ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರಂದು ಯಾತ್ರಾರ್ಥಿಗಳ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಿನಿ ತಾರೆಯರು ಕೂಡ ತಮ್ಮ ದನಿ ಎತ್ತಿದ್ದಾರೆ. ಈ ಘಟನೆಯಿಂದ ರಾಷ್ಟ್ರ ತತ್ತರಿಸಿದ್ದು, ನಮ್ಮನ್ನಗಲಿರುವ ಜೀವಗಳಿಗೆ ಸಂತಾಪ ಸೂಚಿಸಿ, ಅವರ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸವನ್ನು ರಶ್ಮಿಕಾ ಮಂದಣ್ಣ, ಪರಿಣಿತಿ ಚೋಪ್ರಾ ಮತ್ತು ರಿಚಾ ಚಡ್ಡಾ ಸೇರಿದಂತೆ ಹಲವರು ಮಾಡಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ರಿಯಾಸಿ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ, "ರಿಯಾಸಿ ಘಟನೆಯ ಫೋಟೋಗಳನ್ನು ನೋಡಿ ನುಚ್ಚುನೂರಾಗಿದ್ದೇನೆ. ಮೃತರ ಕುಟುಂಬಕ್ಕೆ ಆ ದೇವರು ಶಕ್ತಿ ತುಂಬಲಿ ಮತ್ತು ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ" ಎಂದು ಬರೆದುಕೊಂಡಿದ್ದಾರೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ನಲ್ಲಿ, "ರಿಯಾಸಿ ದಾಳಿ ಸಂತ್ರಸ್ತರನ್ನು ನೆನೆದು ತೀವ್ರ ದುಃಖವಾಗಿದೆ. ಘಟನೆ ಬೀಭತ್ಸವಾಗಿದೆ. ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲಾ ಸಂತ್ರಸ್ತರು, ಅವರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ನಟಿ ರಿಚಾ ಚಡ್ಡಾ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ, "ಕೇವಲ ಹೇಡಿಗಳು ಶಾಂತಿಯುತವಾಗಿ ಪೂಜಾ ಸ್ಥಳಕ್ಕೆ ಹೋಗುವ ಯಾತ್ರಾರ್ಥಿಗಳ ಮೇಲೆ ದಾಳಿ ಮಾಡಬಹುದು. ಸಂತ್ರಸ್ತರಿಗೆ ನ್ಯಾಯ ಸಿಗಲಿ. ಈ ವಾರಾರಂಭದಲ್ಲಿ ಹೃದಯ ವಿದ್ರಾವಕ ಸುದ್ದಿ ದುಃಖ ನೀಡಿದೆ" ಎಂದು ಬರೆದುಕೊಂಡಿದ್ದಾರೆ.
ಖ್ಯಾತ ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ ಪೋಸ್ಟ್ನಲ್ಲಿ, "ರಿಯಾಸಿನಲ್ಲಿ ಅಮಾಯಕ ಯಾತ್ರಾರ್ಥಿಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿ ಬಗ್ಗೆ ತಿಳಿದುಕೊಂಡೆ. ಅಗಲಿದ ಆತ್ಮಗಳೊಂದಿಗೆ ನನ್ನ ಪ್ರಾರ್ಥನೆ ಇದೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಸ್ಥರಿಗೆ ನನ್ನ ತೀವ್ರ ಸಂತಾಪಗಳು" ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಬಿಪಾಶಾ ಬಸು, ಕಂಗನಾ ರಣಾವತ್, ವರುಣ್ ಧವನ್, ಅನುಪಮ್ ಖೇರ್ ಸೇರಿ ಹಲವರು ಈ ಉಗ್ರ ದಾಳಿಯನ್ನು ಖಂಡಿಸಿದ್ದಾರೆ.
''All Eyes on Reasi": ಇತ್ತೀಚೆಗೆ ದಕ್ಷಿಣ ಗಾಜಾದ ರಫಾದಲ್ಲಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ ಅನೇಕರು ಪ್ರಾಣ ಕಳೆದುಕೊಂಡರು. ದಾಳಿಯ ನಂತರ "ಆಲ್ ಐಸ್ ಆನ್ ರಫಾ" ಎಂಬುದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಯಿತು. ಈ ಮೂಲಕ ಜನರು ತಮ್ಮ ವಿರೋಧ ವ್ಯಕ್ತಪಡಿ, ದಾಳಿಯನ್ನು ಕೊನೆಗೊಳಿಸುವಂತೆ ಕರೆ ನೀಡಿದರು. ಅದೇ ರೀತಿ ಭಾರತದಲ್ಲಿ "ಆಲ್ ಆಯ್ಸ್ ಆನ್ ರಿಯಾಸಿ" ಎಂಬ ಟ್ರೆಂಡ್ ಶುರುವಾಗಿದೆ.
ಇದನ್ನೂ ಓದಿ: 'ಇದು ಹೇಡಿತನದ ಕೃತ್ಯ': ಜಮ್ಮು ಕಾಶ್ಮೀರ ಉಗ್ರ ದಾಳಿಗೆ ಬಾಲಿವುಡ್ ನಟ, ನಟಿಯರ ಖಂಡನೆ - BOLLYWOOD CELEBS CONDOLENCE
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಭಯೋತ್ಪಾದಕ ದಾಳಿಯಿಂದ ಕಂದಕಕ್ಕೆ ಬಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ರಾಷ್ಟ್ರದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ರಿಯಾಸಿ ಜಿಲ್ಲೆಯ ಶಿವ ಖೋರಿ ಗುಹೆ ದೇಗುಲದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿಯಾಗಿತ್ತು. ಜೂನ್ 9ರ ಸಂಜೆ 6.10 ಕ್ಕೆ ತೇರ್ಯತ್ ಗ್ರಾಮದ ಬಳಿ ಘಟನೆ ಸಂಭವಿಸಿದೆ. ದುರಂತದ ತನಿಖೆಗಾಗಿ ಎನ್‌ಐಎ ತಂಡ ರಿಯಾಸಿಗೆ ಆಗಮಿಸಿದೆ. ಹತ್ಯೆಗೀಡಾದ ಯಾತ್ರಾರ್ಥಿಗಳ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಲಾಗಿದೆ.
ಇದನ್ನೂ ಓದಿ: 'ಕೋಟಿ': ಡಾಲಿ ವೃತ್ತಿಜೀವನದಲ್ಲೇ ಅತಿ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿದ ಚಿತ್ರ - Kotee Movie