ಬಹಳ ದಿನಗಳ ಬಳಿಕ ಆನಂದ್ ಬಾಬು ಅವರು ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ದೊಡ್ಡ ಬಜೆಟ್‌ನ 'ಧೈರ್ಯಂ ಸರ್ವತ್ರ ಸಾಧನಂ' ಎಂಬ ಸಿನಿಮಾ ನಿರ್ಮಿಸಿದ್ದು, ಫೆಬ್ರವರಿ 23ರಂದು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಟ್ರೇಲರ್ ನಾಳೆ ರಿಲೀಸ್ ಆಗಲಿದೆ.
ಹಾಸನ ಜಿಲ್ಲೆಯ ಅರಸೀಕೆರೆಯ ಆನಂದ್ ಬಾಬು ಪದವಿ ಶಿಕ್ಷಣದ ಬಳಿಕ ಬೆಂಗಳೂರಿಗೆ ವಲಸೆ ಬಂದರು. ಮೊದಲಿಗೆ ಪ್ರೊಡಕ್ಷನ್ ಸಂಸ್ಥೆಯಲ್ಲಿ ಆಫೀಸ್ ಬಾಯ್ ಆದರು. ನಂತರ ಲೈಟ್ ಬಾಯ್ ಆಗಿ ಬಡ್ತಿ ಪಡೆದರು. ಶೂಟಿಂಗ್ ವಿಚಾರಗಳನ್ನು ಕಲಿತು ನಿರ್ದೇಶಕನಾಗಬೇಕು ಎನ್ನುವ ಕನಸು ಹೊಂದಿದ್ದ ಆನಂದ ಬಾಬು ಅನಿರೀಕ್ಷಿತ ಬೆಳವಣಿಗೆಯಲ್ಲಿ ನಿರ್ಮಾಪಕರಾದರು. ಖ್ಯಾತ ನಿರ್ದೇಶಕ ಶಿವಮಣಿ ಅವರ 'ಅಕ್ಕ' ಧಾರವಾಹಿಗೆ ಲೈಟ್ ಬಾಯ್ ಆಗಿ ಕೆಲಸ ಮಾಡಿದರು. ಇವರ ಕೆಲಸ ಗುರುತಿಸಿದ ಶಿವಮಣಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ ನೀಡಿದರು.
ಎಸ್.ನಾರಾಯಣ್ ಅವರ ಸೇವಂತಿ ಸೇವಂತಿ, ಚೆಲುವಿನ ಚಿತ್ತಾರ, ಚಂಡ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ. ಖಾಸಗಿ ವಾಹಿನಿಯಲ್ಲಿ ಯಾರಿಗುಂಟು ಯಾರಿಗಿಲ್ಲ, ಕುಣಿಯೋಣ ಬಾರಾ, ಸೈ, ಬಾಳೆ ಬಂಗಾರ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಬರೆದು ಅಸೋಸಿಯೇಟ್ ಡೈರೆಕ್ಡರ್ ಆಗಿ ಕೆಲಸ ಮಾಡಿದರು. ಇದರೊಂದಿಗೆ ಶ್ರೀ ಶಂಕರ ಟಿವಿಯಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ಅಭಿನಯ ತರಂಗ ರಂಗಭೂಮಿಯಲ್ಲಿ ಒಂದು ವರ್ಷದ ಅಭಿನಯ ಕೋರ್ಸ್ ಮಾಡಿದ್ದಾರೆ. ಬೀದಿ ನಾಟಕ, ನಾಟಕ ಪ್ರದರ್ಶನಗಳಲ್ಲಿ ಭಾಗಿಯಾಗಿ ರಂಗಭೂಮಿಯಲ್ಲೂ ತಮ್ಮನ್ನು ತೊಡಗಿಸಿಕೊಂಡರು.
ಇದಾದ ಬಳಿಕ ನಿರ್ಮಾಣಕ್ಕೆ ಕೈ ಹಾಕಿದ ಆನಂದ ಬಾಬು 2016ರಲ್ಲಿ ಚಿತ್ರ ನಿರ್ಮಿಸಿ ಕೈ ಸುಟ್ಟುಕೊಂಡರು. ಸಾಲದ ಹೊರೆಯ ನಡುವೆಯೂ 2018ರಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಎನ್ನುವ ಚಿತ್ರ ನಿರ್ಮಿಸಿದರು. 2020ರಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿಷಯ ಆಧರಿಸಿದ ಗುಬ್ಬಿಮರಿ ಚಿತ್ರ ಪ್ರೇಮಿಸುವ ಮೂಲಕ ಮೆಚ್ಚುಗೆಯನ್ನು ಪಡೆದರು. ಬಡತನದ ಹಾದಿಯಿಂದ ಬಂದ ಆನಂದ ಬಾಬು ಈಗ ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: 'ಹಯಗ್ರೀವ' ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡುತ್ತಿದ್ದೇನೆ: ನಟ ಧನ್ವೀರ್