ಫಿರೋಜಾಬಾದ್(ಯುಪಿ): ಹೆಣ್ಣುಮಕ್ಕಳ ಕೈಯನ್ನು ಸುಂದರಗೊಳಿಸುವ ಗಾಜಿನ ಬಳೆ ನೋಡಿದಾಕ್ಷಣ ಇನ್ಮುಂದೆ ಹವಾಮಾನ ಬದಲಾವಣೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ಇದಕ್ಕೆ ಕಾರಣವಿದೆ. ಈ ಹವಾಮಾನ ಬದಲಾವಣೆ ಇದೀಗ ಗಾಜಿನ ಬಳೆ ತಯಾರಿಸುತ್ತಿರುವ ಲಕ್ಷಾಂತರ ಜನರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.
ಗಾಜಿನ ಬಳೆಗೂ ಹವಾಮಾನಕ್ಕೂ ನೇರ ಸಂಬಂಧವಿದೆ. ಗಾಜಿನ ಬಳೆ ತಯಾರಿಸುವಾಗ ಬಳೆಗಾರರು ಕುಲುಮೆಯ ಶಾಖಕ್ಕೆ ಗಾಜನ್ನು ಒಡ್ಡಬೇಕು. ಕರಗುವ ಗಾಜನ್ನು ಕುಲುಮೆಯಲ್ಲಿ ನಿಖರವಾದ ಪ್ರಕ್ರಿಯೆಯಲ್ಲಿ ಕಾಯಿಸಬೇಕು. ಅವುಗಳನ್ನು ತೆಳುವಾದ ಕೊಳವೆ ಮಾಡಿ, ತಣ್ಣಗಾಗಿಸಿದ ಬಳಿಕ ಬೇಕಾದ ಉದ್ದಕ್ಕೆ ಕತ್ತರಿಸಬೇಕು. ಇದಾದ ನಂತರ ಇವುಗಳನ್ನು ವೃತ್ತಾಕಾರಕ್ಕೆ ಮತ್ತೊಮ್ಮೆ ಬಿಸಿ ಮಾಡಲು ಮ್ಯಾಡ್ರೆಲಾ ಸುತ್ತ ಸುತ್ತಬೇಕಿದೆ. ನಂತರವೇ ಆಕರ್ಷಕ ಬಳೆ ಸಿದ್ಧ.
ಇದಕ್ಕಾಗಿ ಕೆಂಡದಂತೆ ಕಾದ ಕುಲುಮೆಯ ಪರಿಸ್ಥಿತಿಯಲ್ಲಿ ಕಾರ್ಮಿಕರು ಕೆಲಸ ಮಾಡಬೇಕು. ಇದು ಅನೇಕ ಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಒಳಗಿನ ತಾಪ ಒಂದೆಡೆ, ಹೊರಹೋದರೆ ನೆತ್ತಿ ಸುಡುವ ಬಿಸಿಲ ತಾಪ ಮತ್ತೊಂದೆಡೆ. ಹೀಗಾಗಿ, ಒಳಗೆ ಮತ್ತು ಹೊರಗೆ ಎರಡೂ ಕಡೆಯೂ ಶಾಖಕ್ಕೆ ದೇಹವನ್ನು ಒಡ್ಡಿಕೊಳ್ಳಬೇಕಾದ ಪರಿಣಾಮ ಕಾರ್ಮಿಕರು ನಾನಾರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಈ ಹವಾಮಾನ ಬದಲಾವಣೆಯು 5 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಮತ್ತು 1 ಕೋಟಿ ರೂ.ಗೂ ಹೆಚ್ಚು ವಹಿವಾಟಿನ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ.
"ಗಾಜನ್ನು ಬಳೆಗಳಾಗಿ ಮಾಡುವ ಕೌಶಲ್ಯ ಪೀಳಿಗೆಯಿಂದ ಪೀಳಿಗೆಗೆ ಬಂದಿದೆ. ಆದರೆ, ಹೆಚ್ಚುತ್ತಿರುವ ಹವಾಮಾನ ಬದಲಾವಣೆಯಿಂದಾಗಿ ಕಳೆದೊಂದು ತಿಂಗಳಿನಿಂದ ಪದೇ ಪದೇ ನಿರ್ಜಲೀಕರಣವಾಗಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಆರೋಗ್ಯ ಎಷ್ಟು ಕಾಲ ಉತ್ತಮವಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಆಸ್ತಾ ದೇವ್ ತಿಳಿಸಿದರು.
"ಈ ಮೊದಲು ನಾವು ಈ ಶಾಖವನ್ನು ನಿರ್ವಹಣೆ ಮಾಡುತ್ತಿದ್ದೆವು. ಆದರೆ, ಹೊರಗಿನ ತಾಪವೂ ಏರುತ್ತಿದೆ. ಇದನ್ನು ಸಹಿಸಲಾಗುತ್ತಿಲ್ಲ. ಅನೇಕ ಮಂದಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಯಾವುದೇ ಆಯ್ಕೆಯಿಲ್ಲದೇ ಕೆಲಸ ಮುಂದುವರೆಸುತ್ತಿದ್ದಾರೆ. ಆದರೆ, ಇದು ಎಷ್ಟು ದಿನ?" ಎಂದರು.
"ಬೇಸಿಗೆಯೆಂಬುದು ಯಾವಾಗಲೂ ಕಷ್ಟವೇ. ಆದರೆ, ಈ ವರ್ಷ ಶಾಖ ಸಂಬಂಧಿ ಸಮಸ್ಯೆಯಿಂದ ನಾವು ಸಾಕಷ್ಟು ಹೋರಾಡುತ್ತಿದ್ದೇವೆ. ಅನೇಕ ಕಾರ್ಮಿಕರು ಶಾಖಕ್ಕೆ ಕುಸಿದು ಬೀಳುತ್ತಿದ್ದಾರೆ" ಎಂದು ದಶಕಗಳಿಂದ ಈ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ರೀನಾ ಹೇಳಿದರು.