ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ನಡೆದ ಯಾತ್ರಾರ್ಥಿಗಳ ಬಸ್ ಮೇಲಿನ ಉಗ್ರರ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಭಾರತೀಯ ಚಿತ್ರರಂಗದ ಗಣ್ಯರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ನ ನಟಿ-ನಿರ್ಮಾಪಕಿ ಆಲಿಯಾ ಭಟ್ ಈ ದುರಂತವನ್ನು ತೀವ್ರವಾಗಿ ಖಂಡಿಸಿದ್ದಾರೆ. ಜವಾನ್ ನಿರ್ದೇಶಕ ಅಟ್ಲೀ ಮತ್ತು ನಟಿ ಹೀನಾ ಖಾನ್ ಸೇರಿದಂತೆ ಹಲವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಭಾನುವಾರ, ಜೂನ್ 9ರಂದು ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಭಯೋತ್ಪಾದಕರ ದಾಳಿಗೆ ಒಳಗಾಯಿತು. ಉಗ್ರರ ಗುಂಡಿನ ದಾಳಿಗೆ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಬಿದ್ದ ಪರಿಣಾಮ 10 ಮಂದಿ ಸಾವನ್ನಪ್ಪಿ 33ಕ್ಕೂ ಅಧಿಕ ಯಾತ್ರಾರ್ಥಿಗಳು ಗಾಯಗೊಂಡರು. ಘಟನೆಯನ್ನು ಸಾಮಾನ್ಯ ಜನರಿಂದ ಹಿಡಿದು ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಖಂಡಿಸಿದ್ದಾರೆ.
ಆಲಿಯಾ ಭಟ್ ತಮ್ಮ ಅಫಿಶಿಯಲ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಇದು ಹೃದಯವಿದ್ರಾವಕ ಘಟನೆ. ನನ್ನ ಹೃದಯ ಸಂತ್ರಸ್ತರು ಮತ್ತು ಅವರ ಕುಟುಂಬಗಳ ಬಗ್ಗೆ ನೆನೆದು ಮರುಗುತ್ತಿದೆ. ಅಮಾಯಕರ ವಿರುದ್ಧದ ಹಿಂಸಾಚಾರ ಮಾನವೀಯತೆಯ ಮೂಲವನ್ನು ಅಲುಗಾಡಿಸಿದೆ" ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಘಟನೆಯನ್ನು ಖಂಡಿಸಿದ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ, "ವಿಧ್ವಂಸ. ಮುಗ್ಧ ಯಾತ್ರಿಕರ ಮೇಲಿನ ಈ ಹೇಯ ಕೃತ್ಯ ಅತ್ಯಂತ ಭಯಾನಕವಾಗಿದೆ. ನಾಶಕ್ಕೆ ನಾಗರಿಕರು ಮತ್ತು ಮಕ್ಕಳು ಏಕೆ? ಪ್ರಪಂಚದಾದ್ಯಂತ ನಾವು ನೋಡುತ್ತಿರುವ ದ್ವೇಷವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವಾಗಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಇದು ಹೇಡಿತನದ ಕೃತ್ಯ': ಜಮ್ಮು ಕಾಶ್ಮೀರ ಉಗ್ರ ದಾಳಿಗೆ ಬಾಲಿವುಡ್ ನಟ, ನಟಿಯರ ಖಂಡನೆ - BOLLYWOOD CELEBS CONDOLENCE
ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ವಿಭಾಗದಲ್ಲಿ ರಿಯಾಸಿ ಭಯೋತ್ಪಾದಕ ದಾಳಿಯ ವರದಿಯನ್ನು ಬ್ರೋಕನ್ ಹಾರ್ಟ್ ಎಮೋಜಿಯೊಂದಿಗೆ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ನಟಿ ಹೀನಾ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ, "ಘಲತ್ ಹುವಾ, ಬಹುತ್ ಘಲತ್ (ದೊಡ್ಡ ತಪ್ಪಾಗಿದೆ). ಮಾನವೀಯತೆಯ ಶತ್ರು ಭಯೋತ್ಪಾದನೆ ಜಗತ್ತಿನ ಎಲ್ಲೆಡೆ ಇದೆ. ಶಾಂತಿ, ಪ್ರಾರ್ಥನೆ, ಪ್ರೀತಿ" ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ನಟರಾದ ಆಯುಷ್ಮಾನ್ ಖುರಾನಾ ದಾಳಿಯನ್ನು "ವಿನಾಶಕಾರಿ" ಎಂದು ತಿಳಿಸಿದರೆ, ವರುಣ್ ಧವನ್ "ಹೇಡಿಗಳ ಭಯೋತ್ಪಾದಕ ದಾಳಿ" ಎಂದು ತಿಳಿಸಿ ದಾಳಿಯನ್ನು ಖಂಡಿಸಿದ್ದಾರೆ.
ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ, "ರಿಯಾಸಿಯಲ್ಲಿ ನಡೆದ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗಾಗಿ ನನ್ನ ಪ್ರಾರ್ಥನೆ ಇದೆ. ಈ ಭಯೋತ್ಪಾದಕ ಕೃತ್ಯದಲ್ಲಿ ಅಮಾಯಕ ಜೀವಗಳು ಕೊನೆಯುಸಿರೆಳೆದಿರುವುದು ತೀವ್ರ ನೋವುಂಟುಮಾಡಿದೆ. ಓಂ ಶಾಂತಿ" ಎಂದು ಬರೆದುಕೊಂಡಿದ್ದಾರೆ.
ತಮನ್ನಾ ಭಾಟಿಯಾ ಅವರ ಪೋಸ್ಟ್ನಲ್ಲಿ, "ರಿಯಾಸಿ ಘಟನೆಯಿಂದ ಬಹಳ ದುಃಖವಾಗಿದೆ. ಅಮಾಯಕ ಜೀವಗಳ ಬಲಿಯನ್ನು ಎಂದಿಗೂ ಸಮರ್ಥಿಸಲು ಸಾಧ್ಯವಿಲ್ಲ. ನನ್ನ ಪ್ರಾರ್ಥನೆ ಸಂತ್ರಸ್ತರೊಂದಿಗೆ" ಎಂದು ಬರೆದುಕೊಂಡಿದ್ದಾರೆ.