ನವದೆಹಲಿ: ಬಿರು ಬೇಸಿಗೆಯ ಧಗೆಯಿಂದ ತಪ್ಪಿಸಿಕೊಳ್ಳಲು ಎಸಿ (ಹವಾ ನಿಯಂತ್ರಣ) ಸಹಾಯ ಮಾಡುತ್ತದೆ. ಆದರೆ, ಅತಿಯಾದ ಎಸಿ ಬಳಕೆ ತ್ವಚೆ ಮತ್ತು ಉಸಿರಾಟ ಸಮಸ್ಯೆ ಸೇರಿದಂತೆ ಅನೇಕ ರೀತಿಯ ಆರೋಗ್ಯದ ಅಪಾಯಕ್ಕೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ನಗರ ಪ್ರದೇಶಗಳ ವೇಗವಾದ ಬೆಳವಣಿಗೆ ಮತ್ತು ಆದಾಯದ ಹೆಚ್ಚಳ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಎಸಿ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಎಸಿ ಬಳಕೆಯಲ್ಲಿ ನೀರಿನ ಆವಿಯಿಂದ ಆರ್ದ್ರತೆ ಕಡಿಮೆ ಮಾಡಿ, ಗಾಳಿಯನ್ನು ತಂಪಾಗಿಸುವ ಕಾರ್ಯವನ್ನು ಇದು ಮಾಡುತ್ತದೆ.
ಈ ರೀತಿಯ ಗಾಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ತ್ವಚೆ ಒಣ ಮತ್ತು ಚರ್ಮ ಹಿಗ್ಗುತ್ತದೆ. ಜೊತೆಗೆ ಒಣಕೆಮ್ಮು, ತಲೆ ಸುತ್ತುವಿಕೆ, ವಾಕರಿಕೆ, ಆಯಾಸ ಸೇರಿದಂತೆ ಅನೇಕ ರೀತಿಯ ಸೂಕ್ಷ್ಮ ಸಮಸ್ಯೆಗಳು ಆರೋಗ್ಯ ಅಪಾಯ ಹೆಚ್ಚಿಸುತ್ತದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ ಸುಹಾಸ್ ಎಚ್ಎಸ್ ತಿಳಿಸಿದ್ದಾರೆ.
ಇದು ಅಲರ್ಜಿಕ್ ರಿನಿಟಿಸ್ ಮತ್ತು ಆಸ್ತಮಾದಂತಹ ಉಸಿರಾಟದ ಕಾಯಿಲೆಗಳನ್ನು ಇನ್ನಷ್ಟು ಹದಗೆಡಿಸಬಹುದು. ಅಷ್ಟೇ ಅಲ್ಲದೇ, ಎಸಿಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಸೋಂಕಿನ ಅಪಾಯ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ದೀರ್ಘಕಾಲದ ಎಸಿ ಬಳಕೆ ತಪ್ಪಿಸುವುದು ಸೂಕ್ತ ಎಂದು ಶಿಫಾರಸು ಮಾಡುತ್ತಾರೆ.
ಮನೆಯಲ್ಲಿ ಎಸಿ ಅಳವಡಿಕೆಗಿಂತ ಕರ್ಮಷಿಯಲ್ ಹೀಟಿಂಗ್ ವೆಂಟಿಲೇಷನ್ ಮತ್ತು ಎಸಿಗಳು ಹೆಚ್ಚು ಅಪಾಯಕಾರಿ. ಎಸಿ ಕೂಲಿಂಗ್ ಸಿಸ್ಟಂಗಳು ಮತ್ತು ಬ್ಯಾಕ್ಟೀರಿಯಾದ ಮಾಲಿನ್ಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ, ಕೆಲವು ಬ್ಯಾಕ್ಟೀರಿಯಾಗಳು ಕೂಲಿಂಗ್ ಕಾಯಿಲ್‌ಗಳ ಮೇಲೆ ಬಯೋಫಿಲ್ಮ್ ಅನ್ನು ರೂಪಿಸುತ್ತವೆ ಮತ್ತು ಶೇಕಡಾ 90 ಕ್ಕಿಂತ ಹೆಚ್ಚು ಸಮಯದವರೆಗೆ ಎಸಿಗೆ ಒಡ್ಡಿಕೊಂಡ ಮಾನವರಲ್ಲಿ ಸೋಂಕುಗಳಿಗೆ ಕಾರಣವಾಗಬಹುದು ಎಂದು ಶ್ರೀ ಗಂಗಾ ರಾಮ್ ಆಸ್ಪತ್ರೆಯ ಮೆಡಿಸಿನ್ ವಿಭಾಗ ಹಿರಿಯ ಕನ್ಸಲ್ಟಂಟ್ ಎಂ ವಾಲಿ ತಿಳಿಸಿದ್ದಾರೆ.
ಎಚ್‌ವಿಎಸಿ ವ್ಯವಸ್ಥೆಯಲ್ಲಿನ ನೀರಿನ ಮಾಲಿನ್ಯದ ಆಧಾರದ ಮೇಲೆ ಲೆಜಿಯೊನೈರ್ಸ್ ರೋಗವನ್ನು ಕಂಡುಹಿಡಿಯಲಾಯಿತು ಮತ್ತು ಅದರ ಪರಿಣಾಮವಾಗಿ ಏರೋಸಾಲ್ ಮಂಜು ವಿಲಕ್ಷಣ ಬ್ಯಾಕ್ಟೀರಿಯಾದ ಹರಡುವಿಕೆಗೆ ಕಾರಣವಾಗುತ್ತದೆ.
ಇದಲ್ಲದೇ, ತೀವ್ರವಾದ ಶಾಖಕ್ಕೆ ಒಡ್ಡಿಕೊಂಡು ತಕ್ಷಣಕ್ಕೆ ತಣ್ಣನೆಯ ರೂಮ್ಗೆ ಪ್ರವೇಶ ಮಾಡಿರುವುದರಿಂದ ಬ್ರಾಂಕೋಕನ್ಸ್ಟ್ರಿಕ್ಷನ್ಗೆ ಕಾರಣವಾಗಬಹುದು. ಇದು ಅಸ್ತಮಾ ಇರುವವರಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ನೀವು ಬಳಸುವ ಎಸಿಗಳು ಹೆಚ್ಚು ಕೆಲಸ ಮಾಡಬೇಕಾ; ಈ ಸಲಹೆ ಪಾಲಿಸಿ!