ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ 'ಬಿಗ್ ಬಾಸ್ ಕನ್ನಡ ಸೀಸನ್ 11'ರ ನಿರೂಪಕ ಅಭಿನಯ ಚಕ್ರವರ್ತಿ ವೇದಿಕೆಯಲ್ಲೇ ಅಮ್ಮನನ್ನು ಸ್ಮರಿಸಿ ಕಣ್ಣೀರಿಟ್ಟಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಬಂದು ಕಾರ್ಯಕ್ರಮ ನಡೆಸಿಕೊಟ್ಟ ಅವರ ಬದ್ಧತೆಗೀಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್ ಅವರ ತಾಯಿ ಸರೋಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿಯ ಗಂಭೀರ ಪರಿಸ್ಥಿತಿ ನಡುವೆಯೂ, ಕಾರ್ಯಕ್ರಮವನ್ನು ಅರ್ಧಕ್ಕೆ ಬಿಡಬಾರದು ಎಂದು ವಾರಾಂತ್ಯದ ಶೋಗಳನ್ನು ನಡೆಸಿಕೊಟ್ಟರು. ಉಸಿರಾಟದ ತೊಂದರೆ ಹಿನ್ನೆಲೆ, ತಾಯಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ದುರಾದೃಷ್ಟವಶಾತ್ ಸರೋಜಾ ಅವರು ತಮ್ಮ 75ನೇ ವಯಸ್ಸಿಗೆ ಕೊನೆಯುಸಿರೆಳೆದರು.
ನಂತರ ಒಂದು ವಾರಾಂತ್ಯದ (ಅಕ್ಟೋಬರ್ 26, 27) ಕಾರ್ಯಕ್ರಮಗಳನ್ನು ಸುದೀಪ್ ನಡೆಸಿಕೊಡಲಾಗಲಿಲ್ಲ. ಬದಲಾಗಿ, ಮೂವರು ಅತಿಥಿಗಳು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಮನೋರಂಜಿಸಿದ್ದರು. ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಮತ್ತು ಮಾತಿನ ಮಲ್ಲ ಸೃಜನ್ ಲೋಕೇಶ್ ಕಾಣಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆ ವಾರದಲ್ಲಿ ಹಂಸ ಅವರು ಎಲಿಮಿನೇಟ್ ಆಗಿದ್ದರು. ಇನ್ನು ಐದನೇ ವಾರಾಂತ್ಯದಲ್ಲಿ, ನಿನ್ನೆ ಮಾನಸಾ ಅವರು ಮನೆಯಿಂದ ಹೊರಬಂದಿದ್ದಾರೆ.
ಇದನ್ನೂ ಓದಿ: ನಟ ಮಿಥುನ್ ಚಕ್ರವರ್ತಿ ಮಾಜಿ ಪತ್ನಿ ಹೆಲೆನಾ ಅಮೆರಿಕದಲ್ಲಿ ನಿಧನ
ಐದನೇ ವೀಕೆಂಡ್ ಎಪಿಸೋಡ್ಗಾಗಿ ಬಂದ ಸುದೀಪ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಸಂತಾಪ ಸೂಚಿಸಲಾಯಿತು. ವೇದಿಕೆ ಬಳಿ ಇದ್ದ ಪ್ರೇಕ್ಷಕರು, ಮನೆಯ ಸದಸ್ಯರು ಸೇರಿ ವಾಹಿನಿ ಮತ್ತು ಬಿಗ್ ಬಾಸ್ ತಂಡ ಶ್ರದ್ಧಾಂಜಲಿ ಸಲ್ಲಿಸಿತು. ಸರೋಜಾ ಅವರ ಫೋಟೋ ಹಾಕಿ ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯನಂತಹ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆಗೂ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾರದ ಭಾರ ಎನ್ನುವ ಹಿನ್ನೆಲೆ ದನಿ ಅಲ್ಲಿದ್ದವರ ಕಣ್ಣೀರಿಗೆ ಕಾರಣವಾಯ್ತು.
ಇದನ್ನೂ ಓದಿ: ಬಿಗ್ ಬಾಸ್ನಿಂದ ಮಾನಸಾ ಔಟ್: ಮುಖವಾಡ ಕಳಚಿತು ವಿಡಿಯೋ; ಬೆನ್ನಿಂದೆ ಮಾತನಾಡಿದ್ದೆಲ್ಲವೂ ಸ್ಪರ್ಧಿಗಳ ಮುಂದೆ
ವಾರಾಂತ್ಯದ ಕಾರ್ಯಕ್ರಮ ಆರಂಭ ಆಗುವ ಮುನ್ನ ಮತ್ತು ನಿನ್ನೆಯ ಸಂಚಿಕೆ ಕೊನೆಗೆ ಮಾತನಾಡಿದ ಸುದೀಪ್, ಅಮ್ಮನ ಅಚ್ಚುಮೆಚ್ಚಿನ ಕಾರ್ಯಕ್ರಮ ಬಿಗ್ ಬಾಸ್. ಕಾರ್ಯಕ್ರಮ ನಡೆಸಿಕೊಟ್ಟು ಮನೆಗೆ ಹೋದ ಬಳಿಕ ಅವರ ಪ್ರತಿಕ್ರಿಯೆ ಕೇಳುತ್ತಿದ್ದೆ. ಇನ್ನುಂದೆ ಅದನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂಬರ್ಥದಲ್ಲಿ ಮಾತನಾಡಿ ಭಾವುಕರಾದರು. ಜೊತೆಗೆ ಈ ಕಠಿಣ ಸಂದರ್ಭ ಧೈರ್ಯ ತುಂಬಿದ, ಸಂತಾಪ ಸೂಚಿಸಿದ ಸರ್ವರಿಗೂ ಮನತುಂಬಿ ಧನ್ಯವಾದ ಅರ್ಪಿಸಿದರು.