ಕನ್ನಡ ಚಿತ್ರರಂಗದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ಅಜಾನುಬಾಹು ದೇಹ. ಒಳ್ಳೆ ಹೈಟ್, ಕಟ್ಟು ಮಸ್ತಾದ ದೇಹ ಹೊಂದಿರುವ ದರ್ಶನ್ ಸಿನಿಮಾ ಸ್ಟಂಟ್‌ಗಳನ್ನು ಮಾಡುವಾಗ ಹಲವು ಬಾರಿ ಪೆಟ್ಟು ಮಾಡಿಕೊಂಡಿದ್ದು, ಇಂದಿಗೂ ನೋವು ತಿನ್ನುತ್ತಿದ್ದಾರೆ. ಆದರೆ, ದರ್ಶನ್ ಅವನ್ನೆಲ್ಲ ಲೆಕ್ಕಿಸದೇ, ಸಿನಿಮಾಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.
ಇತ್ತೀಚೆಗೆ ಡೆವಿಲ್ ಚಿತ್ರದ ಫೈಟ್ ಸೀನ್ನ ಶೂಟಿಂಗ್ನಲ್ಲಿ ದರ್ಶನ್ ಅವರ ಕೈಗೆ ಪೆಟ್ಟು ಬಿದ್ದಿತ್ತು. ತಕ್ಷಣವೇ ಶಸ್ತ್ರಚಿಕಿತ್ಸೆ ಆಗಬೇಕು ಎಂದು ವೈದ್ಯರು ಸೂಚಿಸಿದ್ದರಂತೆ. ಆದರೆ, ಅದರಿಂದ ಸಿನಿಮಾ ಶೂಟಿಂಗ್ ವಿಳಂಬವಾಗುತ್ತದೆ. ಮತ್ತೊಮ್ಮೆ ಸಾಹಸ ನಿರ್ದೇಶಕರ ಕಾಲ್‍ಶೀಟ್ ಹೊಂದಿಸಿ ಚಿತ್ರೀಕರಣ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆಯನ್ನು ದರ್ಶನ್ ಮುಂದಕ್ಕೆ ಹಾಕಿದ್ದರು. ಆದರೆ, ಎಡಗೈ ನೋವು ಹೆಚ್ಚಾಗುತ್ತಿರುವ ಕಾರಣ ವಿಧಿ ಇಲ್ಲದೇ ದಾಸ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.
ಎಡಗೈ ಮೂಳೆ ಮುರಿದುಕೊಂಡಿರುವ ದರ್ಶನ್ ಇಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕೆಲವೊಮ್ಮೆ ಸಣ್ಣಪುಟ್ಟ ಗಾಯಗಳಾದ್ರೂ ದರ್ಶನ್ ಚಿತ್ರೀಕರಣದಲ್ಲಿ ಪಾಲ್ಗೊಂಡ ಉದಾಹರಣೆಯಿದೆ. ದರ್ಶನ್ ಪ್ರಾಣಿ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷ್ಯ. ದರ್ಶನ್ ಕುದುರೆ ಸವಾರಿಯಲ್ಲಿ ಎಷ್ಟೇ ಅಭ್ಯಾಸ ಮಾಡಿದ್ರೂ, ಕುದುರೆ ಮೇಲಿಂದ ಬಿದ್ದು ಅನೇಕ ಬಾರಿ ನೋವುಗಳನ್ನು ತಿಂದಿದ್ದಾರೆ. ಸಂಗೊಳ್ಳಿ ರಾಯಣ್ಣ ಚಿತ್ರದ ಶೂಟಿಂಗ್ ವೇಳೆಯಲ್ಲೂ ಕುದುರೆ ಸವಾರಿ ಮಾಡುವ ವೇಳೆ ದರ್ಶನ್ ಆಯತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡಿದ್ರು. ಈ ವೇಳೆ ಬಲಗಾಲಿನ ಕೆಳಭಾಗಕ್ಕೆ ಪೆಟ್ಟಾಗಿತ್ತು.
ಇನ್ನೂ ಬೃಂದಾವನ ಸಿನಿಮಾ ಸಂದರ್ಭ ದರ್ಶನ್ ಎರಡು ಬಾರಿ ಗಾಯ ಮಾಡಿಕೊಂಡಿದ್ರು. ಚಿತ್ರದ ಆ್ಯಕ್ಷನ್ ಸನ್ನಿವೇಶದಲ್ಲಿ ಡ್ಯೂಪ್ ಇಲ್ಲದೇ ಸ್ಟಂಟ್ ಮಾಡೋದಕ್ಕೆ ಹೋಗಿ ದರ್ಶನ್ ಕುತ್ತಿಗೆಗೆ ಪೆಟ್ಟು ಮಾಡಿಕೊಂಡು, ಕೆಲ ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: 'ರಾಮಾಯಣ'ಕ್ಕಾಗಿ ₹11 ಕೋಟಿಯ ಅಯೋಧ್ಯೆ ಸೆಟ್ ನಿರ್ಮಾಣ: ವಿಡಿಯೋ ವೈರಲ್ - Ramayana Shooting set
ಈ ಘಟನೆಯಿಂದ ಚೇತರಿಸಿಕೊಂಡ ದರ್ಶನ್, ಬೃಂದಾವನ ಚಿತ್ರದ ಸಾಂಗ್ ಶೂಟಿಂಗ್ ವೇಳೆಯಲ್ಲಿ ಮತ್ತೊಮ್ಮೆ ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದರು. ಐಸ್‌ಲ್ಯಾಂಡ್‌ನಲ್ಲಿ ಚಿತ್ರೀಕರಣ ನಡೆದಿತ್ತು. ಈ ವೇಳೆ ಕುದುರೆ ಮೇಲಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದರು. ಇನ್ನು ಜಗ್ಗುದಾದ ಸಿನಿಮಾಕ್ಕಾಗಿ ದರ್ಶನ್ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಆಯತಪ್ಪಿ ಎಡಗೈ ಮೂಳೆಗೆ ಪೆಟ್ಟು ಮಾಡ್ಕೊಂಡಿದ್ದರು. ಒಂದು ತಿಂಗಳು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು. ಆ ನೋವು ಹತೋಟಿಗೆ ಬರಲಿಲ್ಲ, ಹಾಗಾಗಿ ಎಡಗೈಗೆ ಸಣ್ಣದೊಂದು ಸರ್ಜರಿ ಮಾಡಿಸಿಕೊಂಡಿದ್ದರು.
ಇದನ್ನೂ ಓದಿ: BMW ಖರೀದಿಸಿದ ಕಾಟೇರ ನಿರ್ದೇಶಕ: ತರುಣ್ ಸುಧೀರ್ ಕಾರ್ ಡ್ರೈವ್ ಮಾಡಿದ ದರ್ಶನ್ - Tarun Sudhir BMW car
ಈಗ ಡೆವಿಲ್ ಸಿನಿಮಾದ ಆ್ಯಕ್ಷನ್ ಸನ್ನಿವೇಶದಲ್ಲಿ ದರ್ಶನ್ ಎಡಗೈ ಏಟು ಮಾಡಿಕೊಂಡಿದ್ದರೂ ಕೂಡ, ಮ್ಯಾಟ್ನಿ ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಜಾಜಿ ಆಲ್ಬಂ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ದರ್ಶನ್ ಕೈಗೊಂದು ಆರ್ಮ್ ಪೌಚ್ ಹಾಕಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿನ್ನೆ ಸುಮಲತಾ ಅಂಬರೀಶ್ ಅವರ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದರ್ಶನ್ ಸ್ವತಃ ಗಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.