ಲಕ್ನೋ: ಸಾಫ್ಟ್ ಡ್ರಿಂಕ್ಗಳ ಮೋಡಿಗೆ ಒಳಗಾಗುತ್ತಿರುವ ಯುವಜನತೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದನ್ನು ಮನಗಂಡ ಸಿಎಸ್ಐಆರ್ ನ್ಯಾಷನಲ್ ಬೊಟಾನಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎನ್ಬಿಆರ್ಐ) ಆರೋಗ್ಯಕರ ಹರ್ಬಲ್ ಉತ್ಪನ್ನದ ಸಾಫ್ಟ್ ಡ್ರಿಂಕ್ ಪರಿಚಯಿಸಿದೆ.
'ಪಿಯೋ' ಎಂಬ ಹೆಸರಿನ ಈ ಉತ್ಪನ್ನವು ಶೇ 100ರಷ್ಟು ಸಸ್ಯಾಧಾರಿತವಾಗಿದೆ. ಇದರಲ್ಲಿ ಯಾವುದೇ ಕೃತಕ ಸಿಹಿ ಅಥವಾ ಕೆಫೀನ್ ಅಂಶ ಇಲ್ಲ. ಹಾಗೆಂದ ಮಾತ್ರಕ್ಕೆ ಕಹಿ, ರುಚಿಹೀನ ಎಂದು ತಿಳಿದುಕೊಳ್ಳಬೇಡಿ. ಇದು ಫಿಜ್ ಪಾನೀಯದ ಅನುಭವವನ್ನೇ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.
ದಶಕಗಳ ಹಿಂದೆ ಎನ್ಬಿಆರ್ಐ, ಹರ್ಬಲ್ ಸಾಫ್ಟ್ ಡ್ರಿಂಕ್ ಅಭಿವೃದ್ಧಿಪಡಿಸಿತ್ತು. ಆದರೆ, ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ ಇತರೆ ಪಾನೀಯಗಳಿಂದಾಗಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
ಆದಾಗ್ಯೂ, ವಿಜ್ಞಾನಿಗಳು ತಮ್ಮ ಛಲ ಬಿಡಲಿಲ್ಲ. ಇದೀಗ ಹೊಸ ಆರೋಗ್ಯಕರ ಪಾನೀಯ ಉತ್ಪನ್ನವನ್ನು ಪರಿಚಯಿಸಿದ್ದಾರೆ. ಇದರಲ್ಲಿ ಯಾವುದೇ ಪ್ರಿಸರ್ವೆಟಿವ್ ಬಳಕೆ ಮಾಡಿಲ್ಲ. ಪಾನೀಯದ ಬಳಕೆಯ ಅವಧಿ ನಾಲ್ಕು ತಿಂಗಳಾಗಿದೆ.
'ಪಿಯೋ'ಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಪಿಯೋ ಹರ್ಬಲ್, ಜಿಯೋ ಹರ್‌ಪಲ್' ಎಂಬ ಟ್ಯಾಗ್ಲೈನ್ನೊಂದಿಗೆ ಈ ಡ್ರಿಂಕ್ ಮಾರುಕಟ್ಟೆ ಪ್ರವೇಶಿಸಿದೆ.
ಮಕ್ಕಳಿಂದ ವೃದ್ಧರವರೆಗೆ ಎಲ್ಲಾ ವಯೋಮಾನದವರೂ ಈ ಪಾನೀಯವನ್ನು ಸೇವಿಸಬಹುದು. ಮಾರುಕಟ್ಟೆಯಲ್ಲಿರುವ ಅನಾರೋಗ್ಯಕರ ಪಾನೀಯಗಳಿಂದ ಆರೋಗ್ಯಕರ ಆಯ್ಕೆಗೆ ಬದಲಾಗುವ ತುರ್ತು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಕೆಲವು ಆರೋಗ್ಯ ರಕ್ಷಣಾತ್ಮಕ ಗುಣಲಕ್ಷಣಗಳೊಂದಿಗೆ ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಮತ್ತು ಪ್ರಮಾಣೀಕರಿಸಿದ ಆರೋಗ್ಯ ಪಾನೀಯಗಳನ್ನು ಅಭಿವೃದ್ಧಿಪಡಿಸಲು ಆಳವಾದ ಅಧ್ಯಯನ ನಡೆಸಿದೆ ಎಂದು ಎನ್ಬಿಆರ್ಐ ನಿರ್ದೇಶಕ ಅಜಿತ್ ಕುಮಾರ್ ಶಸನೆ ತಿಳಿಸಿದ್ದಾರೆ.
ಸಾಂಪ್ರದಾಯಿಕ ಜ್ಞಾನದ ಆಧಾರದ ಮೇಲೆ ಕೆಲವು ನಿರ್ದಿಷ್ಟ ಗಿಡಮೂಲಿಕೆಗಳನ್ನು ಆಯ್ಕೆ ಮಾಡಲಾಗಿತ್ತು. ಮುಲೇತಿ ಎಂದು ಕರೆಯಲ್ಪಡುವ ಲೈಕೋರೈಸ್, ಹೃದಯಾಕಾರದ ಎಲೆಯ ಮೂನ್ಸೀಡ್, ಅಶ್ವಗಂಧ, ಪುನರ್ನವ, ಸಾಮಾನ್ಯ ದ್ರಾಕ್ಷಿ ಮತ್ತು ಏಲಕ್ಕಿ ಬಳಕೆಯೊಂದಿಗೆ ಈ ಪಾನೀಯ ತಯಾರಿಸಲಾಗಿದೆ.
ಈ ಎಲ್ಲಾ ಗಿಡಮೂಲಿಕೆಗಳನ್ನು ಕಾರ್ಬೋನೇಟೆಡ್ ನೀರಿನಲ್ಲಿ ಮಿಶ್ರಣ ಮಾಡಲಾಗಿದೆ. ಇದು ಮಾರುಕಟ್ಟೆಯಲ್ಲಿರುವ ಸಿಂಥೆಟಿಕ್ ಪಾನೀಯದ ರುಚಿ ಹೊಂದಿದೆ. ಸಸ್ಯಗಳ ಕಹಿ ಅಂಶ ಮರೆಮಾಚಲು ಸಕ್ಕರೆಯನ್ನು ಗರಿಷ್ಠ ಮಟ್ಟದಲ್ಲಿ ಬಳಸಲಾಗಿದೆ ಎಂದು ತಿಳಿಸಿದರು.
ಪಿಯೋ ಪಾನೀಯದಲ್ಲಿ ಯಾವುದೇ ಆಲ್ಕೋಹಾಲ್, ಕೊಕೊ ಮತ್ತು ಸಿಂಥೆಟಿಕ್ ರಾಸಾಯನಿಕವನ್ನು ಬಳಸಿಲ್ಲ. ಇದರ ಸಾಮರ್ಥ್ಯವನ್ನು ಯಶಸ್ವಿಯಾಗಿ ಮೌಲ್ಯಮಾಪನ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.(ಐಎಎನ್ಎಸ್)
ಇದನ್ನೂ ಓದಿ: ಸಾಫ್ಟ್ ಡ್ರಿಂಕ್ಸ್ ಇಷ್ಟವೇ? ಹೆಚ್ಚು ಕುಡೀತೀರಾ? ಹಾಗಿದ್ದರೆ, ಒಮ್ಮೆ ಮೂಳೆ ಪರೀಕ್ಷೆ ಮಾಡಿಸಿ!