ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸ್ಟಾರ್ ನಟರ ಸಿನಿಮಾಗಳಿಲ್ಲದೆ ಚಿತ್ರಮಂದಿರದತ್ತ ಪ್ರೇಕ್ಷಕರು ಬರುತ್ತಿಲ್ಲ ಎಂಬ ದೂರುಗಳಿವೆ. ಈ ನಡುವೆ ದುನಿಯಾ ವಿಜಯ್ ಅಭಿನಯಿಸಿ, ನಿರ್ದೇಶಿಸಿರುವ 'ಭೀಮ' ಚಿತ್ರದ ಬಿಡುಗಡೆ ಮುಹೂರ್ತ ಫಿಕ್ಸ್ ಆಗಿದೆ.
ಮಾಸ್ ಟೈಟಲ್ನಿಂದ ಸುದ್ದಿಯಲ್ಲಿರುವ ಭೀಮ, ಟ್ರೇಲರ್ ಹಾಗೂ ಹಾಡುಗಳಿಂದ ಗಮನ ಸೆಳೆಯುತ್ತಿದೆ. ಚಿತ್ರದ 'ಬ್ಯಾಡ್ ಬಾಯ್ಸ್.., ಐ ಲವ್ ಯೂ ಕಣೆ.. ಮತ್ತು ಡೋಂಟ್ ವರಿ ಬೇಬಿ ಚಿನ್ನಮ್ಮ.. ಎಂಬ ಹಾಡುಗಳು ಪ್ರೇಕ್ಷಕರ ಮನ ಸೆಳೆಯುತ್ತಿವೆ.
ಹೊಸ ಹಾಡಿನೊಂದಿಗೆ ಯಾವುದೇ ಕಟ್ಸ್ ಇಲ್ಲದೆ, ಸೆನ್ಸಾರ್ ಮಂಡಳಿಯಿಂದ ಸಿನಿಮಾ ಪ್ರಮಾಣ ಪತ್ರ ಪಡೆದುಕೊಂಡಿದೆ. ಈ ನಡುವೆ, ಬೂಮ್ ಬೂಮ್ ಬೆಂಗಳೂರು.. ಎಂಬ ಹಾಡು ಕೂಡಾ ಪಡ್ಡೆಗಳ ಮೆಚ್ಚುಗೆಗಿಟ್ಟಿಸುತ್ತಿದೆ. ಇದನ್ನು ನಾಗರಹೊಳೆ ಸಮೀಪದ ಬುಡಕಟ್ಟು ತಂಡದ 30 ಸದಸ್ಯರು ಅವರ ಆಡುಭಾಷೆಯಲ್ಲೇ ಹಾಡಿರುವುದು ವಿಶೇಷ.
ಈ ಹಿಂದೆ ಸಲಗ ಚಿತ್ರದಲ್ಲಿ ಸಿದ್ದಿ ಜನಾಂಗದವರು ಹಾಡಿದ ಟಿನಿಂಗ ಮಿಣಿಂಗ ಸೂಪರ್ ಹಿಟ್ ಆಗಿತ್ತು. ಅದೇ ರೀತಿಯ ಹಾಡು ಭೀಮ ಚಿತ್ರದಲ್ಲೂ ಇದೆ. ಬುಡಕಟ್ಟು ಜನಾಂಗದವರು, ಬೂಮ್ ಬೂಮ್ ಬೆಂಗಳೂರು ಲೇ ಲೇ ಮುನ್ನ.. ಎಂಬ ಸಾಲುಗಳಿರುವ ಹಾಡು ಹಾಡಿದ್ದಾರೆ.
ಜೆ.ಬಿ.ರಮೇಶ ಹಾಗೂ ಟೀಂ ಗಿರಿಜಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ವಿಲನ್ ಪಾತ್ರಧಾರಿ ಡ್ರ್ಯಾಗನ್ ಮಂಜು, ದುನಿಯಾ ವಿಜಯ್ ಹಾಗೂ ಒಂದಷ್ಟು ಜನರು ಕಾಣಿಸಿಕೊಂಡಿದ್ದಾರೆ.
ನೈಜ ಘಟನೆ ಆಧರಿತ ಕಥೆಯಾಗಿರುವ 'ಭೀಮ' ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ ಸೇರಿದಂತೆ ದೊಡ್ಡ ತಾರಾಬಳಗವಿದೆ. ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ಮಾಸ್ತಿ ಡೈಲಾಗ್ಸ್ ಇದೆ. ದೀಪು ಎಸ್.ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ ಸಂಯೋಜನೆ ಮಾಡಿದ್ದಾರೆ.
ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣದ ಚಿತ್ರ ಆಗಸ್ಟ್ 9ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಇದನ್ನೂ ಓದಿ: 'ಅಳಿದು ಉಳಿದವರು' ಖ್ಯಾತಿಯ ಅಶು ಬೆದ್ರ ನಟನೆಯ ಹೊಸ ಸಿನಿಮಾದ ಮೇಕಿಂಗ್ ವಿಡಿಯೋ ರಿವೀಲ್ - Ashu Bedra new movie