ನಾವು ದಿನನಿತ್ಯ ಸೇವಿಸುವ ಆಹಾರ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಸಂತೋಷ, ಕೋಪ ಸೇರಿ ವಿವಿಧ ಭಾವನೆಗಳ ಸೃಷ್ಟಿಯಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಕೆಲ ಆಹಾರಗಳು, ಮೆದುಳಿನಿಂದ ನಕಾರಾತ್ಮಕ ಸಂಕೇತಗಳನ್ನು ಕಳುಹಿಸುತ್ತವೆ. ಅವು ಕೋಪಕ್ಕೆ ಕಾರಣವಾಗುತ್ತದೆ. ಹಾಗಾಗಿ, ನಿತ್ಯ ನಿಮಗೆ ಕೋಪ ಹೆಚ್ಚುತ್ತಿದೆ ಎಂದೆನಿಸಿದರೆ ಅಂತಹ ಆಹಾರಗಳನ್ನು ತಿಳಿದುಕೊಂಡು, ಅವುಗಳನ್ನು ನಿಯಂತ್ರಿಸೋ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಸಂಸ್ಕರಿಸಿದ ಆಹಾರ (Processed food): ಸಂಸ್ಕರಿಸಿದ ಆಹಾರಗಳು ನಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಎನರ್ಜಿ ಬೂಸ್ಟರ್ ಆಗಿಯೂ ಕೆಲಸ ಮಾಡುತ್ತದೆ. ಅದಾಗ್ಯೂ, ಹೆಚ್ಚು ಪಾಲಿಶ್ ಮಾಡಿದ ಆಹಾರಗಳು ಮತ್ತು ಸಂಸ್ಕರಿಸಿದ ಆಹಾರ ಸೇವನೆಯು (ವಿಶೇಷವಾಗಿ ಸಕ್ಕರೆ ಅಂಶವಿರುವ ಆಹಾರ) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಪರಿಣಾಮ, ಮೂಡ್ ಸ್ವಿಂಗ್ನಂತಹ ಸಮಸ್ಯೆಗಳು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾಗಿ ಇಂತಹ ಆಹಾರವನ್ನು ಕಡಿಮೆ ಮಾಡಿದಷ್ಟೂ ಒಳ್ಳೆಯದು.
ಕೆಫಿನ್: ಅನೇಕರು ದಿನನಿತ್ಯ ಕೆಫಿನ್ (ಕಾಫಿ) ಸೇವಿಸುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಪ್ರಮಾಣ ಹೆಚ್ಚಾದರೆ ಅದು ನಿಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಕೆಫಿನ್ ನಿದ್ರೆ ಮೇಲೂ ಪರಿಣಾಮ ಬೀರುತ್ತದೆ. ಇದು ಕಿರಿಕಿರಿ, ಕೋಪದಂತಹ ಭಾವನೆಗಳಿಗೆ ಕಾರಣವಾಗುತ್ತದೆ. ಕೆಫಿನ್ ಸೇವನೆಯನ್ನು ನಿಯಂತ್ರಿಸಬೇಕೆಂದುಕೊಂಡರೆ, ಗಿಡಮೂಲಿಕೆಯ ಅಂಶಗಳನ್ನೊಳಗೊಂಡ ಚಹಾಗಳನ್ನು ಬಳಸುವುದು ಸೂಕ್ತ.
ಆಲ್ಕೋಹಾಲ್: ಮದ್ಯ ಸೇವನೆ ಒಂದು ಕ್ಷಣಕ್ಕೆ ನಿಮಗೆ ಖುಷಿ ಕೊಡಬಹುದು, ವಿಶ್ರಾಂತಿಯ ಅನುಭವವಾಗಬಹುದು. ಆದರೆ, ಪ್ರಮಾಣ ಹೆಚ್ಚಾದರೆ ಕಿರಿಕಿರಿ, ಮೂಡ್ ಸ್ವಿಂಗ್‌ಗೆ ಕಾರಣವಾಗಬಹುದು. ಆಲ್ಕೋಹಾಲ್ ಮೆದುಳಿನಲ್ಲಿರುವ ನರಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಭಾವನೆಗಳು ಅಸಮತೋಲನಕ್ಕೆ ಕಾರಣವಾಗುತ್ತದೆ. ಹಾಗಾಗಿ ಇದನ್ನು ನಿಯಂತ್ರಣದಲ್ಲಿಡಿ.
ಸಂಸ್ಕರಿಸಿದ ಕೊಬ್ಬಿನಾಂಶ: ಸಂಸ್ಕರಿತ ಆಹಾರಗಳನ್ನು ಅಧಿಕವಾಗಿ ಸೇವಿಸಿದರೆ, ಅವುಗಳಲ್ಲಿ ಇರುವ ಟ್ರಾನ್ಸ್ ಫ್ಯಾಟ್ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಕೊಬ್ಬಿನಾಂಶ ದೇಹದ ಉಷ್ಣತೆ ಹೆಚ್ಚಿಸುತ್ತದೆ. ಪರಿಣಾಮವಾಗಿ, ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಇವುಗಳ ಬದಲಿಗೆ ಅವಕಾಡೊ, ನಟ್ಸ್ ಮತ್ತು ಆಲಿವ್ ಎಣ್ಣೆಯಂತಹ ಉತ್ತಮ ಕೊಬ್ಬಿನಾಂಶ ಇರುವ ಆಹಾರಗಳನ್ನು ತೆಗೆದುಕೊಳ್ಳಬಹುದು.
ಸ್ನ್ಯಾಕ್ಸ್: ಚಿಪ್ಸ್ ಮತ್ತು ಕ್ರ್ಯಾಕರ್ಸ್ನಂತಹ ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ ನಿರ್ಜಲೀಕರಣ ಮತ್ತು ಮೂಡ್ ಸ್ವಿಂಗ್ ಸಮಸ್ಯೆ ಕಾಡುತ್ತದೆ. ಹೆಚ್ಚಿನ ಸೋಡಿಯಂ ಸೇವನೆಯು ಅಧಿಕ ರಕ್ತದೊತ್ತಡ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೈಡ್ ಎಫೆಕ್ಟ್ಸ್ಗೆ ಕಾರಣವಾಗಬಹುದು. ಬದಲಿಗೆ ತಾಜಾ ಹಣ್ಣುಗಳು ಮತ್ತು ಕಾಳುಗಳನ್ನು ತೆಗೆದುಕೊಳ್ಳುವುದು ಉತ್ತಮ.
ಬೆಳಗಿನ ಉಪಾಹಾರದಲ್ಲಿ ಸಕ್ಕರೆ ನಿಯಂತ್ರಿಸಿ: ಹೆಚ್ಚಿನ ಸಕ್ಕರೆಯಂಶವುಳ್ಳ ಉಪಾಹಾರ ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಉಪಯುಕ್ತವಾಗಿದೆ. ಆದರೆ, ಇದು ನಿಮ್ಮ ನೈಜ ಶಕ್ತಿಯನ್ನು ಕುಗ್ಗಿಸುತ್ತದೆ. ಶಕ್ತಿಯ ಹಠಾತ್ ಹೆಚ್ಚಳ ನಿಮ್ಮ ಸಕ್ಕರೆ ಮಟ್ಟದಲ್ಲಿನ ಬದಲಾವಣೆಗೆ ಕಾರಣವಾಗಬಹುದು. ಹಾಗಾಗಿ ಸಕ್ಕರೆ ಕಡಿಮೆ ಇರುವ ಆಹಾರವನ್ನು ಸೇವಿಸುವುದು ಉತ್ತಮ.
ಗಮನದಲ್ಲಿಡಿ: ಇಲ್ಲಿ ಒದಗಿಸಲಾದ ಎಲ್ಲ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳ ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ - ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ನೀವು ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.