ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಚಂದನವನದ ಪ್ರೀತಿಯ ತಾರಾ ದಂಪತಿ. ಕಳೆದ ವರ್ಷ ಹಸೆಮಣೆ ಏರಿದ್ದ ಈ ಜೋಡಿ ಇಂದು ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಹೌದು, ಸೆಲೆಬ್ರಿಟಿ ಕಪಲ್ ಇಂದು ಮುಂಜಾನೆ ತಮ್ಮ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ.
ಇಂದು ಬೆಳಗಿನ ಜಾವ 3ಗಂಟೆ ಹೊತ್ತಿಗೆ ಹರ್ಷಿಕಾ ಭುವನ್ ಮಗಳನ್ನು ಬರ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ತಾಯಿ ಮಗಳು ಆರೋಗ್ಯವಾಗಿದ್ದಾರೆ. ಚಿಕಿತ್ಸೆ ಮುಂದುವರಿದಿದೆ. ಕಂದಮ್ಮನ ಆಗಮನದಿಂದ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಬಹಳ ಸಂತಸಗೊಂಡಿದ್ದಾರೆ.
ಸೆಲೆಬ್ರಿಟಿ ಕಪಲ್ ಇಂದು ಬೆಳಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಮಗಳ ಆಗಮನದ ಬಗ್ಗೆ ಖುಷಿ ಹಂಚಿಕೊಂಡಿರುವ ಪ್ರೇಮಪಕ್ಷಿಗಳು, ಕಂದಮ್ಮನ್ನ ಹೆಸರನ್ನೂ ಬಹಿರಂಗಪಡಿಸಿದ್ದಾರೆ.
ತಾರಾ ದಂಪತಿಯ ಪೋಸ್ಟ್: ''ಎಲ್ಲರಿಗೂ ನಮಸ್ಕಾರ, ನಮ್ಮ "ಚೈಕಾರ್ತಿ ಮೂಡಿ"ಯ ಆಗಮನವನ್ನು ಹಂಚಿಕೊಳ್ಳಲು ಬಹಳ ಸಂತೋಷವಾಗಿದೆ. ಹರ್ಷಿ ಮತ್ತು ಮಗು ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಹರ್ಷಿಯಂತೆ ಕಾಣುತ್ತಾಳೆ ಮತ್ತು ಹರ್ಷಿಯ ಪ್ರಕಾರ ಮಗು ನನ್ನಂತೆ ತೋರುತ್ತಿದೆ. ನೋಡೋಣ. ನಮ್ಮ ಪ್ರಯಾಣದುದ್ದಕ್ಕೂ ನೀವು ತೋರಿರುವ ಪ್ರೀತಿ ಮತ್ತು ಶುಭ ಹಾರೈಕೆಗಳಿಗಾಗಿ ಧನ್ಯವಾದಗಳು. ಲವ್ ಯೂ ಆಲ್'' ಎಂದು ಬರೆದುಕೊಂಡಿದ್ದಾರೆ. ತಮ್ಮ ಮುದ್ದು ಮಗಳ ಹೆಸರು ಚೈಕಾರ್ತಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ನಟ ರಜನಿಕಾಂತ್ ಚೆನ್ನೈ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ - Actor Rajinikanth discharged
ಪೋಸ್ಟ್ನ ಪೋಸ್ಟರ್ನಲ್ಲಿ ಮುದ್ದಾದ ಗೊಂಬೆ ಚಿತ್ರದ ಜೊತೆಗೆ, ''ಹಾಯ್ ವರ್ಲ್ಡ್, ಐ ಜಸ್ಟ್ ಗಾಟ್ ಹಿಯರ್. ಯೂ ಕ್ಯಾನ್ ಕಾಲ್ ಮಿ 'ಚೈಕಾರ್ತಿ' ಉಲ್ಲಿಯಡ ಪ್ರಿನ್ಸೆಸ್ ಆ್ಯಸ್ ಆಫ್ ನೌ. ಬ್ಲೆಸ್ ಮಿ'' ಎಂದು ಬರೆಯಲಾಗಿದೆ. ಜೊತೆಗೆ, ಗುರುವಾರ, 03-10-2024, ಮಮ್ಮಿ ಹರ್ಷಿ, ಡ್ಯಾಡಿ ಭುವನ್ ಎಂಬುದಾಗಿಯೂ ಬರೆಯಲಾಗಿದೆ. ಶೀರ್ಷಿಕೆಯೆಂಬಂತೆ ಪೋಸ್ಟರ್ನ ಮೇಲ್ಭಾಗದಲ್ಲಿ ಗುಡ್ ನ್ಯೂಸ್ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಅ.4ರಿಂದ 'ಮಾರ್ಟಿನ್' ಜಾತ್ರೆ: ಆ್ಯಕ್ಷನ್ ಪ್ರಿನ್ಸ್ ಸಂಭಾವನೆ ಬಗ್ಗೆ ನಿರ್ಮಾಪಕರು ಹೇಳಿದ್ದೇನು? - Martin Cinema
ಜೋಡಿ ಶೇರ್ ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮತ್ತು ಅಭಿಮಾನಿಗಳು ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, ''ಹೌದು, ಈ ನವರಾತ್ರಿಯಲ್ಲಿ ಸಂಭವಿಸಿರುವ ಒಳ್ಳೆಯ ವಿಷಯ. ದೇವಿ ಮಾತೆ ನಿಮಗೆ ಪುಟ್ಟ ದೇವತೆಯನ್ನು ಅನುಗ್ರಹಿಸಿದ್ದಾಳೆ, ಈ ಪ್ರಪಂಚಕ್ಕೆ ಸ್ವಾಗತ, ಪುಟ್ಟ ದೇವಿ'' ಎಂದು ತಿಳಿಸಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, ಬಹಳ ಸಂತೋಷವಾಯಿತು, ದೇವರು ಅಶೀರ್ವದಿಸಲಿ ಎಂದು ಬರೆದುಕೊಂಡಿದ್ದಾರೆ. ಹೀಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ. ಮಗಳ ಫೋಟೋ ರಿವೀಲ್ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.