ವಿಶ್ವ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತ ಈ ಬಾರಿ ಸಾಕಷ್ಟು ಸದ್ದು ಮಾಡುತ್ತಿದೆ. ಸೆಲೆಬ್ರಿಟಿಗಳ ಬೆಡಗು ಬಿನ್ನಾಣ ಪ್ರದರ್ಶನ ಮಾತ್ರವಲ್ಲದೇ, ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರವಾಗುತ್ತಿದೆ. ಪಾಯಲ್ ಕಪಾಡಿಯಾ ಅವರು ತಮ್ಮ 'ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್' ಡ್ರಾಮಾಗೆ 'ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ' ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. 77ನೇ ಆವೃತ್ತಿಯ ಕೇನ್ಸ್ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ, ಉತ್ಸವದ ಎರಡನೇ ಅತ್ಯುನ್ನತ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಗುರುವಾರ ರಾತ್ರಿ ಕಪಾಡಿಯಾ ನಿರ್ದೇಶನದ ಚೊಚ್ಚಲ ಚಿತ್ರವನ್ನು ಪ್ರದರ್ಶಿಸಲಾಗಿದ್ದು, ಇದೀಗ ಪ್ರಶಸ್ತಿ (ಜ್ಯೂರಿ ಬಹುಮಾನ) ಗೆದ್ದುಕೊಂಡಿದೆ. ಇದೀಗ ಸಿನಿಮಾ, ಕಪಾಡಿಯಾ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ್ದಾರೆ.
30 ವರ್ಷಗಳಲ್ಲಿ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಸಿನಿಮಾವಾಗಿ ಇತಿಹಾಸ ಬರೆದಿದೆ. ಮುಖ್ಯ ಸ್ಪರ್ಧೆಯಲ್ಲಿ ಪ್ರದರ್ಶಿಸಲಾದ ಈ ಚಿತ್ರವನ್ನು ಮಹಿಳೆ ನಿರ್ದೇಶಿಸಿರುವುದು ಮತ್ತೊಂದು ವಿಶೇಷ. ನಿರ್ದೇಶಕಿಯೋರ್ವರ ಸಿನಿಮಾ ಪ್ರದರ್ಶನ ಕಂಡು, ಗೆದ್ದು ಬೀಗಿರುವುದು ಇದೇ ಮೊದಲು. ಅಷ್ಟೇ ಅಲ್ಲ, ಪ್ರದರ್ಶನವು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಗಳಿಸಿತು. ಅಲ್ಲಿದ್ದವರು ಎಂಟು ನಿಮಿಷಗಳ ಕಾಲ ನಿಂತು ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದಾರೆ.
'ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್' ಹೆಸರಿನ ಮಲಯಾಳಂ-ಹಿಂದಿ ಸಿನಿಮಾ ಪ್ರಭಾ ಎಂಬ ನರ್ಸ್ ಕಥೆಯನ್ನು ಒಳಗೊಂಡಿದೆ. ಭಾವನೆಗಳ ಸುತ್ತ ಕಥೆ ಸಾಗುತ್ತದೆ. ಕಿಯಾರಾ ಅಡ್ವಾಣಿ, ರಿಚಾ ಚಡ್ಡಾ, ಟೊವಿನೋ ಥಾಮಸ್, ಸ್ವರಾ ಭಾಸ್ಕರ್, ರಾಧಿಕಾ ಆಪ್ಟೆ, ಅನುರಾಗ್ ಕಶ್ಯಪ್ ಮತ್ತು ಭೂಮಿ ಪೆಡ್ನೇಕರ್ ಸೇರಿದಂತೆ ಹಲವರು ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಅಂತಾರಾಷ್ಟ್ರೀಯ ವಿಮರ್ಶಕರು ಚಿತ್ರಕ್ಕೆ ಫುಲ್ ಮಾರ್ಕ್ ಕೊಟ್ಟಿದ್ದಾರೆ. ಕಪಾಡಿಯಾ ಅವರ ಕಥೆ ಹೇಳುವ ಕೌಶಲ್ಯ, ಸೈಲಿಯನ್ನು ಶ್ಲಾಘಿಸಿದ್ದಾರೆ. ಪುಣೆ ಮೂಲದ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್‌ಟಿಐಐ) ಹಳೇ ವಿದ್ಯಾರ್ಥಿಯಾಗಿರುವ ಪಾಯಲ್ ಕಪಾಡಿಯಾ ಸಾಕ್ಷ್ಯಚಿತ್ರ ಎ ನೈಟ್ ಆಫ್ ನೋಯಿಂಗ್ ನಥಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅಪಾರ ಮೆಚ್ಚುಗೆಗೆ ಪಾತ್ರವಾದ ಈ ಸಾಕ್ಷ್ಯಚಿತ್ರ 2021ರ ಕೇನ್ಸ್ ಚಿತ್ರೋತ್ಸವದ 'ಡೈರೆಕ್ಟರ್ಸ್ ಫೋರ್ಟ್‌ನೈಟ್ ಸೈಡ್-ಬಾರ್'ನಲ್ಲಿ ಪ್ರಥಮ ಪ್ರದರ್ಶನಗೊಂಡು, ಓಯಿಲ್ ಡಿ'ಓರ್ ' (ಗೋಲ್ಡನ್ ಐ) ಪ್ರಶಸ್ತಿ ಗೆದ್ದುಕೊಂಡಿತ್ತು.
ಇದನ್ನೂ ಓದಿ: ಮೈಸೂರಿನ ಚಿದಾನಂದರ 'ಸನ್‌ಫ್ಲವರ್ಸ್'ಗೆ ಕೇನ್ಸ್‌ನ ಪ್ರತಿಷ್ಠಿತ ಪ್ರಶಸ್ತಿ - Chidananda S Naik
ಇದಕ್ಕೂ ಮುನ್ನ ಅನಸೂಯಾ ಸೇನ್‌ಗುಪ್ತಾ (Anasuya Sengupta) ಅವರು ತಮ್ಮ 'ದಿ ಶೇಮ್‌ಲೆಸ್'ನಲ್ಲಿ (The Shameless)ನ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ, ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಇದಕ್ಕೂ ಮುನ್ನ ಮೈಸೂರಿನ ಚಿದಾನಂದ ಎಸ್.ನಾಯಕ್ ಅವರ 'ಸನ್‌ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ' ಚಿತ್ರ ಲಾ ಸಿನೆಫ್ನಲ್ಲಿ ಪ್ರಶಸ್ತಿ ಪಡೆದುಕೊಂಡಿತ್ತು.