ವರ್ಧನೆ ಹಾಗೂ ಅಡಿಕೆಯಲ್ಲಿರುವ ಔಷಧೀಯ ಗುಣಗಳಿಗೆ ಆದ್ಯತೆ ನೀಡಿದಂತಾಗಿದೆ. ಇದರಿಂದ ಅಡಿಕೆ ಬೆಳೆಗಾರರಿಗೂ ಬಲ ಬಂದಿದೆ.
ಏನಿದರ ಆರೋಗ್ಯ ಲಾಭಗಳು; ಸಂಸ್ಥೆಯ ಮುಖ್ಯಸ್ಥರಾಗಿರುವ ಮುರಳೀಧರ ಹಾಗೂ ಮೀರಾ ಮುರಳೀಧರ ಅವರು ಈ ಅಧ್ಯಯನದ ಹಿಂದೆ ಕೆಲಸ ಮಾಡಿದ್ದಾರೆ. ಹಣ್ಣಡಿಕೆಯ ಸಿಪ್ಪೆಯ ರಸ, ತೆಂಗಿನ ಎಣ್ಣೆ, ಸಾಗುವಾನಿ ಎಲೆ, ಅರಿಶಿನ ಎಣ್ಣೆ ಕೊತ್ತಂಬರಿ ಮತ್ತು ಲಾವಂಚದಂತಹ ಗಿಡಮೂಲಿಕೆಗಳ ಸಾರಗಳಿಂದ ಈ ಸೋಪು ಸಿದ್ಧ ಮಾಡಲಾಗುತ್ತಿದೆ. ಈ ಸೋಪು ಬಳಕೆಯಿಂದ ಚರ್ಮದ ಆರೋಗ್ಯ ಸುಧಾರಣೆಯಾಗುತ್ತದೆ. ಚರ್ಮರೋಗ ಸೇರಿದಂತೆ ಮಾಯಿಶ್ಚರೈಸರ್ ಆಗಿ, ಬಿಳಿ ಮಚ್ಚೆ (ಸಿಬ್ಬ) ನಿವಾರಣೆಗೆ ಸಹಾಯ ಮಾಡುತ್ತದೆ. ತುರಿಕೆ, ಗಾಯಗಳನ್ನು ಗುಣಪಡಿಸುತ್ತದೆ ಎನ್ನುವುದು ಅಧ್ಯಯನಗಳಿಂದ ತಿಳಿದಿದೆ. ಹಣ್ಣಡಿಕೆ ಸಿಪ್ಪೆಯ ರಸದಿಂದ ಈ ಸಾಬೂನು ತಯಾರಿಸುತ್ತಿದ್ದೇವೆ. ಈಗ ಪೇಟೆಂಟ್ ಪಡೆದುಕೊಳ್ಳಲಾಗಿದೆ. ಸದ್ಯ ನಮ್ಮಲ್ಲಿಯೇ ಲಭ್ಯ ಇರುವ ಅಡಿಕೆಯ ಸಿಪ್ಪೆಯಿಂದ ರಸ ತೆಗೆಯಲಾಗುತ್ತದೆ ಎನ್ನುತ್ತಾರೆ ಸತ್ವಂ ಸಂಸ್ಥೆಯ ಮುಖ್ಯಸ್ಥ ಮುರಳೀಧರ್.
ಮುರಳೀಧರ್ ಅವರ ಪತ್ನಿ ಮೀರಾ ಅವರು ಕೂಡಾ ಗೃಹಿಣಿ. ಅಧ್ಯಯನ ಇವರಿಬ್ಬರ ಆಸಕ್ತಿಯ ವಿಷಯವಾಗಿತ್ತು. ಮನೆಯಲ್ಲಿ ಕುಡಿಯುವ ನೀರಿಗೆ ಲಾವಂಚ ಬಳಕೆ ಮಾಡುತ್ತಿದ್ದರು. ಈ ನೀರು ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುವುದನ್ನು ಮನಗಂಡು ಈ ಬಗ್ಗೆಯೇ ಹೆಚ್ಚಿನ ಅಧ್ಯಯನ ನಡೆಸಿ ಸತ್ವಂ ಎನ್ನುವ ಬ್ರಾಂಡ್ ಮೂಲಕ ನೀರು ತಯಾರಿಕೆ ಮಾಡಿದರು. ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಾಗುವ ನೀರು ಹಲವು ಕಡೆ ಬೇಡಿಕೆ ಪಡೆಯಿತು. ಈ ನೀರು ಅನೇಕರ ಗಮನ ಸೆಳೆಯಿತು. ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಶಿ ಅವರು ಕೊರೋನಾ ಸಮಯದವರೆಗೂ ಪುತ್ತೂರಿನಿಂದ ಈ ನೀರನ್ನು ತರಿಸಿ ಬಳಕೆ ಮಾಡುತ್ತಿದ್ದರು ಎಂದು ತಿಳಿಸುತ್ತಾರೆ ಮುರಳೀಧರ್.
ನೀರಿನ ಜೊತೆಗೆ ವಿವಿಧ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರು ಮಾಡುವ ಹಾಗೂ ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಅಡಿಕೆ ಸಿಪ್ಪೆಯ ರಸದಿಂದ ತಯಾರು ಮಾಡಬಹುದಾದ ಸಾಬೂನು ಬಗ್ಗೆ ಅಡಿಕೆ ಕೃಷಿಕ, ಸಂಶೋಧಕ ಬದನಾಜೆ ಶಂಕರ ಭಟ್ ಹಾಗೂ ಆಯುರ್ವೇದ ವೈದ್ಯರಿಂದ ಮಾಹಿತಿ ಪಡೆದು ಸಾಬೂನು ತಯಾರಿಕೆಗೆ ಇಳಿದಿದ್ದರು. ಅದರ ಎಲ್ಲಾ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಮಾರುಕಟ್ಟೆಗೆ ಬಿಟ್ಟಿದ್ದರು. ಇದೀಗ ಪೇಟೆಂಟ್ ಕೂಡಾ ಪಡೆದುಕೊಂಡಿದ್ದಾರೆ.
ಅಡಿಕೆ ಸಿಪ್ಪೆಯ ರಸದಿಂದಲೇ ಸೋಪು ತಯಾರಿಕೆಗೆ ಕಾರಣ ಇದೆ. ಹಿಂದೆ ಹಣ್ಣಾದ ಅಡಿಕೆ ಸಿಪ್ಪೆಯನ್ನು ಮೈಯಲ್ಲಿ ಗಾಯವಾದಾಗ, ಮಚ್ಚೆಗಳು ಇದ್ದಾಗ ಉಜ್ಜುತ್ತಿದ್ದರು. ಇದರಿಂದ ಕೆಲವು ದಿನಗಳಲ್ಲಿ ವಾಸಿಯಾಗುತ್ತಿತ್ತು. ಹೀಗಾಗಿ ಇದೇ ಮಾಹಿತಿಯ ಆಧಾರದಲ್ಲಿ ಬದನಾಜೆ ಶಂಕರ ಭಟ್ ಹಾಗೂ ಆಯುರ್ವೇದ ವೈದ್ಯರಿಂದ ಮಾಹಿತಿ ಪಡೆದಿದ್ದರು ಮುರಳೀಧರ ಅವರು. ಈಗಾಗಲೇ ಅಡಿಕೆಯಿಂದ ಚಾಕೋಲೇಟ್, ಸೋಪು, ವೈನ್ ಸೇರಿದಂತೆ ವಿವಿಧ ಬಗೆ ಪರ್ಯಾಯ ವಸ್ತುಗಳನ್ನು ಮಾಡಲಾಗಿದೆ. ಇದೀಗ ಅಡಿಕೆಯ ರಸದಿಂದ ತಯಾರು ಮಾಡಿರುವ ಈ ಸೋಪುನಿಂದ ಅಡಿಕೆ ಬೆಳೆಗಾರರಿಗೆ ಬಲ ತಂದಿದೆ.