ಚೆನ್ನೈ: ಖ್ಯಾತ ನಿರ್ದೇಶಕ ಶಂಕರ್ ಅವರ ಹಿರಿಯ ಮಗಳು ಐಶ್ವರ್ಯ ಶಂಕರ್ ಸಹಾಯಕ ನಿರ್ದೇಶಕ ತರುಣ್ ಕಾರ್ತಿಕೇಯನ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಈ ವಿವಾಹ ಸಮಾರಂಭಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಖ್ಯಾತ ನಟರಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಸಹ ಸಾಕ್ಷಿಯಾದರು.
ಪ್ರಸಿದ್ದ ನಿರ್ದೇಶಕನ ಮಗಳ ಮದುವೆಯಲ್ಲಿ ಭಾಗವಹಿಸಿ ವಧು- ವರರಿಗೆ ಶುಭಕೋರಿದರು. ಚೆನ್ನೈನ ಈಸ್ಟ್ ಕೋಸ್ಟ್ ರೋಡ್‌ನಲ್ಲಿರುವ ಆರ್ ಕೆ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ವಿವಾಹವು ಅಕ್ಷರಶಃ ಅದ್ಧೂರಿಯಾಗಿ ನೆರವೇರಿತು. ಸೋಮವಾರ ನಡೆದ ಮದುವೆ ಸಮಾರಂಭದಲ್ಲಿ ನಟರಾದ ರಜನಿಕಾಂತ್, ಕಮಲ್ ಹಾಸನ್, ನಯನತಾರಾ, ಕೀರ್ತಿ ಸುರೇಶ್, ಸೂರ್ಯ, ಕಾರ್ತಿ, ವಿಕ್ರಮ್, ವಿಶಾಲ್, ಅರ್ಜುನ್ ಮತ್ತು ನಿರ್ದೇಶಕರಾದ ಮಣಿರತ್ನಂ, ಭಾರತಿರಾಜ, ಕೆ ಭಾಗ್ಯರಾಜ್, ಪಿ ವಾಸು, ಕೆ ಎಸ್ ರವಿಕುಮಾರ್, ಹರಿ, ಸೇರಿ ಪ್ರಮುಖರು ಭಾಗಿಯಾಗಿದ್ದರು. ವಿಷ್ಣು ವರ್ಧನ್, ವಿಘ್ನೇಶ್ ಶಿವನ್ ಮತ್ತು ರವಿಕುಮಾರ್ ಸಹ ಇದೇ ವೇಳೆ ಹಾಜರಿದ್ದು, ಐಶ್ವರ್ಯ ಶಂಕರ್ ಹಾಗೂ ತರುಣ್ ಕಾರ್ತಿಕೇಯನ್ ಜೋಡಿಗೆ ಹರಿಸಿ ಹಾರೈಸಿದರು.
ಈ ಸಮಾರಂಭದಲ್ಲಿ ನಟ- ನಟಿಯರಷ್ಟೇ ಅಲ್ಲ ನಿರ್ಮಾಪಕರಾದ ಆರ್ ಬಿ ಚೌಧರಿ, ಜಯಂತಿಲಾಲ್ ಗಡ್ಡಾ, ಎ ಎಂ ರತ್ನಂ, ದಿಲ್ ರಾಜು, ಇಶಾರಿ ಗಣೇಶ್, ರಾಜಶೇಖರ್ ಮತ್ತು ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಕೂಡಾ ಉಪಸ್ಥಿತರಿದ್ದರು. ನಿರ್ದೇಶಕ ಶಂಕರ್ ಪ್ರಸ್ತುತ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಮತ್ತು ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಶಂಕರ್ ಅವರ ಎರಡನೇ ಪುತ್ರಿ ಅದಿತಿ ಮಾವೀರನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದನ್ನು ಓದಿ: ಕೊನೆಗೂ 'ಉತ್ತರಕಾಂಡ' ಚಿತ್ರದ ಶೂಟಿಂಗ್ ಆರಂಭ - Uttarakanda Movie