ಮುಂಬೈ: ಗೃಹ ನಿರ್ಮಾಣಕ್ಕೆ ಸಾಲ ಸೌಲಭ್ಯ ನೀಡುವ ಹೌಸಿಂಗ್ ಫೈನಾನ್ಸ್ ಕಂಪನಿಗಳಿಗೆ (ಎಚ್ಎಫ್ಸಿ) ಆರ್ಬಿಐ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್ಬಿಎಫ್ಸಿ) ಅನ್ವಯವಾಗುವ ಕಠಿಣ ನಿಯಮಗಳನ್ನೇ ಹಂತ ಹಂತವಾಗಿ ಎಚ್ಎಫ್ಸಿಗಳಿಗೆ ಅನ್ವಯಿಸುವ ನಿಟ್ಟಿನಲ್ಲಿ ಆರ್ಬಿಐ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಪರಿಷ್ಕೃತ ನಿಯಮಗಳು ಜನವರಿ 1, 2025ರಿಂದ ಅನ್ವಯವಾಗುತ್ತವೆ ಮತ್ತು ಎಚ್ಎಫ್ಸಿ ಮತ್ತು ಎನ್ಬಿಎಫ್ಸಿಗಳ ನಿಯಮಗಳನ್ನು ಮತ್ತಷ್ಟು ಏಕರೂಪಗೊಳಿಸುತ್ತವೆ ಎಂದು ಆರ್ಬಿಐ ತಿಳಿಸಿದೆ.
ಪ್ರಸ್ತುತ, ಎಚ್ಎಫ್ಸಿಗಳು ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸುವುದು ಎನ್ಬಿಎಫ್ಸಿಗಳಿಗೆ ಹೋಲಿಸಿದರೆ ಹೆಚ್ಚು ಸಡಿಲವಾದ ವಿವೇಚನಾಯುಕ್ತ ಮಾನದಂಡಗಳಿಗೆ ಒಳಪಟ್ಟಿದೆ ಎಂದು ಆರ್ಬಿಐ ಹೇಳಿದೆ. ಆದರೆ ಠೇವಣಿ ಸ್ವೀಕಾರಕ್ಕೆ ಸಂಬಂಧಿಸಿದ ನಿಯಮಗಳು ಎಲ್ಲಾ ವರ್ಗದ ಎನ್ಬಿಎಫ್ಸಿಗಳಲ್ಲಿ ಒಂದೇ ರೀತಿಯಾಗಿರುವುದರಿಂದ ಅದೇ ನಿಯಮಾವಳಿಗಳನ್ನು ಎಚ್ಎಫ್ಸಿಗಳಿಗೆ ಅನ್ವಯಿಸಲು ನಿರ್ಧರಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಎಚ್ಎಫ್ಸಿಗಳು ತಮ್ಮಲ್ಲಿ ಕಾಯ್ದಿಟ್ಟುಕೊಳ್ಳಬೇಕಾದ ಕನಿಷ್ಠ ಶೇಕಡಾವಾರು ಹಣಕಾಸು ಸ್ವತ್ತುಗಳ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಎಚ್ಎಫ್ಸಿಗಳು ಹೊಂದಿರಬೇಕಾದ ಸಾರ್ವಜನಿಕ ಠೇವಣಿಗಳ ಶೇಕಡಾ 1ರಷ್ಟು ನಿರ್ಬಂಧವಿಲ್ಲದ ಅನುಮೋದಿತ ಸೆಕ್ಯುರಿಟಿಗಳ (Unencumbered Approved Securities) ಮಿತಿಯನ್ನು ಶೇಕಡಾ 6.5ರಿಂದ ಶೇಕಡಾ 8 ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ, ಒಟ್ಟು ನಗದು ಸ್ವತ್ತುಗಳು ಮತ್ತು ನಿರ್ಬಂಧವಿಲ್ಲದ ಅನುಮೋದಿತ ಸೆಕ್ಯುರಿಟಿಗಳ ಮಿತಿಯನ್ನು ಸಾರ್ವಜನಿಕ ಠೇವಣಿಗಳ ಶೇಕಡಾ 13ರಿಂದ 14ಕ್ಕೆ ಹೆಚ್ಚಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಮಾಸ್ಟರ್ ಡೈರೆಕ್ಷನ್ - ಬ್ಯಾಂಕೇತರ ಹಣಕಾಸು ಕಂಪನಿ - ಹೌಸಿಂಗ್ ಫೈನಾನ್ಸ್ ಕಂಪನಿ (ರಿಸರ್ವ್ ಬ್ಯಾಂಕ್) ನಿರ್ದೇಶನಗಳು, 2021ರ ಪ್ಯಾರಾ 42.1ರ ಪ್ರಕಾರ ಎಚ್ಎಫ್ಸಿಗಳು ಯಾವುದೇ ಸಮಯದಲ್ಲಿ ಸ್ವೀಕರಿಸುವ ಸಾರ್ವಜನಿಕ ಠೇವಣಿಗಳಿಗೆ ಸಂಪೂರ್ಣ ಆಸ್ತಿ ರಕ್ಷಣೆ ಲಭ್ಯವಿದೆ. ಇನ್ನು ಮುಂದೆ, ಸಾರ್ವಜನಿಕ ಠೇವಣಿಗಳ ಕಾರಣದಿಂದಾಗಿ ಮೇಲಿನ ಆಸ್ತಿ ಕವರ್ ಹೊಣೆಗಾರಿಕೆಗಿಂತ ಕಡಿಮೆಯಾದರೆ ನ್ಯಾಷನಲ್ ಹೌಸಿಂಗ್ ಬ್ಯಾಂಕ್ (ಎನ್ಎಚ್ಬಿ) ಗೆ ಆ ಬಗ್ಗೆ ಮಾಹಿತಿ ನೀಡುವುದು ಸಂಬಂಧಪಟ್ಟ ಎಚ್ಎಫ್ಸಿಯ ಕರ್ತವ್ಯವಾಗಿರುತ್ತದೆ.
ಪರಿಷ್ಕೃತ ನಿಯಮಗಳ ಪ್ರಕಾರ, ಸಾರ್ವಜನಿಕ ಠೇವಣಿಗಳನ್ನು ಸ್ವೀಕರಿಸಲು ಅರ್ಹರಾಗಲು, ಠೇವಣಿ ತೆಗೆದುಕೊಳ್ಳುವ ಎಚ್ಎಪ್ಸಿಗಳು ಮಾಸ್ಟರ್ ಡೈರೆಕ್ಷನ್ - ಬ್ಯಾಂಕೇತರ ಹಣಕಾಸು ಕಂಪನಿ - ಹೌಸಿಂಗ್ ಫೈನಾನ್ಸ್ ಕಂಪನಿ (ರಿಸರ್ವ್ ಬ್ಯಾಂಕ್) ನಿರ್ದೇಶನಗಳು, 2021ರ ಪ್ಯಾರಾ 25ರಲ್ಲಿ ನಿರ್ದಿಷ್ಟಪಡಿಸಿದಂತೆ ವರ್ಷಕ್ಕೆ ಒಮ್ಮೆಯಾದರೂ ಕನಿಷ್ಠ ಹೂಡಿಕೆ ದರ್ಜೆಯ ಕ್ರೆಡಿಟ್ ರೇಟಿಂಗ್ ಅನ್ನು ಪಡೆಯಬೇಕಾಗುತ್ತದೆ.
ಒಂದೊಮ್ಮೆ ಕ್ರೆಡಿಟ್ ರೇಟಿಂಗ್ ಕನಿಷ್ಠ ಹೂಡಿಕೆ ದರ್ಜೆಗಿಂತ ಕಡಿಮೆಯಿದ್ದರೆ, ಅಂತಹ ಎಚ್ಎಫ್ಸಿಗಳು ಹೂಡಿಕೆ ದರ್ಜೆಯ ಕ್ರೆಡಿಟ್ ರೇಟಿಂಗ್ ಪಡೆಯುವವರೆಗೆ ಅಸ್ತಿತ್ವದಲ್ಲಿರುವ ಠೇವಣಿಗಳನ್ನು ನವೀಕರಿಸುವಂತಿಲ್ಲ ಅಥವಾ ಹೊಸ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ. ಕನಿಷ್ಠ ಹೂಡಿಕೆ ದರ್ಜೆಯ ಕ್ರೆಡಿಟ್ ರೇಟಿಂಗ್ ಅನ್ನು ಅನುಸರಿಸುವ, ಠೇವಣಿ ತೆಗೆದುಕೊಳ್ಳುವ ಎಚ್ಎಫ್ಸಿಗಳು ಹೊಂದಿರುವ ಸಾರ್ವಜನಿಕ ಠೇವಣಿಗಳ ಪ್ರಮಾಣದ ಮಿತಿಯನ್ನು ನಿವ್ವಳ ಮಾಲೀಕತ್ವದ ನಿಧಿಯ 3 ಪಟ್ಟಿನಿಂದ 1.5 ಪಟ್ಟಿಗೆ ಇಳಿಸಲಾಗುವುದು.
ಇದನ್ನೂ ಓದಿ: ಭಾರತೀಯ ಶಾಕಾಹಾರಿ ಊಟಕ್ಕೆ ಬೇಡಿಕೆ: ಪಾಕಿಸ್ತಾನದ ಕರಾಚಿಯಲ್ಲಿ ಹೊಸ ಟ್ರೆಂಡ್ - Indian Food in Karachi