ಉಪೇಂದ್ರ, ಚಾಂದಿನಿ, ರೂಪಾ ಅಯ್ಯರ್, ಸುಚಿತ್ರಾ, ಬಿರಾದಾರ್, ಮಾಲತಿ ನಟನೆಯ ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ 'ಎ' ರೀ ರಿಲೀಸ್ ಆಗಿದ್ದು, ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ. 28 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರ ಮತ್ತೊಮ್ಮೆ ಕಳೆದ ವಾರ ಮರು ಬಿಡುಗಡೆಯಾಗಿದೆ. ಈ ಚಿತ್ರವನ್ನ ಮತ್ತೆ ಬಿಗ್ ಸ್ಕ್ರೀನ್ನಲ್ಲಿ ನೋಡಿ ಕಣ್ತುಂಬಿಕೊಂಡ ಸಿನಿ ಪ್ರೇಮಿಗಳು ದಿಲ್ ಖುಷ್ ಆಗಿದ್ದಾರೆ. ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಈ ಚಿತ್ರದ ನಾಯಕ ಚಾಂದನಿ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಹೌದು, ಇತ್ತೀಚೆಗೆ ಚಿತ್ರದ ಮರು ಬಿಡುಗಡೆಯ ಸಂತೋಷ ಕೂಟದಲ್ಲಿ ನಟಿ ಚಾಂದನಿ ಭಾಗಿಯಾಗಿದ್ದು, ‘ಎ’ ಚಿತ್ರದ ಮುಂದುವರೆದ ಭಾಗ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. 'ಎ' ಚಿತ್ರ ಬಿಡುಗಡೆ ಆದ ಸಂದರ್ಭದಲ್ಲಿ ಇಡೀ ದೇಶದಲ್ಲಿಯೇ ಸಂಚಲನ ಮೂಡಿಸಿತ್ತು. ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ‘ಎ’ ಚಿತ್ರದ ರೀಮೇಕ್ ಮಾಡಬೇಕು ಎಂಬ ಆಸೆ ಇತ್ತು. 'ಓಂ ಶಾಂತಿ ಓಂ' ಚಿತ್ರ ನೋಡಿದರೆ, ಅದರಲ್ಲಿ 'ಎ' ಚಿತ್ರದ ಛಾಯೆ ನೋಡಬಹುದು. ಹಾಗಾಗಿ, ಆ ಚಿತ್ರವನ್ನು ಇನ್ನಷ್ಟು ಮುಂದುವರೆಸುವುದು ನನ್ನ ಆಸೆ ಆಗಿದೆ.
ನಾವು 'ಎ' ಚಿತ್ರದ ಪಾರ್ಟ್ 2 ಮಾಡುವುದಕ್ಕೆ ತೀರ್ಮಾನ ಮಾಡಿದ್ದೇವೆ. ಚಿತ್ರಕಥೆಯನ್ನು ನಾನೇ ಬರದಿದ್ದೇನೆ. 'ಎ' ಚಿತ್ರದ ನಿರ್ಮಾಪಕ ಮಂಜು, ಗುರುಕಿರಣ್ ಮುಂತಾದವರು ಈ ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ನಾವೆಲ್ಲರೂ ಹೋಗಿ ಉಪೇಂದ್ರ ಅವರನ್ನು ಈ ಚಿತ್ರವನ್ನು ನಿರ್ದೇಶಿಸುವುದಕ್ಕೆ ಮತ್ತು ಚಿತ್ರದಲ್ಲಿ ನಾಯಕರಾಗಿ ನಟಿಸುವಂತೆ ಮನವಿ ಮಾಡುತ್ತೇವೆ. ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಿನಿಮಾ ಮಾಡಬೇಕು ಎಂದು ನಾವು ತೀರ್ಮಾನ ಮಾಡಿದ್ದೇವೆ. ಕಥೆ, ಚಿತ್ರಕಥೆ ಎರಡೂ ತಯಾರಾಗಿದೆ. ಸದ್ಯದಲ್ಲೇ ಚಿತ್ರ ಶುರುವಾಗಲಿದೆ. ಈ ಚಿತ್ರತಂಡದ ಹಿಂದೆ ನಾನು ಇರುತ್ತೇನೆ. ಆ ಚಿತ್ರತಂಡದಲ್ಲಿ ಯಾರೆಲ್ಲಾ ಇರ್ತಾರೆ ಅನ್ನೋದನ್ನ ಸದ್ಯದಲ್ಲೇ ತಿಳಿಸುತ್ತೇವೆ ಎಂದಿದ್ದಾರೆ.
ಇನ್ನು, ಉಪೇಂದ್ರ ಅವರು ಕನ್ನಡ ಚಿತ್ರರಂಗದ ಹೆಮ್ಮೆ. ಅವರ ಬಗ್ಗೆ ನನಗೆ ಬಹಳ ಗೌರವ ಇದೆ. ನಾನು ಕನ್ನಡವಲ್ಲದೇ ಬೇರೆ ಭಾಷೆಗಳಲ್ಲೂ ನಟನೆ ಮಾಡಿ ಬಂದಿದ್ದೇನೆ. ಉಪೇಂದ್ರ ಅವರು ಬರೀ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ಇಡೀ ಭಾರತದ ಹೆಮ್ಮೆ. 'ಎ' ಚಿತ್ರವು ಜಪಾನ್‍ನಲ್ಲೂ ಬಿಡುಗಡೆಯಾಗಿತ್ತು. ಉಪೇಂದ್ರ ಅವರು ದೂರದೃಷ್ಟಿ ಇಟ್ಟುಕೊಂಡು ನಿರ್ದೇಶನ ಮಾಡ್ತಾರೆ. ಇನ್ನು ಉಪೇಂದ್ರ ಅವರ ಮುಂಬರುವ ಚಿತ್ರ ಇಡೀ ದೇಶದಲ್ಲಿ ಸದ್ದು ಮಾಡುತ್ತದೆ ಎಂಬ ನಂಬಿಕೆ ಇದೆ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ 'ಎ' ಚಿತ್ರದ ನಿರ್ಮಾಪಕ ಮಂಜುನಾಥ್, ಆ ಚಿತ್ರದ ನೆಗೆಟಿವ್ ಹಾಳಾಗಿದೆ ಎಂದರು. ಪ್ರಸಾದ್ ಲ್ಯಾಬ್‍ನಲ್ಲಿ ಚಿತ್ರದ ನೆಗೆಟಿವ್ ಇತ್ತು. ಸರಿಯಾಗಿ ಸಂರಕ್ಷಣೆ ಮಾಡದೇ, ಚಿತ್ರದ ನೆಗೆಟಿವ್ ಪುಡಿಯಾಗಿತ್ತು. ನನ್ನ ಬೇರೆ ಚಿತ್ರಗಳ ನೆಗೆಟಿವ್‍ಗಳನ್ನು ಸಂರಕ್ಷಿಸುವುದಕ್ಕೆ ಸಾಧ್ಯವಾಯಿತು. ಆದರೆ, ‘ಎ’ ಚಿತ್ರದ ನೆಗೆಟಿವ್ ನಮ್ಮ ಬಳಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ 'ಎ' ಚಿತ್ರದ ಪಾರ್ಟ್ 2 ಮಾಡಲು ನಟಿ ಚಾಂದನಿ ಕೈ ಹಾಕಿರೋದು ಹೆಮ್ಮೆಯ ವಿಷ್ಯ ಎಂದು ಖುಷಿ ವ್ಯಕ್ತಪಡಿಸಿದರು.
ಇದನ್ನೂ ಓದಿ: 26 ವರ್ಷಗಳ ಬಳಿಕ ನಾಳೆ 'A' ರೀ ರಿಲೀಸ್: ಇದು ನನ್ನ ಬದುಕು ಬದಲಿಸಿದ ಸಿನಿಮಾ ಎಂದ ನಟಿ ಚಾಂದಿನಿ - A Movie Re Release