ಭಾರತೀಯ ಚಿತ್ರರಂಗದಲ್ಲಿ ದೇಶಪ್ರೇಮ ಆಧಾರಿತ ಸಾಕಷ್ಟು ಸಿನಿಮಾಗಳು ಮೂಡಿ ಬಂದಿವೆ. ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳಿಂದ ಹಿಡಿದು, ಸ್ವಾತಂತ್ರ್ಯ ನಂತರ ನಡೆದ ಯುದ್ಧಗಳ ಮೇಲೂ ಸಿನಿಮಾಗಳಿವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲೂ ದೇಶ ಪ್ರೇಮ ಸಾರುವ ಹಲವು ಸಿನಿಮಾಗಳು ತೆರೆ ಕಂಡಿವೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ, ಕನ್ನಡದಲ್ಲಿ ದೇಶಪ್ರೇಮ ಸಾರಿದ ಚಿತ್ರಗಳ ಒಂದು ಮೆಲುಕು ನೋಟ.
ಕಿತ್ತೂರು ಚೆನ್ನಮ್ಮ: 1961ರಲ್ಲಿ ತೆರೆಕಂಡು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಸಿನಿಮಾ 'ಕಿತ್ತೂರು ಚೆನ್ನಮ್ಮ'. ಬಹುಭಾಷಾ ನಟಿ ಬಿ.ಸರೋಜಾದೇವಿ ಕಿತ್ತೂರು ಚೆನ್ನಮ್ಮನಾಗಿ ಅಭಿನಯಿಸಿದ ಚಿತ್ರವಿದು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಬಂದಾಗ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದಿಟ್ಟ ಮಹಿಳೆ ರಾಣಿ ಚೆನ್ನಮ್ಮನ ಕಥೆಯಿದು. ವಿಶೇಷ ಪಾತ್ರದಲ್ಲಿ ಡಾ.ರಾಜ್ಕುಮಾರ್ ಕೂಡಾ ನಟಿಸಿದ್ದರು. ಪ್ರಖ್ಯಾತ ನಿರ್ದೇಶಕ ಬಿ.ಆರ್.ಪಂತಲ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಆ ಕಾಲದಲ್ಲೇ 9ನೇ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ಮುತ್ತಿನಹಾರ: ಈ ಚಿತ್ರದ ಬಳಿಕ ತೆರೆಗೆ ಬಂದ ದೇಶ ಪ್ರೇಮ ಕುರಿತಾದ ಮತ್ತೊಂದು ಸಿನಿಮಾ 'ಮುತ್ತಿನ ಹಾರ'. ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ವೀರ ಸೈನಿಕನ ಪಾತ್ರದಲ್ಲಿ ವಿಜೃಂಭಿಸಿದ್ದು, ಸುಹಾಸಿನಿ ನಾಯಕಿಯಾಗಿದ್ದರು. ಕೊಡಗಿನ ವೀರ ಸೈನಿಕ ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಸುಂದರ ದಾಂಪತ್ಯದ ಜೊತೆಗೆ ಯುದ್ಧದ ಸನ್ನಿವೇಶವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಕೂಡಾ ಮಾಡಿದ್ದರು. ಯುದ್ಧದ ಇನ್ನೊಂದು ಮುಖವನ್ನು ತೆರೆದಿಟ್ಟ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡಾ ಲಭಿಸಿತ್ತು. ಈ ಸಿನಿಮಾ 1990ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.
ತಾಯಿ ಸಾಹೇಬ: ಅಪ್ಪಾ ಸಾಹೇಬ ಎಂಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವರ ಎರಡನೇ ಹೆಂಡತಿ ನರ್ಮದಾ ತಾಯಿ ಅವರ ಜೀವನದ ಕಥೆಯನ್ನು ಆಧರಿಸಿ ಬಂದ ಮಗದೊಂದು ಕನ್ನಡ ಸಿನಿಮಾ 'ತಾಯಿ ಸಾಹೇಬ'. ಖ್ಯಾತ ನಟಿ ಜಯಮಾಲಾ ಹಾಗೂ ಸುರೇಶ್ ಹೆಬ್ಳೀಕರ್ ಅಭಿನಯದ ಈ ಸಿನಿಮಾ ಸ್ವಾತಂತ್ರ್ಯ ಪೂರ್ವ ಹಾಗೂ ಭೂಚಳವಳಿ ಬಗ್ಗೆ ಇದೆ. ಗಿರೀಶ್ ಕಾಸವರಳ್ಳಿ ನಿರ್ದೇಶನದ ಚಿತ್ರ ಡಿಸೆಂಬರ್ 31, 1997ರಲ್ಲಿ ತೆರೆ ಕಂಡಿತ್ತು. ಆ ದಿನಗಳಲ್ಲಿ ತಾಯಿ ಸಾಹೇಬ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ವೀರಪ್ಪನಾಯ್ಕ: ಮುತ್ತಿನಹಾರ ಸಿನಿಮಾ ಬಳಿಕ ಮತ್ತೆ ವಿಷ್ಣುವರ್ಧನ್ ಅವರು ದೇಶ ಪ್ರೇಮಿಯಾಗಿ ಅಭಿನಯಿಸಿದ ಚಿತ್ರ 'ವೀರಪ್ಪನಾಯ್ಕ'. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಹಾಗೂ ಗಾಂಧಿವಾದಿ ನಾಯಕನ ಜೀವನದ ಕಥೆಯನ್ನು ಈ ಚಿತ್ರ ಒಳಗೊಂಡಿತ್ತು. ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗ್ರಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಟಟ ದೇಶಾಭಿಮಾನಿಯ ಕಥೆ ಇದು. ದೇಶಕ್ಕೋಸ್ಕರ ಮಗನನ್ನೇ ವಿಷ್ಣುವರ್ಧನ್ ಚಿತ್ರದಲ್ಲಿ ಕೊಲೆ ಮಾಡುವುದು ಊಹಿಸಲೂ ಅಸಾಧ್ಯ. ವಿಷ್ಣುವರ್ಧನ್ ಪತ್ನಿ ಪಾತ್ರದಲ್ಲಿ ಶೃತಿ ನಟಿಸಿದ್ದರು. ಎಸ್. ನಾರಾಯಣ್ ಈ ಸಿನಿಮಾ ನಿರ್ದೇಶಿಸಿದ್ದರು. 1999ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿ ನೂರು ದಿನಗಳನ್ನು ಪೂರೈಸಿತ್ತು.
ಹಗಲು ವೇಷ: ಲವರ್ ಬಾಯ್ ಹಾಗೂ ಹಳ್ಳಿ ಹುಡುಗನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಹಗಲು ವೇಷ ಸಿನಿಮಾದಲ್ಲಿ ದೇಶಪ್ರೇಮಿ ಪಾತ್ರದಲ್ಲಿ ಮಿಂಚಿದ್ದರು. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹಗಲುವೇಷ ಚಿತ್ರವು ಬ್ರಿಟಿಷ್ ಆಳ್ವಿಕೆ ವಿರುದ್ಧ ದಂಗೆಯೇಳುವ ಸ್ವಾತಂತ್ರ್ಯ ಹೋರಾಟಗಾರನ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ಶಿವರಾಜ್ಕುಮಾರ್ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾರ್ಚ್ 24, 2000ರಲ್ಲಿ ಬಿಡುಗಡೆಯಾಗಿದ್ದ ಚಿತ್ರ ಯಶಸ್ಸು ಕಂಡಿತ್ತು.
ವಂದೇ ಮಾತರಂ: 2001ರಲ್ಲಿ ತೆರೆ ಕಂಡು ಸಕ್ಸಸ್ ಕಂಡ ಸಿನಿಮಾ ವಂದೇ ಮಾತರಂ. ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ತೆಲುಗಿನ ಖ್ಯಾತ ನಟಿ ವಿಜಯಶಾಂತಿ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ, ನವಪೀಳಿಗೆಯ ಯುವಕರನ್ನು ಹೇಗೆ ಬ್ರೈನ್ ವಾಶ್ ಮಾಡಿ, ಉಗ್ರಗಾಮಿ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಓಂ ಪ್ರಕಾಶ್ ರಾವ್ ಈ ಸಿನಿಮಾ ನಿರ್ದೇಶನ ಮಾಡಿದ್ದರು.
1944: 2016ರಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ದೇಶಪ್ರೇಮ ಆಧಾರಿತ ಸಿನಿಮಾ '1944'. ನವೀನ್ ಕೃಷ್ಣ ಹಾಗೂ ಶೃತಿ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರವನ್ನು ಎನ್.ಎಸ್.ರಾವ್ ನಿರ್ದೇಶಿಸಿದ್ದು, ರೊಟ್ಟಿ ಋಣ ನಾಟಕ ಆಧರಿಸಿದ್ದ ಸಿನಿಮಾ ಇದಾಗಿದೆ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಸ್ವಾತಂತ್ರ್ಯ ಹೋರಾಟದ ಕಥೆಯನ್ನು 1944 ಸಿನಿಮಾ ಒಳಗೊಂಡಿದೆ. ಬದ್ರಿನಾಥ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಸೈನಿಕ: 2002ರಲ್ಲಿ ಪವರ್ಫುಲ್ ಟೈಟಲ್ನೊಂದಿಗೆ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದ ಸಿನಿಮಾ 'ಸೈನಿಕ'. ನಟ ಹಾಗೂ ರಾಜಕಾರಣಿ ಸಿ.ಪಿ. ಯೋಗೇಶ್ವರ್ ಮತ್ತು ನಟಿ ಸಾಕ್ಷಿ ಶಿವಾನಂದ್ ನಟಿಸಿದ್ದ ಸೈನಿಕ ಸಿನಿಮಾ ಕಾರ್ಗಿಲ್ ಯುದ್ಧದ ಕಥೆಯನ್ನು ಒಳಗೊಂಡಿತ್ತು. ಮಹೇಶ್ ಸುಖಧರೆ ಈ ಸಿನಿಮಾ ನಿರ್ದೇಶಿಸಿದ್ದರು.
ಕ್ರಾಂತಿವೀರ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಕ್ರಾಂತಿವೀರ ಸಿನಿಮಾ ಕೂಡಾ ಸಖತ್ ಸದ್ದು ಮಾಡಿತ್ತು. ಅದರಲ್ಲಿ ಅಜಿತ್ ಜಯರಾಜ್ ಭಗತ್ ಸಿಂಗ್ ಪಾತ್ರ ನಿರ್ವಹಿಸಿದ್ದರು. ಹೋರಾಟಗಾರ ಭಗತ್ ಸಿಂಗ್ ಜೀವನ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಆದತ್ ಎಂ.ಪಿ ನಿರ್ದೇಶನವಿದೆ. ಚಂದ್ರಶೇಖರ್ ಆಜಾದ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಲಾಲಾ ಲಜಪತ್ ರಾಯ್ ಪಾತ್ರದಲ್ಲಿ ಗೀತೆಸಾಹಿತಿ, ನಿರ್ದೇಶಕ, ನಟ ಡಾ ವಿ.ನಾಗೇಂದ್ರ ಪ್ರಸಾದ್, ಪೋಷಕ ಪಾತ್ರಗಳಲ್ಲಿ ಜೋ ಸೈಮನ್, ಭವಾನಿ ಪ್ರಕಾಶ್ ಹಾಗೂ ಲಕ್ಷ್ಮಣ್ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಹನುಮಾನ್ ಪಾತ್ರದಲ್ಲಿ ರಿಷಬ್ ಶೆಟ್ಟಿ: ಟಾಲಿವುಡ್ನಲ್ಲಿ ಛಾಪು ಮೂಡಿಸಲು ಕಾಂತಾರ ಸ್ಟಾರ್ ರೆಡಿ
ಇದರ ಜೊತೆಗೆ ಮೈಸೂರು ಮಲ್ಲಿಗೆ, ಎಕೆ 47 ಸೇರಿದಂತೆ ಹಲವು ಸಿನಿಮಾಗಳು ದೇಶಪ್ರೇಮದ ಕಥಾ ಹಂದರವನ್ನು ಹೊಂದಿರುವ ಚಿತ್ರಗಳಾಗಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇವಿಷ್ಟು ಕನ್ನಡ ಭಾಷೆ, ನೆಲ, ಜಲ ಬಗ್ಗೆ ಸಂದೇಶ ಸಾರುದಿ ಸಿನಿಮಾಗಳಾಗಿವೆ.