ದೇಶಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಬ್ಬ ಸಿನಿ ಮಂದಿಗೆ ಮತ್ತಷ್ಟು ವಿಶೇಷ. ಏಕೆಂದರೆ ಹಬ್ಬದ ಆಚರಣೆ, ಸಂಭ್ರಮಾಚರಣೆ ಜೊತೆಗೆ ಹೊಸ ಸಿನಿಮಾ ಅನೌನ್ಸ್ ಮಾಡುವುದು, ಘೋಷಣೆಯಾಗಿರುವ ಸಿನಿಮಾಗಳ ಬಗ್ಗೆ ಅಪ್ಡೇಟ್ಸ್ ನೀಡೋ ಮೂಲಕ ಗಮನ ಸೆಳೆಯುತ್ತಾರೆ. ಈ ದಿನಗಳಂದು ಸಿನಿಪ್ರಿಯರು, ಅಭಮಾನಿಗಳು ತಮ್ಮ ಮೆಚ್ಚಿನ ತಾರೆಯರ ಸಿನಿಮಾ ಮಾಹಿತಿ ಪಡೆದುಕೊಳ್ಳುತ್ತಾರೆ. ಇದೀಗ 'ಟಾಮಿ' ಶೀರ್ಷಿಕೆಯ ಸಿನಿಮಾ ಸಖತ್ ಸದ್ದು ಮಾಡುತ್ತಿದೆ.

ಗೌರಿ ಗಣೇಶ ಹಬ್ಬದ ಸಂದರ್ಭ ಸಿನಿಮಾ ಸುದ್ದಿಗಳು ಸಖತ್ ಸದ್ದು ಮಾಡುತ್ತಿವೆ. ಈ ನಡುವೆ ಹೊಸಬರ ಹೊಸ ಸಿನಿಮಾ ಗಮನ ಸೆಳೆಯುತ್ತಿದೆ. ಹೌದು, ಗಣೇಶ ಹಬ್ಬದ ಪ್ರಯುಕ್ತ ಹೊಸ ಚಿತ್ರತಂಡ 'ಟಾಮಿ' ಎನ್ನುವ ಚಿತ್ರವನ್ನು ಅನೌನ್ಸ್ ಮಾಡಿದೆ. ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡುತ್ತಿರುವ ಸಿನಿಮಾ ಎನ್ನುವುದೇ ವಿಶೇಷ.

'ಟಾಮಿ' ಶ್ವಾನ ಪ್ರಿಯರಿಗೆ ಈ ಹೆಸರು ಮತ್ತಷ್ಟು ಆಪ್ತ. ಈ ಚಿತ್ರಕ್ಕೆ ಆಶು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಮತ್ತು ನಟನಾಗಿ ಆಶು ಅವರಿಗಿದು ಚೊಚ್ಚಲ ಚಿತ್ರ. ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡುವ ಜೊತೆಗೆ ಫಸ್ಟ್ ಟೈಮ್ ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಸಹಜವಾಗಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

ಆಶು ಅವರ ಚೊಚ್ಚಲ ಚಿತ್ರ ಅಂದ ಮಾತ್ರಕ್ಕೆ ಅವರಿಗೆ ಚಿತ್ರರಂಗವೇನು ಹೊಸದೇನಲ್ಲ. ಕಳೆದ ಏಳೆಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಿಗೆ ಅದರಲ್ಲೂ ಕಿಚ್ಚ ಸುದೀಪ್ ನಟನೆಯ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ ಆಶು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮುಕುಂದ ಮುರಾರಿ', ಅಂಬರೀಶ್ ಹಾಗೂ ಸುದೀಪ್ ನಟನೆಯ 'ಅಂಬಿ ನಿಂಗೆ ವಯಸ್ಸಾಯ್ತೊ', ಕೋಟಿಗೊಬ್ಬ-3 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಇವರಿಗೆ.
ಸದ್ಯ ರಿಲೀಸ್ ಆಗಿರುವ ಪೋಸ್ಟರ್ನಲ್ಲಿ ನಾಯಕ ಆಶು ಜೊತೆ ಶ್ವಾನ ಹಾಗೂ ಆರ್ ಎಕ್ಸ್ ಬೈಕ್ ಸಹ ಕಾಣಬಹುದು. ಪೋಸ್ಟರ್ ನೋಡುತ್ತಿದ್ದರೆ ನಾಯಕ ನಟ ಶ್ವಾನಪ್ರಿಯ, ಜೊತೆಗೆ ಆರ್ ಎಕ್ಸ್ ಬೈಕ್ ಲವರ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಟಾಮಿ ಸಿನಿಮಾದಲ್ಲಿ ಬಹುತೇಕ ಹೊಸಬರೇ ಕೆಲಸ ಮಾಡುತ್ತಿದ್ದಾರೆ. ಎಲಿಪಾಸ್ ಇಂಡಿಯಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಸಚಿನ್ ಶ್ಯಾಮ್ ಸುಂದರ್ ಹಾಗೂ ಅನೇಕ ಸ್ನೇಹಿತರು ಸೇರಿ ಬಂಡವಾಳ ಹೂಡುತ್ತಿದ್ದಾರೆ. ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ಪ್ರದ್ಯುತನ್ 'ಟಾಮಿ' ಸಿನಿಮಾಗೂ ಸಂಗೀತ ನೀಡುತ್ತಿದ್ದಾರೆ.