ನವದೆಹಲಿ: ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯ ಸ್ಥಳದಲ್ಲಿ ಒಂದೇ ಟ್ರೇನಲ್ಲಿ ಚಪ್ಪಲಿಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಸಾಗಿಸುವುದರಿಂದ ಅಪಾಯಕಾರಿ ಮಾಲಿನ್ಯ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೇ ಟ್ರೇನಲ್ಲಿ ಶೂ ಮತ್ತು ವೈಯಕ್ತಿಕ ವಸ್ತುಗಳನ್ನು ಚೆಕ್ಇನ್ ನಲ್ಲಿ ಸಾಗಿಸಿದ "ಅಸ್ವಚ್ಛ ಕ್ರಮ"ದ ಬಗ್ಗೆ ಕಂಪನಿಯೊಂದರ ಹಿರಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಭಾರತದ ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿ ಧರಿಸಿದ ಬೂಟುಗಳನ್ನು ಕಳಚಿ ಅವುಗಳನ್ನು ತೆಗೆದು ಸ್ಕ್ಯಾನಿಂಗ್ ಸ್ಥಳದಲ್ಲಿ ಇಡುವಂತೆ ಪ್ರಯಾಣಿಕರಿಗೆ ಸೂಚಿಸಲಾಗುತ್ತದೆ. ಚಪ್ಪಲಿ ಅಥವಾ ಶೂಗಳಿಗಾಗಿ ಬೂಟಿನ ಚಿತ್ರದ ಪ್ರತ್ಯೇಕ ಟ್ರೇಗಳಿದ್ದರೂ, ಬಹುತೇಕರು ಚಪ್ಪಲಿಗಲನ್ನು ಕೂಡ ವೈಯಕ್ತಿಕ ಸಾಮಾನುಗಳೊಂದಿಗೆ ಒಂದೇ ಟ್ರೇನಲ್ಲಿ ಇಡುವುದು ಕಂಡು ಬಂದಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮ್ಯಾಗ್ನಿಫ್ಲೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಆನಂದ್ ನಿಚಾನಿ, ಪ್ರಯಾಣಿಕರ ಬೂಟುಗಳು, ಫೋನ್ಗಳು ಮತ್ತು ಲ್ಯಾಪ್ ಟಾಪ್ಗಳಂಥ ವೈಯಕ್ತಿಕ ವಸ್ತುಗಳ ಚೆಕ್ಇನ್ಗಾಗಿ ಒಂದೇ ಟ್ರೇ ಬಳಸುವ ಅಭ್ಯಾಸವನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ.
"ವಿಮಾನ ನಿಲ್ದಾಣದಲ್ಲಿ ಭದ್ರತಾ ಚೆಕ್ ಇನ್ ಸಮಯದಲ್ಲಿ ಹೊಲಸಾಗಿರುವ ಬೂಟುಗಳನ್ನು ಸಾಗಿಸುವ ಅದೇ ಟ್ರೇಗಳಲ್ಲಿ ವೈಯಕ್ತಿಕ ವಸ್ತುಗಳನ್ನು ಕೂಡ ಸಾಗಿಸಲಾಗುತ್ತದೆ. ಇದು ಸರಿಯಲ್ಲ. ಪ್ರತಿಯೊಬ್ಬರಿಗೂ ಸ್ವಚ್ಛ ಮತ್ತು ಹೆಚ್ಚು ಆಹ್ಲಾದಕರ ಅನುಭವಕ್ಕಾಗಿ ಶೂಗಳನ್ನು ಅದಕ್ಕಾಗಿಯೇ ಮೀಸಲಾದ ಟ್ರೇಗಳಲ್ಲಿ ಸಾಗಿಸುವುದನ್ನು ಬೆಂಗಳೂರು ವಿಮಾನ ನಿಲ್ದಾಣವು ಕಡ್ಡಾಯಗೊಳಿಸಬೇಕಿದೆ" ಎಂದು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ನಿಚಾನಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, "ನಾವು ಎಲ್ಲಾ ಎಕ್ಸ್-ರೇಗಳ ಪಕ್ಕದಲ್ಲಿ ಮೀಸಲಾದ ಶೂ ಟ್ರೇಗಳನ್ನು ಇರಿಸಿದ್ದೇವೆ" ಎಂದು ಹೇಳಿದೆ. ಆದರೆ ಇದನ್ನು ಕಡ್ಡಾಯಗೊಳಿಸಬೇಕಿದೆ ಎಂದು ನಿಚಾನಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬೆಂಗಳೂರಿನ ಆಸ್ಟರ್ ಆರ್ವಿ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಲೀಡ್ ಕನ್ಸಲ್ಟೆಂಟ್ ಡಾ. ಅರವಿಂದ ಎಸ್.ಎನ್, "ಶೂ ಮತ್ತು ವೈಯಕ್ತಿಕ ವಸ್ತುಗಳಿಗೆ ಒಂದೇ ಟ್ರೇಗಳನ್ನು ಬಳಸುವುದರಿಂದ ಬ್ಯಾಕ್ಟೀರಿಯಾ, ವೈರಸ್ಗಳು ಮತ್ತು ಶಿಲೀಂಧ್ರಗಳಂತಹ ಹಾನಿಕಾರಕ ಸೂಕ್ಷ್ಮಜೀವಿಗಳು ಪಾದರಕ್ಷೆಗಳಿಂದ ವೈಯಕ್ತಿಕ ವಸ್ತುಗಳಿಗೆ ಅಂಟಿಕೊಳ್ಳಬಹುದು. ಇದು ಇನ್ ಫ್ಲುಯೆಂಜಾ, ನೊರೊವೈರಸ್ ಮತ್ತು ಎಂಆರ್ಎಸ್ಎ ಸೇರಿದಂತೆ ಹಲವಾರು ಕಾಯಿಲೆಗಳ ಹರಡುವಿಕೆಗೆ ಕಾರಣವಾಗಬಹುದು" ಎಂದು ಹೇಳಿದರು.
"ಪಾದರಕ್ಷೆಗಳು, ವಿಶೇಷವಾಗಿ ಬೂಟುಗಳು ಸೋಂಕನ್ನು ಹರಡುತ್ತವೆ. ಅವುಗಳನ್ನು ಇಟ್ಟ ನೆಲ ಅಥವಾ ಸ್ಥಳವನ್ನು ಅವು ಕಲುಷಿತಗೊಳಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಇದರಿಂದ ಅಪಾಯಕಾರಿ ಮಾಲಿನ್ಯ ಹರಡಬಹುದು" ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ. ನೇಹಾ ಮಿಶ್ರಾ ಹೇಳಿದರು.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ನಿರ್ಮೂಲನೆಯಾಗದ ಪೋಲಿಯೊ: ಬಲೂಚಿಸ್ತಾನದಲ್ಲಿ ವರ್ಷದ 14ನೇ ಪ್ರಕರಣ ಪತ್ತೆ - polio in Pakistan