ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ತಯಾರಿಕಾ ಘಟಕ ಸ್ಥಾಪಿಸಲು ಸ್ಥಳ ಹುಡುಕಾಟಕ್ಕಾಗಿ ಇದೇ ತಿಂಗಳು ಟೆಸ್ಲಾ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲಿದೆ ಎಂದು ವರದಿಗಳು ತಿಳಿಸಿವೆ. ಜಾಗತಿಕ ಉದ್ಯಮಗಳಿಂದ ಇವಿ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ (ಇವಿ) ನೀತಿಗೆ ಅನುಮೋದನೆ ನೀಡಿತ್ತು. ಇದರ ಭಾಗವಾಗಿ ಈಗ ಟೆಸ್ಲಾ ಭಾರತದಲ್ಲಿ 2 ರಿಂದ 3 ಬಿಲಿಯನ್ ಡಾಲರ್ ವೆಚ್ಚದಲ್ಲಿ ವಾಹನ ತಯಾರಿಕಾ ಘಟಕ ಸ್ಥಾಪಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಮೂಲಗಳನ್ನು ಉಲ್ಲೇಖಿಸಿ ದಿ ಫೈನಾನ್ಷಿಯಲ್ ಟೈಮ್ಸ್ ಬುಧವಾರ ವರದಿ ಮಾಡಿದ ಪ್ರಕಾರ, ಎಲೋನ್ ಮಸ್ಕ್ ನೇತೃತ್ವದ ಕಂಪನಿ ಘಟಕ ಸ್ಥಾಪನೆಗಾಗಿ ಸ್ಥಳಗಳನ್ನು ಅಧ್ಯಯನ ಮಾಡಲು ಏಪ್ರಿಲ್ ಅಂತ್ಯದ ವೇಳೆಗೆ ಅಮೆರಿಕದಿಂದ ತಂಡವನ್ನು ಕಳುಹಿಸಲಿದೆ. ಈಗಾಗಲೇ ಇವಿ ಮೂಲಸೌಕರ್ಯಗಳು ಮತ್ತು ಇಲ್ಲಿ ತಯಾರಾದ ಕಾರುಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಬಂದರುಗಳನ್ನು ಹೊಂದಿರುವ ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳತ್ತ ಟೆಸ್ಲಾ ತಂಡ ಹೆಚ್ಚು ಗಮನಹರಿಸಲಿದೆ ಎಂದು ವರದಿಯಾಗಿದೆ. ಈ ವರದಿಯ ಬಗ್ಗೆ ಟೆಸ್ಲಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೊಸ ಇವಿ ನೀತಿಯ ಪ್ರಕಾರ ಸರ್ಕಾರವು ಕೆಲ ಷರತ್ತುಗಳೊಂದಿಗೆ ಕಸ್ಟಮ್ಸ್ ಸುಂಕವನ್ನು ಶೇಕಡಾ 15 ಕ್ಕೆ ಇಳಿಸಿದೆ. ಟೆಸ್ಲಾ ಭಾರತಕ್ಕೆ ಪ್ರವೇಶಿಸಲು ಈ ನೀತಿಯು ಸಹಕಾರಿಯಾಗಲಿದೆ. ಹೊಸ ಇವಿ ಯೋಜನೆಯಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕನಿಷ್ಠ 4,150 ಕೋಟಿ ರೂ.ಗಳ (ಸುಮಾರು 500 ಮಿಲಿಯನ್ ಡಾಲರ್) ಹೂಡಿಕೆಯ ಅಗತ್ಯವಿದೆ ಎಂದು ಸರ್ಕಾರ ಉಲ್ಲೇಖಿಸಿದೆ. ಘಟಕ ಸ್ಥಾಪನೆಯಾದ ಮೂರು ವರ್ಷಗಳಲ್ಲಿ ಉತ್ಪಾದನೆ ಪ್ರಾರಂಭಿಸಿ ಅದರ ಮುಂದಿನ ಮೂರು ವರ್ಷಗಳಲ್ಲಿ ಶೇಕಡಾ 25 ರಷ್ಟು ಡಿವಿಎ (ದೇಶೀಯ ಮೌಲ್ಯವರ್ಧನೆ) ಮತ್ತು ಗರಿಷ್ಠ 5 ವರ್ಷಗಳಲ್ಲಿ ಶೇಕಡಾ 50 ರಷ್ಟು ಡಿವಿಎ ತಲುಪಬೇಕು ಎಂಬ ಷರತ್ತು ವಿಧಿಸಲಾಗಿದೆ.
ಕಳೆದ ವರ್ಷ ಪ್ರಧಾನಿ ಮೋದಿ ಅಮೆರಿಕದಲ್ಲಿ ಮಸ್ಕ್ ಅವರನ್ನು ಭೇಟಿಯಾಗಿದ್ದರು. ವಿವಿಧ ಕ್ಷೇತ್ರಗಳ ತಂತ್ರಜ್ಞಾನಗಳು ಸುಲಭವಾಗಿ ಜನರಿಗೆ ಕೈಗೆಟುಕುವಂತೆ ಮಾಡುವ ಮಸ್ಕ್ ಅವರ ಪ್ರಯತ್ನಗಳನ್ನು ಮೋದಿ ಈ ಸಂದರ್ಭದಲ್ಲಿ ಶ್ಲಾಘಿಸಿದ್ದರು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ವೇಗವಾಗಿ ವಿಸ್ತರಿಸುತ್ತಿರುವ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ಮೋದಿ ಮಸ್ಕ್ ಅವರನ್ನು ಆಹ್ವಾನಿಸಿದ್ದರು.
ಇದನ್ನೂ ಓದಿ : ಯುಪಿಐ ವಹಿವಾಟುಗಳ ಸಂಖ್ಯೆ ಶೇ 56ರಷ್ಟು ಹೆಚ್ಚಳ: ಕಾರ್ಡ್ಗಳ ಸಂಖ್ಯೆಯೂ ಏರಿಕೆ - UPI TRANSACTIONS