ಮುಂಬೈ: ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ50 ಇಂದಿನ ವಹಿವಾಟಿನಲ್ಲಿ ದಿನದ ಕನಿಷ್ಠದಿಂದ ಚೇತರಿಸಿಕೊಂಡು, ಐಟಿ ಮತ್ತು ಆಯ್ದ ಬ್ಯಾಂಕಿಂಗ್ ಷೇರುಗಳಲ್ಲಿನ ಇಳಿಕೆಯಿಂದ ಅಲ್ಪ ನಷ್ಟದೊಂದಿಗೆ ಸ್ಥಿರಗೊಂಡವು.
ವಹಿವಾಟಿನ ಒಂದು ಹಂತದಲ್ಲಿ ಬಿಎಸ್ಇ ಸೆನ್ಸೆಕ್ಸ್ 77,561 ಕ್ಕೆ ಕುಸಿದಿತ್ತು. ಆದಾಗ್ಯೂ ಅದು ಒಂದಿಷ್ಟು ನಷ್ಟವನ್ನು ಅಳಿಸಿ ಇಂಟ್ರಾ-ಡೇ ವ್ಯವಹಾರಗಳಲ್ಲಿ ಗರಿಷ್ಠ 78,248 ಕ್ಕೆ ಏರಿಕೆಯಾಯಿತು. ಸೆನ್ಸೆಕ್ಸ್ ಅಂತಿಮವಾಗಿ 78,139 ರಲ್ಲಿ ಕೊನೆಗೊಂಡಿತು. ಈ ಮೂಲಕ 2024 ರ ಕೊನೆಯ ವ್ಯಾಪಾರ ದಿನದಂದು ಸೆನ್ಸೆಕ್ಸ್ ಶೇಕಡಾ 0.1 ಅಥವಾ 109 ಪಾಯಿಂಟ್ಗಳ ಕುಸಿತದೊಂದಿಗೆ ಕೊನೆಗೊಂಡಿದೆ.
ಹಾಗೆಯೇ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ದಿನದ ಕನಿಷ್ಠ 23,460 ರಿಂದ ಚೇತರಿಸಿಕೊಂಡು 23,690 ಕ್ಕೆ ಏರಿಕೆಯಾಗಿತ್ತು. ನಿಫ್ಟಿ 50 ಅಂತಿಮವಾಗಿ 23,645 ರಲ್ಲಿ ಕೊನೆಗೊಂಡಿತು.
ಕುಸಿತ ತಂಡ ಷೇರುಗಳು: ಸೆನ್ಸೆಕ್ಸ್ನಲ್ಲಿ ಇನ್ಫೋಸಿಸ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕುಸಿತ ಕಂಡ ಪ್ರಮುಖ ಷೇರುಗಳಾಗಿವೆ. ಟೆಕ್ ಮಹೀಂದ್ರಾ ಶೇಕಡಾ 2.5 ರಷ್ಟು ಕುಸಿದಿದೆ. ಜೊಮಾಟೊ, ಟಿಸಿಎಸ್, ಇನ್ಫೋಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ತಲಾ ಶೇ 1 ರಿಂದ 2 ರಷ್ಟು ಕುಸಿದವು.
ಲಾಭ ಗಳಿಸಿದ ಷೇರುಗಳು: ಮತ್ತೊಂದೆಡೆ ಕೋಟಕ್ ಬ್ಯಾಂಕ್ ಶೇಕಡಾ 2.5 ರಷ್ಟು ಲಾಭ ಗಳಿಸಿದೆ. ಐಟಿಸಿ, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ಲಾಭ ಕಂಡ ಇತರ ಪ್ರಮುಖ ಷೇರುಗಳಾಗಿವೆ.
ವಿಶಾಲ ಸೂಚ್ಯಂಕಗಳಲ್ಲಿ ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕವು 21,127 ರಲ್ಲಿ ಕೊನೆಗೊಂಡರೆ, ಸ್ಮಾಲ್ ಕ್ಯಾಪ್250 ಶೇಕಡಾ 0.6 ರಷ್ಟು ಏರಿಕೆಯಾಗಿ 17,744 ಕ್ಕೆ ತಲುಪಿದೆ.
8 ಸಾವಿರಕ್ಕೂ ಅಧಿಕ ಪಾಯಿಂಟ್ ಏರಿಕೆ: ಒಟ್ಟಾರೆಯಾಗಿ ಬಿಎಸ್ಇ ಸೆನ್ಸೆಕ್ಸ್ 2024 ರ ಕ್ಯಾಲೆಂಡರ್ ವರ್ಷವನ್ನು ಶೇಕಡಾ 8.2 ಅಥವಾ 8,809 ಪಾಯಿಂಟ್ಗಳ ದೊಡ್ಡ ಲಾಭದೊಂದಿಗೆ ಕೊನೆಗೊಳಿಸಿದೆ. ಈ ವರ್ಷದಲ್ಲಿ ಸೆನ್ಸೆಕ್ಸ್ 85,978 ಗೆ ಏರಿಕೆಯಾಗಿದ್ದು ದಾಖಲೆಯಾಗಿದೆ. ಎನ್ಎಸ್ಇ ನಿಫ್ಟಿ50 2024 ರಲ್ಲಿ ಶೇಕಡಾ 8.8 ರಷ್ಟು ಏರಿಕೆಯಾಗಿದೆ. ಬೆಂಚ್ ಮಾರ್ಕ್ ಸೂಚ್ಯಂಕಗಳು ಸತತ 9 ನೇ ಕ್ಯಾಲೆಂಡರ್ ವರ್ಷದಲ್ಲಿ ಏರಿಕೆ ಕಂಡಿವೆ. ಈ 9 ವರ್ಷಗಳ ಅವಧಿಯಲ್ಲಿ ಸೂಚ್ಯಂಕಗಳು ಶೇಕಡಾ 200 ರಷ್ಟು ಏರಿಕೆಯಾಗಿವೆ. ನಾಳೆ ಹೊಸ ವರ್ಷದ ದಿನದಂದು ಮಾರುಕಟ್ಟೆ ಸಾಮಾನ್ಯ ವಹಿವಾಟಿಗೆ ತೆರೆದಿರುತ್ತದೆ.
ಇದನ್ನೂ ಓದಿ: 12 ವರ್ಷಗಳ ಕನಿಷ್ಠ ಮಟ್ಟಕ್ಕಿಳಿದ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಅನುಪಾತ; RBI ವರದಿ - GROSS NPA