'ಫೈರ್ ಫ್ಲೈ', ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ. ಯುವಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದೆ. ವಿಕ್ಕಿಯಾಗಿ ನಾಯಕ ವಂಶಿಯನ್ನು 'ಫೈರ್ ಫ್ಲೈ' ಬಳಗ ಸಿನಿಪ್ರೇಮಿಗಳಿಗೆ ಪರಿಚಯಿಸಿದೆ.
ವಿವೇಕಾನಂದ ಎಂದು ಪರಿಚಯಿಸಿಕೊಳ್ಳುವ ನಾಯಕ ತಾನೊಬ್ಬ ಅವಾರ್ಡ್ ವಿನ್ನಿಂಗ್ ಮ್ಯಾಥ್ಸ್ ಟೀಚರ್ ಎಂದು ಹೇಳಿಕೊಳ್ಳುತ್ತಾನೆ. ವಿಕ್ಕಿ ಪ್ರಪಂಚದಲ್ಲಿ ಬೆಳಗ್ಗೆ 7, ಮಧ್ಯಾಹ್ನ 1 ಮತ್ತು ರಾತ್ರಿ 8 ಗಂಟೆಗೆ ಏನು ನಡೆಯುತ್ತದೆ ಮತ್ತು ವಿಕ್ಕಿ ವಿಚಿತ್ರ ವರ್ತನೆಯನ್ನು ಸಖತ್ ಫನ್ನಿಯಾಗಿ ಕಟ್ಟಿಕೊಡಲಾಗಿದೆ. 2 ನಿಮಿಷ 49 ಸೆಕೆಂಡ್ ಇರುವ ಫೈರ್ ಫ್ಲೈ ಟೀಸರ್ ಕುತೂಹಲವಾಗಿದೆ. ವಿಕ್ಕಿ ಯಾರು ಅನ್ನೋದನ್ನು ಹೇಳಿರುವ ಚಿತ್ರತಂಡ ಅಸಲಿಗೆ ಏಕೆ ವಿಚಿತ್ರವಾಗಿ ವರ್ತಿಸುತ್ತಾನೆ ಅನ್ನೋದರ ಗುಟ್ಟುಬಿಟ್ಟು ಕೊಟ್ಟಿಲ್ಲ.
ವಂಶಿ ನಾಯಕನಾಗಿ, ನಿರ್ದೇಶಕನಾಗಿ ಮಿಂಚಿದ್ದು, ತಾಂತ್ರಿಕವಾಗಿ ಟೀಸರ್ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಫ್ರೇಮ್, ಕಲರಿಂಗ್, ಕಂಟೆಂಟ್, ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದೇ ಒಳ್ಳೆ ಔಟ್ಪುಟ್ ನೀಡಲಾಗಿದೆ. ಚರಣ್ ರಾಜ್ ಸಂಗೀತ, ಅಭಿಲಾಷ್ ಕಳತ್ತಿ ಕ್ಯಾಮರಾವರ್ಕ್, ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರುಮುಗಂ ಸಂಕಲನ ಫೈರ್ ಫ್ಲೈ ಟೀಸರ್ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಫೈರ್ ಫ್ಲೈ ನಾಯಕನಾಗಿ ಅಭಿನಯಿಸಿರುವ ವಂಶಿಗೆ ಜೋಡಿಯಾಗಿ ರಚನಾ ಇಂದರ್ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಮೂಗು ಸುರೇಶ್, ಚಿತ್ಕಲಾ ಬಿರಾದಾರ್, ಸಿಹಿ ಕಹಿ ಚಂದ್ರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡಲು ಮುಂದಾಗಿದೆ.
ಫೈರ್ ಫ್ಲೈ ಮೂಲಕವೇ ನಿರ್ದೇಶಕ ವಂಶಿ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ. ಇವರ ಮೊದಲ ಪ್ರಯತ್ನದ ಬಗ್ಗೆ ಟಾಕ್ ಇದ್ದೇ ಇದೆ. ಚಿತ್ರದ ಮೊದಲ ಝಲಕ್ನಲ್ಲೇ ಫನ್-ಎಮೋಷನ್, ಎಂಟರ್ ಟೈನ್ಮೆಂಟ್ ಎಲ್ಲವೂ ಇದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಚಾರ್ಜ್ ಶೀಟ್ನಲ್ಲಿ ದರ್ಶನ್ ಸ್ವಇಚ್ಚಾ ಹೇಳಿಕೆ ರಿವೀಲ್: ಏನದು ಸತ್ಯ? - Darshan Statements
ಫೈರ್ ಫ್ಲೈ ಶೂಟಿಂಗ್ ಪೂರ್ಣಗೊಂಡ ಬಳಿಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದ ನಿವೇದಿತಾ ಶಿವರಾಜ್ಕುಮಾರ್, ''ಚಿಕ್ಕವಳಿದ್ದಾಗಿನಿಂದಲೂ ಸಿನಿಮಾಗಳು, ಕಥೆಗಳೊಡನೆ ಬೆಳೆದವಳು ನಾನು. ಅಂದಿನಿಂದಲೂ ನನಗಿಷ್ಟವಾದ ಕಥೆಗಳನ್ನು ಬೆಳ್ಳಿತೆರೆ ಮೇಲೆ ತರಬೇಕೆಂದು ಕಂಡ ಕನಸಿಗೆ ಕಟ್ಟಿದ ಮೊದಲ ರೆಕ್ಕೆ ಫೈರ್ ಪ್ಲೈ. ಚಿತ್ರತಂಡದ ನಾವಿಕರಾದ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ ನಟಿಯರು, ಅತ್ಯದ್ಭುತ ಪ್ರತಿಭೆಗಳು, ನನ್ನ ಬೆನ್ನೆಲುಬಾಗಿ ನಿಂತ ತಂಡದ ಪ್ರತಿಯೊಬ್ಬರು ಹಾಗೂ ಅವರೊಂದಿಗಿನ ನೆನಪುಗಳು ನನ್ನಲ್ಲಿ ಶಾಶ್ವತವಾಗಿ ಉಳಿಯುವುದು. ಶುರುವಾದ ಪ್ರತೀ ಪ್ರಯಾಣವು ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ. ಆದರೆ ನನ್ನ ಈ ಕನಸಿನ ಪ್ರಯಾಣದ ಕೊನೆ ಹತ್ತಿರವಾಗುತ್ತಿದ್ದರೂ ಕೂಡಾ ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಹುಡುಕಾಟದ ಕಥೆಯಾಗಿರುವ ನಮ್ಮ ಫೈರ್ ಪ್ಲೈ ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿರುವೆ'' ಎಂದು ಬರೆದುಕೊಂಡಿದ್ದಾರೆ.