ನವದೆಹಲಿ: ಐಟಿ ದಿಗ್ಗಜ ವಿಪ್ರೋದಲ್ಲಿ ಹಿರಿಯ ಅಧಿಕಾರಿಗಳ ರಾಜೀನಾಮೆ ಪರ್ವ ಮುಂದುವರೆದಿದೆ. ಸದ್ಯ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಶುಭಾ ತಟವರ್ತಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ತಟವರ್ತಿ ಏಪ್ರಿಲ್ 2021ರಲ್ಲಿ ಅಂದಿನ ಸಿಇಒ ಮತ್ತು ಎಂಡಿ ಥಿಯೆರ್ರಿ ಡೆಲಾಪೋರ್ಟೆ ಅವರ ಅಡಿಯಲ್ಲಿ ತಂತ್ರಜ್ಞಾನ ಮುಖ್ಯಸ್ಥರಾಗಿ ವಿಪ್ರೋಗೆ ಸೇರಿದ್ದರು. ತಮ್ಮ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ, ಅವರು ವಿಪ್ರೋದ ಜೆನ್ ಎಐ ಯೋಜನೆಗಳನ್ನು ಮುನ್ನಡೆಸಿದ್ದು, ವಿಪ್ರೋ ಎಐ 360 ಅನ್ನು ಪರಿಚಯಿಸಿದ್ದರು.
"ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಶುಭಾ ತಟವರ್ತಿ ಅವರು ಬೇರೆ ಅವಕಾಶಗಳನ್ನು ಅರಸುವ ನಿಟ್ಟಿನಲ್ಲಿ ಕಂಪನಿಯ ಸೇವೆಗಳಿಗೆ ರಾಜೀನಾಮೆ ನೀಡಿದ್ದಾರೆ" ಎಂದು ಕಂಪನಿಯು ನಿಯಂತ್ರಕ ಫೈಲಿಂಗ್ನಲ್ಲಿ ಸೋಮವಾರ ತಿಳಿಸಿದೆ.
"ನಾನು ಆಗಸ್ಟ್ 16ರಿಂದ ಜಾರಿಗೆ ಬರುವಂತೆ ವಿಪ್ರೋದ ಸಿಟಿಒ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ನಿಮಗೆ ಶುಭವಾಗಲಿ" ಎಂದು ತಟವರ್ತಿ ವಿಪ್ರೋ ಸಿಇಒ ಶ್ರೀನಿ ಪಲ್ಲಿಯಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ವಿಪ್ರೋಗೆ ಸೇರುವ ಮೊದಲು, ಶುಭಾ ಅವರು ವಾಲ್ ಮಾರ್ಟ್ ಮತ್ತು ಪೇ ಪಾಲ್ನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ವುಮೆನ್ ಟೆಕ್ ನೆಟ್ ವರ್ಕ್ನ "ಟಾಪ್ 100 ಎಕ್ಸಿಕ್ಯೂಟಿವ್ ವುಮೆನ್ ಇನ್ ಟೆಕ್ ಟು ವಾಚ್" ಪಟ್ಟಿಯಲ್ಲಿ ಇವರು ಸ್ಥಾನ ಪಡೆದಿದ್ದಾರೆ.
ಮುಖ್ಯ ವಿತರಣಾ ಅಧಿಕಾರಿ ಅಜಿತ್ ಮಹಾಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತ್ ಚೌಧರಿ ಮತ್ತು ಎಪಿಎಂಇಎ (ಏಷ್ಯಾ ಪೆಸಿಫಿಕ್, ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ) ಸಿಇಒ ಅನಿಸ್ ಚೆಂಚಾ ಅವರು ಮೇ 2024 ರಲ್ಲಿ ಕಂಪನಿಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಡೆಲಾಪೋರ್ಟೆ ಅವರ ರಾಜೀನಾಮೆಯ ನಂತರ ಕಳೆದ 4 ತಿಂಗಳಲ್ಲಿ ಇದು ನಾಲ್ಕನೇ ಉನ್ನತ ಅಧಿಕಾರಿಯೊಬ್ಬರ ರಾಜೀನಾಮೆಯಾಗಿದೆ. ಬಹುತೇಕ ಕಾರ್ಯನಿರ್ವಾಹಕ ಹುದ್ದೆಗಳಲ್ಲಿರುವ ಅಧಿಕಾರಿಗಳು ಕಂಪನಿಗೆ ರಾಜೀನಾಮೆ ನೀಡಿದ್ದು ಗಮನಾರ್ಹ. ಇವರೆಲ್ಲರೂ ಈ ಹಿಂದೆ ಡೆಲಾಪೊರ್ಟೆ ಅವರು ಸಿಇಒ ಆಗಿದ್ದಾಗ ಕಂಪನಿಗೆ ಸೇರಿದವರಾಗಿದ್ದಾರೆ.
ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ವಿಪ್ರೋ ಕಾರ್ಯಾಚರಣೆಗಳಿಂದ ತನ್ನ ಏಕೀಕೃತ ಆದಾಯದಲ್ಲಿ ಶೇಕಡಾ 3.8ರಷ್ಟು ಕುಸಿತ ಕಂಡು 21,963.8 ಕೋಟಿ ರೂ.ಗೆ ತಲುಪಿದೆ. ಜೂನ್ ತ್ರೈಮಾಸಿಕದಲ್ಲಿ ಏಕೀಕೃತ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 4.6 ರಷ್ಟು ಏರಿಕೆ ಕಂಡು 3,003.2 ಕೋಟಿ ರೂ. ಆಗಿದೆ. ಮಂಗಳವಾರ ಮಧ್ಯಾಹ್ನದ ವಹಿವಾಟಿನಲ್ಲಿ ವಿಪ್ರೋ ಷೇರುಗಳು ಶೇಕಡಾ 0.04 ರಷ್ಟು ಏರಿಕೆಯಾಗಿ 489.15 ರೂ.ಗೆ ತಲುಪಿದೆ.
ಇದನ್ನೂ ಓದಿ: ಬ್ರಿಟಿಷ್ ಟೆಲಿಕಾಮ್ನ ಶೇ 24.5ರಷ್ಟು ಪಾಲು ಪಡೆಯಲಿದೆ ಭಾರ್ತಿ ಎಂಟರ್ಪ್ರೈಸಸ್: $4 ಬಿಲಿಯನ್ ಒಪ್ಪಂದ - Bharti Enterprises