'ಬನಾರಸ್' ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಪಯಣ ಆರಂಭಿಸಿರುವ ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ಎರಡನೇ ಚಿತ್ರ ಏಪ್ರಿಲ್ನಲ್ಲಿ ಘೋಷಣೆಯಾಗಿತ್ತು. ಇದೀಗ ಸಿನಿಮಾ ತನ್ನ ಮುಹೂರ್ತ ಕಾರ್ಯಕ್ರಮ ಮುಗಿಸಿಕೊಂಡಿದೆ. 'ಉಪಾಧ್ಯಕ್ಷ' ನಿರ್ದೇಶಕನ ಈ ಚಿತ್ರದಲ್ಲಿ ರಚಿತಾರಾಮ್, ಮಲೈಕಾ ಜೊತೆ ಝೈದ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.
ಬನಾರಸ್ ಚಿತ್ರದ ನಂತರ ಝೈದ್ ಖಾನ್ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲದಲ್ಲಿ ಅಭಿಮಾನಿಗಳಿದ್ದರು. ಅಲ್ಲದೇ ಈ ವರ್ಷದ ಭರ್ಜರಿ ಹಿಟ್ ಸಿನಿಮಾ 'ಉಪಾಧ್ಯಕ್ಷ' ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ಮುಂದಿನ ಸಿನಿಮಾ ಮೇಲೂ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಈ ಇಬ್ಬರ ಮುಂಬರುವ ಸಿನಿಮಾಗೆ 'ಕಲ್ಟ್' ಎಂಬ ಶೀರ್ಷಿಕೆ ಇಡಲಾಗಿದ್ದು, ಯುಗಾದಿ ಹಾಗೂ ರಂಜಾನ್ ಸಂದರ್ಭ ನೂತನ ಚಿತ್ರದ ಶೀರ್ಷಿಕೆ ಅನಾವರಣಗೊಂಡಿತ್ತು. ಇದೀಗ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ.
ಬಹುನಿರೀಕ್ಷಿತ 'ಕಲ್ಟ್' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಅನಿಲ್ ಕುಮಾರ್ ಅವರ ಶ್ರೀಮತಿ ಆರಂಭ ಫಲಕ ತೋರಿದರು. ನಾಯಕ ನಟ ಝೈದ್ ಖಾನ್ ಅವರ ಅಜ್ಜಿ ಕ್ಯಾಮರಾ ಚಾಲನೆ ಮಾಡಿದರು. ಕಲಾವಿದರಾದ ಝೈದ್ ಖಾನ್, ರಚಿತಾ ರಾಮ್, ಮಲೈಕಾ, ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಈ ಹಿಂದೆ ಅನಾವರಣಗೊಂಡಿರುವ ಪೋಸ್ಟರ್ ಸಾಕಷ್ಟು ಸದ್ದು ಮಾಡಿದೆ. ಝೈದ್ ಖಾನ್ ಅವರೊಂದಿಗೆ ಡಿಂಪಲ್ ಕ್ವೀನ್ ರಚಿತಾರಾಮ್ ಹಾಗೂ ಉಪಾಧ್ಯಕ್ಷ ಖ್ಯಾತಿಯ ಮಲೈಕಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಕೆಲವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ಮೋಹಕತಾರೆ ರಮ್ಯಾ ಮದುವೆ ವದಂತಿ: 'ಇದು ಫೇಕ್' ಎಂದ ನಟಿಯ ಆಪ್ತೆ - Ramya Wedding Rumors
ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಸಂಬೋಧಿಸುತ್ತಾರೆ. ಹಾಗಾಗಿ ಯವಜನತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರಕ್ಕೆ 'ಕಲ್ಟ್' ಎಂದು ಶೀರ್ಷಿಕೆ ಇಟ್ಟಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: 'ಕರ್ಕಿ'ಗೆ ತಮಿಳು ನಿರ್ದೇಶಕರಿಂದ ಡೈರೆಕ್ಷನ್: ಹಳ್ಳಿ ಸೊಗಡಿನ ಚೆಂದದ ಕಥೆ ಹೇಳಲಿದೆ ಕನ್ನಡ ಸಿನಿಮಾ - Karki
ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದ್ದು. ಜೆ.ಎಸ್.ವಾಲಿ ಛಾಯಾಗ್ರಹಣ ನಿರ್ವಹಿಸಿದ್ರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನದ ಹೊಣೆ ಹೊತ್ತಿದ್ದಾರೆ. ರವಿವರ್ಮಾ ಸಾಹಸ ನಿರ್ದೇಶನ ಹಾಗೂ ಭೂಷಣ್-ಸಂತು ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿರಲಿದೆ.