ಟಾಲಿವುಡ್ನ ಜನಪ್ರಿಯ ನಟ ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ದೇವರ'. ಬ್ಲಾಕ್ಬಸ್ಟರ್ ಆರ್ಆರ್ಆರ್ ಬಳಿಕ ಬರುತ್ತಿರುವ ನಟನ ಮೊದಲ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ದೇವರ ಮೇಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಪ್ರೇಕ್ಷಕರ ನಿರೀಕ್ಷೆಗಳನ್ನು ತಲುಪುವ ನಿಟ್ಟಿನಲ್ಲಿ ಚಿತ್ರತಂಡವೂ ಕಾರ್ಯ ನಿರ್ವಹಿಸುತ್ತಿದೆ.
ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಮತ್ತೊಂದು ಪ್ರಮುಖ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಂಡಿದೆ. ಈ ಮೂಲಕ ಶೇ. 90ರಷ್ಟು ಚಿತ್ರೀಕರಣ ಮುಗಿದಿದೆ.
ಎರಡು ಹಾಡುಗಳು ಮತ್ತು ಸಣ್ಣ ಸೀನ್ ಒಂದರ ಶೂಟಿಂಗ್ ಅಷ್ಟೇ ಬಾಕಿ ಇರುವಂತೆ ತೋರುತ್ತಿದೆ. ಈ ಭಾಗ ಕೂಡಾ ಮುಂದಿನ 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂಬುದು ಚಿತ್ರತಂಡದೊಳಗಿನ ಮಾತು. ಇತ್ತೀಚೆಗಷ್ಟೇ ಶಂಶಾಬಾದ್ ಪ್ರದೇಶದಲ್ಲಿ ಹಾಡಿಗಾಗಿ ವಿಶೇಷ ಸೆಟ್ ಹಾಕಲಾಗಿದೆ. ಈ ಹಾಡಿನ ಚಿತ್ರೀಕರಣ ಇಂದಿನಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದು, ಶೀಘ್ರದಲ್ಲೇ ಪ್ರಚಾರ ಪ್ರಾರಂಭಿಸಬೇಕಿದೆ. ಹಾಗಾಗಿ ಉಳಿದ ಶೇ.10ರಷ್ಟು ಚಿತ್ರೀಕರಣವನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕಿದೆ. ಚಿತ್ರವನ್ನು ಎನ್‌ಟಿಆರ್ ಮತ್ತು ಯುವಸುಧಾ ಬ್ಯಾನರ್ ಅಡಿ ಕಲ್ಯಾಣ್ ರಾಮ್ ನಿರ್ಮಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ತಯಾರಾಗುತ್ತಿರುವ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 27ಕ್ಕೆ ಬಿಡುಗಡೆಯಾಗಲಿದೆ.
ಆರಂಭದಲ್ಲಿ 2024ರ ಏಪ್ರಿಲ್ನಲ್ಲಿ ದೇವರ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಬಳಿಕ ಅಕ್ಟೋಬರ್ 10 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದಾಗ್ಯೂ ಸಿನಿಮಾ ಬಿಡುಗಡೆ ದಿನಾಂಕಗಳಲ್ಲಿ ಬದಲಾವಣೆಗಳಾಗಿವೆ. ನಿಗದಿತ ದಿನಾಂಕಕ್ಕೂ ಮೊದಲೇ ಚಿತ್ರಮಂದಿರ ಪ್ರವೇಶಿಸಲು ಸಜ್ಜಾಗಿದ್ದು, ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಸೆಪ್ಟೆಂಬರ್ 27ಕ್ಕೆ ದೇವರ ಬಿಡುಗಡೆ ಆಗಲಿದ್ದು, ಆರ್ಆರ್ಆರ್ನಂತೆ ಈ ಸಿನಿಮಾ ಕೂಡ ಯಶ ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕರಣ್ ಜೋಹರ್ಗೆ 'ಬಾಡಿ ಡಿಸ್ಮಾರ್ಫಿಯಾ': ಏನಿದು? ಆ ದಿನಗಳ ಬೇಸರ ತೋಡಿಕೊಂಡ ನಿರ್ಮಾಪಕ! - Karan Johar Body Dysmorphia
ಕೊರಟಾಲ ಶಿವ ಸಾರಥ್ಯದ ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಜೂನಿಯರ್ ಎನ್‌ಟಿಆರ್ ಜೊತೆ ಬಾಲಿವುಡ್ ನಟಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೇ, ನಟಿಗಿದು ತೆಲುಗಿನ ಚೊಚ್ಚಲ ಚಿತ್ರವೂ ಹೌದು. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಆಲಿ ಖಾನ್ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ನಟ ಪ್ರಕಾಶ್ ರೈ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಸೇರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಚಿತ್ರಕ್ಕೆ ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಜೊತೆಗೆ ಸಂತೋಷ್ ವೆಂಕಿ ಸಂಗೀತ ನಿರ್ದೇಶನ ಮಾಡಿದ್ದಾರೆ.