ಮೈಸೂರು: "ಚನ್ನಪಟ್ಟಣದಲ್ಲಿ ನಿಖಿಲ್ಗೆ ಉತ್ತಮ ವಾತಾವರಣವಿದೆ. ಜನತೆಯ ಆಶೀರ್ವಾದ ಅವರ ಪರವಾಗಿದ್ದು, ಗೆಲ್ಲುವ ವಿಶ್ವಾಸವಿದೆ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಗನ ಗೆಲುವಿಗಾಗಿ ಹುಣ್ಣಿಮೆಯ ದಿನ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
"ನಿನ್ನೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಸುದ್ದಿಗೋಷ್ಠಿಯಲ್ಲಿ ಕೆಲವು ರಾಜಕೀಯ ಘಟನಾವಳಿಗಳನ್ನು ಮಾತ್ರ ವಿವರಿಸಿದ್ದಾರೆ. ಸಚಿವ ಜಮೀರ್ ಹೇಳಿಕೆಗೂ ನಿಖಿಲ್ ಚುನಾವಣೆಗೂ ಸಂಬಂಧವಿಲ್ಲ. ಜಮೀರ್ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ" ಎಂದರು.
ಜಮೀರ್ ಅಹಮದ್ರನ್ನು ಕುಳ್ಳ ಎಂದಿಲ್ಲ: "ನಾನು ಜಮೀರ್ ಅಹಮದ್ ಕುಳ್ಳ ಎಂದಿಲ್ಲ. ಈ ವಿಚಾರವನ್ನು ಫಲಿತಾಂಶದ ನಂತರ ಮಾತನಾಡುತ್ತೇನೆ. ಕಾಂಗ್ರೆಸ್ನವರು ಎಲ್ಲಾ ಪ್ರಕರಣಕ್ಕೂ ಎಸ್.ಐ.ಟಿ. ರಚನೆ ಮಾಡುತ್ತಿದ್ದಾರೆ. 50 ಕೋಟಿ ನೀಡಿ ಶಾಸಕರ ಖರೀದಿಗೆ ಮುಂದಾಗಿದ್ದಾರೆ ಎಂಬ ಆರೋಪದ ತನಿಖೆಗೂ ಎಸ್.ಐ.ಟಿ. ರಚನೆ ಮಾಡಿ ತನಿಖೆ ಮಾಡಿಸಲಿ. ದೇಶದಲ್ಲಿ ಎಸ್.ಐ.ಟಿ. ರಚನೆಯಲ್ಲಿ ಕಾಂಗ್ರೆಸ್ನವರು ಮುಂದಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಇದನ್ನೂ ಓದಿ: ಕರಿಯಾ ಎಂದಿದ್ದಕ್ಕೆ ವರ್ಣಭೇದ ಅಂತ ದೂರು ಕೊಡಲು ಹೇಳಿ: ಡಿಕೆ ಶಿವಕುಮಾರ್