ಭಾರತೀಯ ಚಿತ್ರರಂಗದ ಬಿಗ್ ಪ್ರೊಜೆಕ್ಟ್ 'ಕಲ್ಕಿ 2898 ಎಡಿ' ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಯಶಸ್ವಿಯಾಗಿದೆ. ಅಂದುಕೊಂಡಂತೆ, ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಬಹುತಾರಾಗಣದ ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಮೂರೇ ದಿನದಲ್ಲಿ 200 ಕೋಟಿ ರೂಪಾಯಿಗೂ ಹೆಚ್ಚು ಗಳಿಸುವಲ್ಲಿ ಯಶ ಕಂಡಿದೆ. ಇಂದು ಭಾನುವಾರವಾದ ಹಿನ್ನೆಲೆಯಲ್ಲಿ ಚಿತ್ರ ಅಸಾಧಾರಣ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಬಹುಬೇಡಿಕೆ ತಾರೆಯರಾದ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಹುತೇಕ ಅಭಿಮಾನಿಗಳ ತಮ್ಮ ಮೆಚ್ಚಿನ ನಟರ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, 'ಕಲ್ಕಿ 2898 ಎಡಿ' ತೆರೆಕಂಡ 3ನೇ ದಿನ ಅಂದರೆ ಶನಿವಾರ, ಭಾರತದಲ್ಲಿ 67.1 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಕೇವಲ ಮೂರು ದಿನಗಳಲ್ಲಿ ಕಲ್ಕಿ 2898 ಎಡಿ ಭಾರತದಲ್ಲಿ 220 ಕೋಟಿ ರೂ. ಗಳಿಸಿದೆ. ಹಿಂದಿ ಆವೃತ್ತಿಯಲ್ಲಿ 72.5 ಕೋಟಿ ರೂ. ಮತ್ತು ತಮಿಳು ವರ್ಷನ್ನಲ್ಲಿ 12.8 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆಲುಗು ಪ್ರದರ್ಶನಗಳು 126.9 ಕೋಟಿ ರೂ. ಸಂಪಾದಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಅತಿದೊಡ್ಡ ಪಾಲನ್ನು ಹೊಂದಿವೆ. ಈ ಮಧ್ಯೆ, ಕಳೆದ 24 ಗಂಟೆಗಳಲ್ಲಿ ಬುಕ್ ಮೈ ಶೋನಲ್ಲಿ ದಾಖಲೆ ಮಟ್ಟದಲ್ಲಿ 1.28 ಮಿಲಿಯನ್ ಟಿಕೆಟ್‌ಗಳು ಮಾರಾಟವಾಗಿವೆ. ಪಾಸಿಟಿವ್ ಪ್ರತಿಕ್ರಿಯೆಗಳು ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿದೆ. ಭಾನುವಾರದ ಸಂಪಾದನೆ ಅಸಾಧಾರಣವಾಗಿರಲಿದೆ ಎಂದು ಊಹಿಸಲಾಗಿದೆ.
ಇದನ್ನೂ ಓದಿ: ವಿಶ್ವ ಚಾಂಪಿಯನ್ನರಿಗೆ ಯಶ್, ಸುದೀಪ್, ರಶ್ಮಿಕಾ ಸೇರಿ ಕನ್ನಡ ತಾರೆಯರಿಂದ ಅಭಿನಂದನೆ - Sandalwood Stars Reactions
ವಿಶ್ವದಾದ್ಯಂತ ಮೊದಲ ದಿನ 191 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆಯಿತು. ಹಿಂದಿನ ಬ್ಲಾಕ್ಬಸ್ಟರ್ ಚಿತ್ರಗಳಾದ ಆರ್ಆರ್ಆರ್ (223 ಕೋಟಿ ರೂ.) ಮತ್ತು ಬಾಹುಬಲಿ 2 (217 ಕೋಟಿ ರೂ.)ರ ನಂತರ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೂರನೇ ಸಿನಿಮಾವಾಗಿ ಹೊರಹೊಮ್ಮಿದೆ. ವಿಶ್ವಾದ್ಯಂತ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಸೂಪರ್ ಹಿಟ್ ಚಿತ್ರಗಳಾದ ಕೆಜಿಎಫ್ 2 (159 ಕೋಟಿ ರೂ.), ಸಲಾರ್ (158 ಕೋಟಿ ರೂ.), ಲಿಯೋ (142.75 ಕೋಟಿ ರೂ.), ಸಾಹೋ (130 ಕೋಟಿ ರೂ.) ಮತ್ತು ಜವಾನ್ (129 ಕೋಟಿ ರೂ.)ನ ದಾಖಲೆಗಳನ್ನು ಪುಡಿಗಟ್ಟಿದೆ.
ಇದನ್ನೂ ಓದಿ: ಅಡ್ಡ ಗೋಡೆ ಮೇಲೆ ದೀಪ ಇಡೋ ಕಾಲದಲ್ಲಿ, 'ಗೋಡೆ' ಮೇಲೆ ವರ್ಲ್ಡ್ ಕಪ್ ಇಡೋರ್ ಆಗ್ಬೇಕು: ಶಿವ ರಾಜ್‌ಕುಮಾರ್ - Shiva Rajkumar
ಸಿನಿಮಾ ಹಿಂದಿ ಸೇರಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅಶ್ವತ್ಥಾಮನಾಗಿ, ಕಮಲ್ ಸುಪ್ರೀಮ್ ಯಾಸ್ಕಿನ್ ಆಗಿ, ಪ್ರಭಾಸ್ ಭೈರವನಾಗಿ ಮತ್ತು ದೀಪಿಕಾ SUM-80 ಆಗಿ ನಟಿಸಿದ್ದಾರೆ. ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್, ದುಲ್ಕರ್ ಸಲ್ಮಾನ್, ಫರಿಯಾ ಅಬ್ದುಲ್ಲಾ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದು, ದಿಶಾ ಪಟಾನಿ ರಾಕ್ಸಿ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಚಲನಚಿತ್ರ ಸದ್ಯ ವಿಶ್ವಾದ್ಯಂತ ಸಖತ್ ಸದ್ದು ಮಾಡುತ್ತಿದ್ದು, 500 ಕೋಟಿ ರೂ. ದಾಟಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.