ಬೆಂಗಳೂರು: ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ದುನಿಯಾ ವಿಜಯ್ ಅಭಿನಯಿಸಿ, ಆ್ಯಕ್ಷನ್ ಕಟ್ ಹೇಳಿರುವ 'ಭೀಮ' ಸಿನಿಮಾ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಯಶಸ್ಸು ಸ್ಯಾಂಡಲ್ವುಡ್ನಲ್ಲಿ ಹೊಸ ಹುರುಪು ಮೂಡಿಸಿದ್ದು, ಸಾಲು ಸಾಲು ಸಿನಿಮಾಗಳೀಗ ಬಿಡುಗಡೆ ಹೊಸ್ತಿಲಿನಲ್ಲಿದೆ. ಆದ್ರೆ ಅದಕ್ಕೂ ಮುನ್ನ ಕಳೆದ ಕೆಲ ತಿಂಗಳುಗಳ ಕಾಲ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸನ್ನು ಸ್ಯಾಂಡಲ್ವುಡ್ ಕಾಣಲಿಲ್ಲ. ಸ್ಟಾರ್ ನಟರ ಸಿನಿಮಾಗಳೂ ಕೂಡಾ ವಿಳಂಬವಾಗಿದೆ. ಚಿತ್ರಮಂದಿರಗಳಿಗ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತುಗಳು ಸಹ ಜೋರಾಗಿ ಕೇಳಿ ಬಂದಿದ. ಹೀಗೆ ಕೆಲ ಅಡೆತಡೆಗಳ ಹಿನ್ನೆಲೆ, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಇಂದು ಹೋಮ-ಹವನ ನಡೆಸಲಾಗಿದೆ.
ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ಈ ವಿಶೇಷ ಪೂಜೆ ನಡೆಸಲಾಗಿದೆ. ಮುಂಜಾನೆ 8 ರಿಂದ ಸುಮಾರು 11 ಗಂಟೆವರೆಗೂ ಗಣಪತಿ ಹೋಮ, ಸರ್ಪಶಾಂತಿ, ಮೃತ್ಯುಂಜಯ, ಗಣ ಹೋಮ, ಆಶ್ಲೇಷಾ ಬಲಿ ನಡೆಸಲಾಗಿದೆ. ಹೋಮ-ಹವನದಲ್ಲಿ ಹಿರಿಯ ನಟ ದೊಡ್ಡಣ್ಣ ಅವರ ಕುಟುಂಬ ಹಾಗೂ ಚಿತ್ರರಂಗದ ಪೋಷಕ ಕಲಾವಿದರು ಭಾಗಿಯಾಗಿದ್ದರು.
ಈ ಬಗ್ಗೆ ಮಾತನಾಡಿದ ನಟ ದೊಡ್ಡಣ್ಣ, ಕೋವಿಡ್ ನಂತರ ಪೂಜೆ ಮಾಡಬೇಕೆಂಬ ಪ್ಲ್ಯಾನ್ ಇತ್ತು. ಅದು ಆಗಿರಲಿಲ್ಲ. ಇಂದು ಒಳ್ಳೆಯ ದಿನ ಆಗಿರೋದ್ರಿಂದ ಹೋಮ-ಹಮನ ಹಮ್ಮಿಕೊಳ್ಳಲಾಗಿದೆ. ಇಂಡಸ್ಟ್ರಿಯ ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ತಂತ್ರಜ್ಞನ ಸಂಘ ಸೇರಿದಂತೆ ಎಲ್ಲಾ ಸಂಘದವರು ಭಾಗಿಯಾಗಲಿದ್ದಾರೆ. ಸುಮಾರು 6 ಗಂಟೆಗಳ ಕಾಲ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ನಟರಾದ ನೆನಪಿರಲಿ ಪ್ರೇಮ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ಉಮೇಶ್, ಹಿರಿಯ ನಟಿ ಗಿರೀಜಾ ಲೋಕೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಂಡಸ್ಟ್ರಿಯ ಬಹುತೇಕ ಕಲಾವಿದರು ಒಬ್ಬೊಬ್ಬರಾಗಿಯೇ ಆಗಮಿಸುತ್ತಿದ್ದಾರೆ. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ.
ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಿಂದ ಹೊರಬರಲಿ ಎಂದು ಹೋಮ ಹವನ ನಡೆಸಲಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಇತ್ತೀಚೆಗಷ್ಟೇ ಈ ಬಗ್ಗೆ ಫಿಲ್ಮ್ ಚೇಂಬರ್ ಖಜಾಂಚಿ ಜಯಸಿಂಹ ಮುಸುರಿ ಮಾಹಿತಿ ಹಂಚಿಕೊಂಡಿದ್ದರು. ಬುಧವಾರದಂದು ಕಲಾವಿದರ ಸಂಘದಲ್ಲಿ ಪೂಜೆ ಆಯೋಜಿಸಿರುವುದು ಸತ್ಯ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಫಿಲ್ಮ್ ಚೇಂಬರ್ಗೆ ಆಗಮಿಸಿ ಆಹ್ವಾನ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಹುತೇಕರು ಭಾಗವಹಿಸಲಿದ್ದಾರೆ. ದರ್ಶನ್ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ಸ್ಟಾರ್ಸ್ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದ್ದು, ಥಿಯೇಟರ್ ನಡೆಸುವವರಿಗೆ ಕಷ್ಟವಾಗಿದೆ. ಹಾಗಾಗಿ ಸ್ಯಾಂಡಲ್ವುಡ್ ಏಳಿಗೆ ಜೊತೆ ಜೊತೆಗೆ ಇಡೀ ಚಿತ್ರರಂಗದ ಕಲಾವಿದರಿಗಾಗಿ ಒಂದು ಔತಣಕೂಟ ಏರ್ಪಡಿಸಿದ್ದಾರೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ದ್ವಿಪಾತ್ರದಲ್ಲಿ ವಿಜಯ್ ರಾಘವೇಂದ್ರ, ರಂಜಿನಿ ರಾಘವನ್: 'ಸ್ವಪ್ನ ಮಂಟಪ'ಕ್ಕೆ ಯು ಸರ್ಟಿಫಿಕೇಟ್ - Swapna Mantapa