'ತಾರಕಾಸುರ' ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರವಸೆ ಮೂಡಿಸಿರುವ ಯಂಗ್ ಹೀರೋ ರವಿ. ಈ ಚಿತ್ರ ಆದ್ಮೇಲೆ ರವಿ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. 'ಕೈಲಾಸ ಕಾಸಿದ್ರೆ' ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ನಾಗ್ ವೆಂಕಟ್ ನಿರ್ದೇಶನದ 'ಕೈಲಾಸ'ಕ್ಕೆ 'ಕಾಸಿದ್ರೆ' ಎಂಬ ಅಡಿ ಬರಹವಿದೆ. ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಸಿರುವ ಕೈಲಾಸ ಚಿತ್ರತಂಡದಿಂದ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂಥ ಟ್ರಾನ್ಸ್ ಸಾಂಗ್ ಒಂದನ್ನು ಬಿಡುಗಡೆಗೊಳಿಸಲಾಗಿದೆ.
ದೃಶ್ಯಗಳ ಮೂಲಕವೇ ಕಿಕ್ಕೇರಿಸುವ ಶೈಲಿಯ ಈ ಟ್ರಾನ್ಸ್ ವಿಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೋಡುಗರ ಕಡೆಯಿಂದ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ಆಂತರ್ಯಕ್ಕನುಗುಣವಾಗಿ ಈ ಟ್ರಾನ್ಸ್ ವಿಡಿಯೋ ಸಾಂಗ್ ಅನ್ನು ನಿರ್ದೇಶಕರು ರೂಪಿಸಿದ್ದಾರಂತೆ. ಮಾದಕ ಜಗತ್ತಿನ ಉನ್ಮತ್ತ ಕ್ಷಣಗಳನ್ನು ಹಿಡಿದಿಟ್ಟಂತೆ ಭಾಸವಾಗುವ ಈ ಹಾಡಿನ ಮಧ್ಯೆ ಪೂರಕವಾದ ಒಂದಷ್ಟು ಸಾಲುಗಳು, ಪಾತ್ರದ ಕಡೆಯಿಂದ ಬರುತ್ತದೆ.
ಲೇಖಕ್ ಎಂ.ಸಿದ್ದಾರ್ಥ ಸಾಹಿತ್ಯ ಒದಗಿಸಿದ್ದಾರೆ. ಆಶಿಕ್ ಅರುಣ್ ಸಂಗೀತ ಸಂಯೋಜನೆ ಇದೆ. ಇದರ ಮೂಲಕವೇ ನಾಯಕ ರವಿ ಪಾತ್ರ ಕೂಡಾ ಪ್ರೇಕ್ಷಕರ ಮುಂದೆ ಬಂದಿದೆ. ಕನ್ನಡ ಸಿನಿಮಾಗಳಲ್ಲಿ ಇಂಥ ಟ್ರಾನ್ಸ್ ವಿಡಿಯೋ ಸಾಂಗ್ ಅಲ್ಲಲ್ಲಿ ಕಾಣಿಸಿಕೊಂಡಿವೆ. ಆದರೆ ಈ ಚಿತ್ರದಲ್ಲಿ ಅದನ್ನು ಪೂರ್ಣಪ್ರಮಾಣದಲ್ಲಿ ಪ್ರಯೋಗ ಮಾಡಲಾಗಿದೆಯಂತೆ.
ಇದು ಕ್ರೈಂ ಕಮ್ ಕಾಮಿಡಿ ಜಾನರ್ಗೆ ಒಳಪಡುವ ಚಿತ್ರ. ಪಕ್ಕಾ ಕಮರ್ಶಿಯಲ್ ಬಗೆಯಲ್ಲಿ ತಯಾರುಗೊಂಡಿರುವ ಇದು ನಾಗ್ ವೆಂಕಟ್ ನಿರ್ದೇಶನದ ಮೊದಲ ಸಿನಿಮಾ. ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ನಾಗ್ ವೆಂಕಟ್ ಒಂದಷ್ಟು ವರ್ಷಗಳ ಹಿಂದೆಯೇ ಪೂರ್ಣಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೂ ಸಾಕಷ್ಟು ಕಿರು ಚಿತ್ರಗಳ ಮೂಲಕ ಪರೀಕ್ಷೆಗೊಡ್ಡಿಕೊಂಡಿದ್ದ ನಾಗ್ ವೆಂಕಟ್, ಕೈಲಾಸ ಕಾಸಿದ್ರೆ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ: ದರ್ಶನ್ ಸಿನಿಮಾ ನಿರ್ದೇಶಿಸಲಿದ್ದಾರೆ ಪ್ರೇಮ್; ಸಂಜಯ್ ದತ್ ವಿಲನ್?
ಇಲ್ಲಿ ರವಿ ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. ತಾರಕಾಸುರ ನಂತರ ರವಿ ಮತ್ತೊಂದು ವಿಶೇಷ ಪಾತ್ರದ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡಲಿದ್ದಾರಂತೆ. ಈಗ ಬಿಡುಗಡೆಯಾಗಿರೋ ನಶೆ ಹಾಡಿನ ಪ್ರಭೆಯಲ್ಲಿಯೇ, ಪ್ರೇಮಿಗಳ ದಿನದಂದು ಚೆಂದದ್ದೊಂದು ಹಾಡು ಬಿಡುಗಡೆಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಕ್ರೈಂ ಹಾಗೂ ಕಾಮಿಡಿ ಇರೋಂದ್ರಿಂದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕೂಡಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಕಪ್ಪು ಬಿಳುಪಿನ ನಡುವೆ': ಇದು ವಿಭಿನ್ನ ಹಾರರ್ ಸಿನಿಮಾ
ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ.ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ಸದ್ಯ ಹಾಡಿನಿಂದ ಗಮನ ಸೆಳೆಯುತ್ತಿರುವ ಕೈಲಾಸ ಚಿತ್ರದ ಟ್ರೇಲರ್ ಅನ್ನು ಇದೇ ತಿಂಗಳ 24ರಂದು ಬಿಡುಗಡೆ ಮಾಡಿ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.