ಹೈದರಾಬಾದ್: ಉತ್ತಮ ಆರೋಗ್ಯದ ನಿರ್ವಹಣೆಯಲ್ಲಿ ಗುಣಮಟ್ಟದ ನಿದ್ದೆ ಪ್ರಮುಖವಾಗಿದೆ. ಇದು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಣೆ ಮಾಡುತ್ತದೆ. ಜೊತೆಗೆ ಚಯಾಪಚಯವನ್ನು ನಿಯಂತ್ರಣ, ಒತ್ತಡ ನಿವಾರಣೆ ಮಾಡಿ, ಮೆದುಳಿನ ಪುನರುಜ್ಜೀವನ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಬಹುಸಂಖ್ಯೆಯ ಜನರಲ್ಲಿ ನಿದ್ರಾಹೀನತೆ ಹೆಚ್ಚಿನ ಪರಿಣಾಮವನ್ನು ಹೊಂದಿದೆ. ಮೂರರಲ್ಲಿ ಒಬ್ಬರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಮಾರ್ಚ್ 14 ರಂದು ವಿಶ್ವ ನಿದ್ರಾ ದಿನ ಆಚರಿಸಲಾಗುತ್ತದೆ. ಈ ದಿನದಂದು ಜಾಗತಿಕವಾಗಿ ನಿದ್ರೆಯ ಮಹತ್ವ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ನಡೆಸಲಾಗುವುದು.
ವಿಶ್ವ ನಿದ್ರಾ ದಿನದ ಇತಿಹಾಸ: ವರ್ಲ್ಡ್ ಅಸೋಸಿಯೇಷನ್ ಆಫ್ ಸ್ಲೀಪ್ ಮೆಡಿಸಿನ್ ಮತ್ತು ವರ್ಲ್ಡ್ ಸ್ಲೀಪ್ ಫೆಡರೇಶನ್ ವಿಶ್ವ ನಿದ್ರಾ ದಿನವನ್ನು ಆರಂಭಿಸಿದೆ. 2008ರಲ್ಲಿ ಈ ದಿನಾಚರಣೆ ಅಸ್ತಿತ್ವಕ್ಕೆ ಬಂದಿದ್ದು, ಈ ಮೂಲಕ ನಿದ್ರಾ ಆರೋಗ್ಯವನ್ನು ವಿಶ್ವದಾದ್ಯಂತ ಹೆಚ್ಚಿಸಲು ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಈ ಕುರಿತು ಶಿಕ್ಷಣ, ಸಂಶೋಧನೆ ಮತ್ತು ರೋಗಿಗಳ ಆರೈಕೆ ಉತ್ತೇಜಿಸಿ ನಿದ್ರೆಯ ಸಮಸ್ಯೆ ಹೋಗಲಾಡಿಸುವ ಗುರಿಯನ್ನು ಇದು ಹೊಂದಿದೆ.
ಈ ವರ್ಷದ ವಿಶ್ವ ನಿದ್ರಾ ದಿನದ ಧ್ಯೇಯವಾಕ್ಯ:
ಈ ವರ್ಷ ಅಂದರೆ, 2024ರ ವಿಶ್ವ ನಿದ್ರಾ ದಿನದ ಘೋಷವಾಕ್ಯ ಜಾಗತಿಕ ಆರೋಗ್ಯಕ್ಕಾಗಿ ನಿದ್ರೆಯ ನೀತಿ. ಇದು ಸಂಪೂರ್ಣ ಆರೋಗ್ಯ ವಿಚಾರದಲ್ಲಿ ನಿದ್ರೆಯ ನಿರ್ವಹಣೆ ಪಾತ್ರವನ್ನು ಒತ್ತಿ ಹೇಳುತ್ತದೆ. ಇದರ ಪ್ರಾಮುಖ್ಯತೆ ಹೊರತಾಗಿ, ಅನೇಕ ಜನರಲ್ಲಿ ಈ ನಿದ್ರೆ ಸಮಸ್ಯೆ ಮುಂದುವರೆಯುತ್ತದೆ. ಅನಾರೋಗ್ಯ ಸಮಸ್ಯೆ ಹೆಚ್ಚುವರಿಗೆ ಇದು ಕಾರಣವಾಗುತ್ತದೆ.
ನಿದ್ರೆಯ ಲಾಭ: ಅತ್ಯುತ್ತಮ ಆರೋಗ್ಯಕ್ಕಾಗಿ ನಿದ್ರೆಯ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳುವುದು ಅವಶ್ಯವಾಗಿದೆ. ನಿದ್ರೆ ಹಲವು ಪ್ರಯೋಜನ ಹೊಂದಿದೆ. ಸ್ಮರಣೆಯಿಂದ ಹೃದಯದ ಆರೋಗ್ಯ, ಖಿನ್ನತೆ ಅಪಾಯ ಕಾಪಾಡುವಲ್ಲಿ ನಿದ್ರೆ ಪ್ರಮುಖವಾಗಿದೆ. ನಿದ್ರೆಗೆ ಪ್ರಾಮುಖ್ಯತೆ ನೀಡುವುದರ ಜೊತೆಗೆ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ನಿರ್ವಹಣೆ ಕೂಡ ಅವಶ್ಯ.
- ಉತ್ತಮ ಸ್ಮರಣೆ ಮತ್ತು ಕಾರ್ಯಕ್ಷಮತೆ
- ಕಡಿಮೆ ತೂಕದ ಅಪಾಯ
- ಉತ್ತಮ ಕ್ಯಾಲೋರಿ ನಿಯಂತ್ರಣ
- ಹೆಚ್ಚಿನ ಅಥ್ಲೆಟಿಕ್ ಪ್ರದರ್ಶನ
- ಹೃದ್ರೋಗದ ಕಡಿಮೆ ಅಪಾಯ
- ಹೆಚ್ಚು ಭಾವನಾತ್ಮಕ ಮತ್ತು ಸಾಮಾಜಿಕ ಬುದ್ಧಿವಂತಿಕೆ
- ಖಿನ್ನತೆಯನ್ನು ತಡೆಗಟ್ಟುವುದು
- ಕಡಿಮೆ ಉರಿಯೂತ
- ಬಲವಾದ ಪ್ರತಿರಕ್ಷಣಾ ವ್ಯವಸ್ಥೆ
- ಯಾವ ವಯಸ್ಸಿನವರಿಗೆ ಎಷ್ಟು ಗಂಟೆಗಳ ನಿದ್ದೆ ಅವಶ್ಯ
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಶಿಫಾರಸು ಮಾಡಿದಂತೆ ವಯಸ್ಸಿನ ಆಧಾರದ ಅನುಸಾರ ನಿದ್ರೆಯ ಅವಧಿ ವ್ಯತ್ಯಾಸವಾಗುತ್ತದೆ. ಅಸಮರ್ಪಕ ನಿದ್ರೆಯನ್ನು ನಿದ್ರೆಯ ಕೊರತೆ ಎಂದು ಗುರುತಿಸಲಾಗಿದೆ. ಇದರಿಂದ ಅರಿವಿನ ದುರ್ಬಲತೆ, ದುರ್ಬಲಗೊಂಡ ಪ್ರತಿರಕ್ಷಣಾ ಕಾರ್ಯ ಮತ್ತು ಮನಸ್ಥಿತಿ ಅಸ್ವಸ್ಥತೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
- 0-3 ತಿಂಗಳ ಶಿಶುಗಳು : 14-17 ಗಂಟೆಗಳು
- 4-12 ತಿಂಗಳುಗಳ ಶಿಶುಗಳು: 12-16 ಗಂಟೆಗಳು
- 1-2 ವರ್ಷದ ಮಕ್ಕಳಿಗೆ : 11-14 ಗಂಟೆಗಳು
- 3-5 ವರ್ಷದ ಪ್ರಿಸ್ಕೂಲ್ ಮಕ್ಕಳಿಗೆ : 10-13 ಗಂಟೆಗಳು
- 6-12 ವರ್ಷದ ಶಾಲಾ ವಯಸ್ಸಿನವರಿಗೆ : 9-12 ಗಂಟೆಗಳು
- 13-18 ವರ್ಷದ ಹದಿಹರೆಯದವರು : 8-10 ಗಂಟೆಗಳು
- 18-60 ವರ್ಷದ ವಯಸ್ಕರಿಗೆ : 7 ಗಂಟೆಗಿಂತ ಅಧಿಕ ಅವಧಿ
- 61-64 ವರ್ಷದ ವಯಸ್ಕರಿಗೆ : 7-9 ಗಂಟೆಗಳು
- 65ವರ್ಷ ಮೇಲ್ಪಟ್ಟವರಿಗೆ: 7–8 ಗಂಟೆಗಳು
ನಿದ್ರೆ ಕೊರತೆಗೆ ಕಾರಣವಾಗುವ ಅಂಶಗಳು ಆಲ್ಕೊಹಾಲ್ ಸೇವನೆ, ಅನಿಯಮಿತ ಮಲಗುವ ಸಮಯದ ಅಭ್ಯಾಸಗಳು, ಅತಿಯಾದ ಕೆಫೀನ್ ಸೇವನೆ, ದೀರ್ಘಕಾಲದ ನೋವು, ಅತಿಯಾದ ಸ್ಕ್ರೀನ್ ಟೈಂ, ಕೆಲವು ಔಷಧಿಗಳು, ಮಾನಸಿಕ ಆರೋಗ್ಯ ಸಮಸ್ಯೆ, ರಾತ್ರಿ ಪಾಳಿ ಕೆಲಸ ಮತ್ತು ಒತ್ತಡ ಆಗಿದೆ. ಈ ಅಂಶಗಳನ್ನು ಪರಿಹರಿಸಿ ಆರೋಗ್ಯಕರ ನಿದ್ರೆಯ ಅಭ್ಯಾಸ ರೂಢಿಸಿಕೊಳ್ಳುವುದು ಅವಶ್ಯವಾಗಿದೆ.
ವಿಶ್ವಾದ್ಯಂತ 50 ರಿಂದ 70 ಮಿಲಿಯನ್ ವ್ಯಕ್ತಿಗಳು ನಿದ್ರಾಹೀನತೆ ಮತ್ತು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮುಂತಾದ ನಿದ್ರಾಹೀನತೆಗಳನ್ನು ಅನುಭವಿಸುತ್ತಿದ್ದಾರೆ. ವಿಶ್ವ ನಿದ್ರಾ ದಿನದ ಹಿನ್ನೆಲೆ ಈ ಕುರಿತು ಜಾಗೃತಿ ಮೂಡಿಸಲು ಮತ್ತು ಪರಿಣಾಮಕಾರಿ ಪರಿಹಾರದ ಅರಿವು ಮೂಡಿಸುವ ಯತ್ನವನ್ನು ಹಲವು ವೇದಿಕೆ ನಡೆಸಿವೆ.
ಇದನ್ನೂ ಓದಿ: ಕಳಪೆ ನಿದ್ರೆಯಿಂದ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ