ಹೈದರಾಬಾದ್: ಇಂದು ಬಾಲಿವುಡ್ನ ದಿವಂಗತ ನಟಿ ಶ್ರೀದೇವಿ ಅವರ 61ನೇ ಜನ್ಮದಿನ. ಕಪೂರ್ ಕುಟುಂಬಸ್ಥರಾದ ಜಾಹ್ನವಿ, ಖುಷಿ ಮತ್ತು ಬೋನಿ ತಮ್ಮ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಭಿಮಾನಿಗಳು ಕೂಡಾ ಪ್ರತಿಭಾನ್ವಿತ ನಟಿಯನ್ನು ಸ್ಮರಿಸುತ್ತಿದ್ದಾರೆ. ಮಗಳು ಜಾಹ್ನವಿ ಅವರು ತಾಯಿ ಶ್ರೀದೇವಿಯ ಪರಂಪರೆಯನ್ನು ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ಫಾಲೋ ಮಾಡುತ್ತಿದ್ದಾರೆ. ತಾಯಿಯ ಜನ್ಮವಾರ್ಷಿಕೋತ್ಸವ ಹಿನ್ನೆಲೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಗೆ ಭೇಟಿ ನೀಡಿದ್ದಾರೆ. ಪ್ರತೀ ವರ್ಷ ತಿರುಮಲನ ದರ್ಶನ ಪಡೆಯೋ ಮೂಲಕ ಗಮನ ಸೆಳೆಯುತ್ತಾರೆ ಈ ಬಾಲಿವುಡ್ ಬ್ಯೂಟಿ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಜಾಹ್ನವಿ ಕಪೂರ್ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ಗೆ "ಹುಟ್ಟುಹಬ್ಬದ ಶುಭಾಶಯಗಳು ಅಮ್ಮ (ರೆಡ್ ಹಾರ್ಟ್ ಎಮೋಜಿಯೊಂದಿಗೆ) ಐ ಲವ್ ಯೂ" ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ನಟಿ ಶೇರ್ ಮಾಡಿರುವ ಮೊದಲ ಫೋಟೋ ತಿರುಪತಿ ದೇವಸ್ಥಾನಕ್ಕೆ ಹೋಗುವ ಮೆಟ್ಟಿಲುಗಳನ್ನು ಚಿತ್ರಿಸುತ್ತದೆ. ಇದು ತಾಯಿಯ ಜನ್ಮದಿನ ಹಿನ್ನೆಲೆ ಮಗಳು ಕಾಲ್ನಡಿಗೆಯಲ್ಲಿ ದೇವಸ್ಥಾನವನ್ನು ತಲುಪಿದ್ದಾರೆಂಬುದನ್ನು ಸೂಚಿಸುತ್ತದೆ. ಎರಡನೇ ಫೋಟೋದಲ್ಲಿ, ನಟಿಯ ಬಾಲ್ಯದ ಕ್ಷಣವನ್ನು ನೋಡಬಹುದಾಗಿದೆ. ತಾಯಿ ಶ್ರೀದೇವಿ ಜೊತೆಗಿನ ಮುದ್ದಾದ ಫೋಟೋ ಇದಾಗಿದೆ. ಮೂರನೇ ಚಿತ್ರದಲ್ಲಿ ನಟಿಯ ಇಂದಿನ ನೋಟವನ್ನು ಕಾಣಬಹುದಾಗಿದೆ.
ಸುದ್ದಿ ಸಂಸ್ಥೆಯೊಂದು ಹಂಚಿಕೊಂಡ ಮತ್ತೊಂದು ವಿಡಿಯೋದಲ್ಲಿ, ಜಾಹ್ನವಿ ದೇವಸ್ಥಾದ ಬಳಿ ಇರುವುದನ್ನು ತೋರಿಸಿದೆ. ರೂಮರ್ ಬಾಯ್ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ದೇವರ ದರ್ಶನ ಪಡೆದಿದ್ದು, ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು. ನಟಿ ಹಳದಿ ರೇಷ್ಮೆ ಸೀರೆ, ಅದಕ್ಕೆ ಹೊಂದಿಕೆಯಾಗುವ ನೆಕ್ಲೇಸ್, ಕಮರ್‌ಬಂದ್ (ಸೊಂಟಕ್ಕೆ ತೊಡುವ ಅಭರಣ) ಮತ್ತು ಚಿನ್ನದ ಕಿವಿಯೋಲೆಗಳನ್ನು ಧರಿಸಿ ಸಂಪೂರ್ಣ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡರು. ಇನ್ನೂ ಶಿಖರ್ ಅವರು ಧೋತಿ ಧರಿಸಿ ಟ್ರೆಡಿಶನಲ್ ಲುಕ್ ಕೊಟ್ಟರು.
ಪತಿ, ನಿರ್ಮಾಪಕ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಕಪೂರ್ ಕೂಡ ತಮ್ಮ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳ ಮೂಲಕ ಶ್ರೀದೇವಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ಬಾಲಿವುಡ್ನ ನವನಟಿ ಖುಷಿ ಕಪೂರ್ ತಮ್ಮ ತಾಯಿಯೊಂದಿಗಿನ ಸುಂದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಜಾಹ್ನವಿ ಕೂಡ ಕಾಣಿಸಿಕೊಂಡಿದ್ದಾರೆ. 2012ರ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಫೋಟೋ ಹಂಚಿಕೊಂಡ ಪತಿ ಬೋನಿ ಕಪೂರ್, "ಜನ್ಮದಿನದ ಶುಭಾಶಯಗಳು ಜಾನ್ (ಹಗ್ ಎಮೋಜಿಯೊಂದಿಗೆ)" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ನೂರು ಜನ್ಮಕೂ ನೀವೇ ನನ್ನ ಆಯ್ಕೆ': ಯಶ್ ರಾಧಿಕಾ ನಿರ್ಶ್ಚಿತಾರ್ಥಕ್ಕೆ 8 ವರ್ಷಗಳ ಸಂಭ್ರಮ - Yash Radhika Pandit
ಶ್ರೀದೇವಿ 1963ರಲ್ಲಿ ಜನಿಸಿದರು. ಶ್ರೀ ಅಮ್ಮಾ ಯಂಗೇರ್ ಅಯ್ಯಪನ್ ನಟಿಯ ಮೂಲ ಹೆಸರು. ಇಂಗ್ಲಿಷ್ ವಿಂಗ್ಲಿಷ್, ಚಾಂದಿನಿ, ಲಮ್ಹೆ, ಮಿಸ್ಟರ್ ಇಂಡಿಯಾ, ನಾಗಿನಾ ಮತ್ತು ಸದ್ಮಾ ಸೇರಿದಂತೆ ಅನೇಕ ಹಿಂದಿ ಚಿತ್ರಗಳಲ್ಲಿನ ತಮ್ಮ ಅಮೋಘ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ. ಪದ್ಮಶ್ರೀ ಪುರಸ್ಕೃತರು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತೆಲುಗು ಚಿತ್ರೋದ್ಯಮಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ನಟಿಯ ಕೊನೆ ಚಿತ್ರ 'ಮಾಮ್', ಅವರಿಗೆ ಮರಣೋತ್ತರ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು. 2018ರ ಫೆಬ್ರವರಿ 24ರಂದು ಫ್ಯಾಮಿಲಿ ಗ್ಯಾದರಿಂಗ್ ಸಲುವಾಗಿ ತೆರಳಿದ್ದ ಸಂದರ್ಭ ಶ್ರೀದೇವಿ ದುಬೈನಲ್ಲಿ ನಿಧನರಾದರು.